ಬೆಂಗಳೂರು: ಮಾ. ಚಿರಂತ್ ಭಾರಧ್ವಾಜ್ ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಕೇವಲ ಹನ್ನೊಂದು ವರ್ಷಗಳ ಬಾಲಕ ಬಹುಮುಖ ಪ್ರತಿಭಾವಂತ. ಶ್ರೀ ಭೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿರುವ ಚಿರಂತ್ ಗೆ ಬಾಲ್ಯದಿಂದಲೂ ನಾಟಕ-ಸಂಗೀತ ಮತ್ತು ನೃತ್ಯಗಳಲ್ಲಿ ಅಪರಿಮಿತ ಆಸಕ್ತಿ. ಶ್ರೀಮತಿ ಪರಿಮಳ ಅರಳುಮಲ್ಲಿಗೆ ಅವರಲ್ಲಿ ಭರತನಾಟ್ಯವನ್ನು ಕಲಿತಿರುವ ಕೈವಾರದ ಶಿವಪ್ರಸಾದ್ ಶಾಸ್ತ್ರೀ ಮತ್ತು ಉಷಾ ದಂಪತಿಗಳ ಪ್ರೀತಿಯ ಪುತ್ರ. ಸತತ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಇವನು ಬೆಂಗಳೂರಿನ ಕೆ. ಬೃಂದಾ ಅವರಲ್ಲಿ ಹೆಚ್ಚಿನ ತರಬೇತಿ ಪಡೆದು, ತನ್ನ ಭರತನಾಟ್ಯ ನೃತ್ಯ ಪ್ರದರ್ಶನವನ್ನು 29-10-2023ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಕೈವಾರದ ಯೋಗಿ ನಾರಾಯಣ ಆಶ್ರಮದ ಸಭಾಂಗಣದಲ್ಲಿ ಕಲಾರಸಿಕರ ಸಮ್ಮುಖದಲ್ಲಿ ನರ್ತಿಸಲಿದ್ದಾನೆ. ಅತ್ಯುತ್ಸಾಹಿ -ಚಟುವಟಿಕೆಯ ಚಿಲುಮೆಯಾದ ಚಿರಂತನ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೆರಿಸಿಕೊಳ್ಳಲಿದ್ದಾನೆ. ಇವನ ಕಲಾಪ್ರತಿಭೆಯನ್ನು ಸಾಕ್ಷಾತ್ಕರಿಸಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.
ಕೈವಾರದ ಶ್ರೀ ಶಿವಪ್ರಸಾದ್ ಶಾಸ್ತ್ರೀ ಮತ್ತು ಬಿ.ಎಸ್.ಉಷಾ ಅವರ ಪುತ್ರಿ ಆರ್. ಸಿಂಧೂ ಅವರ ಪುತ್ರ ಚಿರಂತ್ ಬಾಲ್ಯದಿಂದಲೂ ತುಂಬಾ ತೀಕ್ಷ್ಣಮತಿ. ದತ್ತುಪುತ್ರನಾದ ಇವನ ಎಲ್ಲ ಕಲಾ ಬೆಳವಣಿಗೆಗೆ ತಾತನವರಿಂದ ಇಂಬು ದೊರೆಯಿತು. ಅನನ್ಯ ನೆನಪಿನ ಶಕ್ತಿ, ವಿಷಯ ಸಂಗ್ರಹ-ಗ್ರಹಣ ಶಕ್ತಿ ಇವನಿಗೆ ದೈವದತ್ತ ವರ. ಒಂದನೆಯ ತರಗತಿಯಲ್ಲಿದ್ದಾಗಲೇ ಅಭಿನಯದಲ್ಲಿ ಆಸಕ್ತಿ. ನಟಿಸಿದ ಪೌರಾಣಿಕ-ಐತಿಹಾಸಿಕ ನಾಟಕಗಳ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಉತ್ತಮಾಂಕಗಳಿಂದ ತೆರ್ಗಡೆಯಾಗಿದ್ದಾನೆ. ಓದಿನಲ್ಲಿ ಚುರುಕಾಗಿರುವ ಚಿರಂತ್ ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಗಳ ಕಲಿಕೆಯಲ್ಲಿ ತೊಡಗಿಕೊಂಡಿರುವುದು ವಿಶೇಷ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದು. ಇವನ ಬಹುಮುಖ ಪ್ರತಿಭೆಯ ಬೆಳವಣಿಗೆಗೆ ಶಾಲೆಯ ಉಪಾಧ್ಯಾಯ ವೃಂದ ಪ್ರೋತ್ಸಾಹ ನೀಡುತ್ತಿರುವುದು ಈ ಪುಟ್ಟ ಬಾಲಕನ ಸುಯೋಗ.
ಶ್ರೀ ಭೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿರುವ ಈ ಹನ್ನೊಂದರ ಬಾಲಕ ಶ್ರೀಕೃಷ್ಣ ದೇವರಾಯ, ಪ್ರಚಂಡ ರಾವಣನ ಪಾತ್ರಗಳ ಉತ್ತಮ ಅಭಿನಯ ನೀಡುವುದರಲ್ಲಿ ನಿಷ್ಣಾತ- ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಿಂತಾಮಣಿ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಮುಂತಾದ ಕಡೆ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ನಾಟಕಾಭಿನಯಕ್ಕಾಗಿ ಮೆಚ್ಚುಗೆ ಪಡೆದಿದ್ದಾನೆ. ಜೊತೆಗೆ ಸಿನಿಮಾ ಹಾಡುಗಳಿಗೆ ನೃತ್ಯಮಾಡುವ ಇವನು ಕರ್ನಾಟಕ ಸಂಗೀತ, ಕೀಬೋರ್ಡ್ ನುಡಿಸುವುದನ್ನು ಕಲಿತಿದ್ದಾನೆ. ಕರಾಟೆಯನ್ನೂ ಬಲ್ಲ ಇವನು ತನ್ನ ವೇದಪಾಠವನ್ನು ಮುಂದುವರೆಸುತ್ತ, ಭವಿಷ್ಯದಲ್ಲಿ ತಾನು ಕಲಿಯುತ್ತಿರುವ ಭರತನಾಟ್ಯದ ಜೊತೆ ಅಭಿನಯವನ್ನೂ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮಿಸುತ್ತಿದ್ದಾನೆ.
ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.