ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ‘ಚಿತ್ಪಾವನಿ ಭಾಷಾ ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 29 ಸೆಪ್ಟೆಂಬರ್ 2024ರಂದು ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಿತು. ಗೋಷ್ಠಿಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ 47 ಕವಿಗಳು ಶುದ್ಧ ಚಿತ್ಪಾವನಿ ಭಾಷೆಯಲ್ಲಿ ಕವನಗಳನ್ನು ವಾಚಿಸಿ. ಪ್ರೇಕ್ಷಕರನ್ನು ರಂಜಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಶ್ರೀಮತಿ ಸಂಧ್ಯಾ ಪಾಳಂದ್ಯೆ ಗೋಷ್ಠಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಅನಂತ ತಾಹ್ಮಾನ್ಕಾರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀ ನಾರಾಯಣ ಫಡಕೆ ಮತ್ತು ಕಾರ್ಯಕಾರಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು ಮೂರುವರೆ ಘಂಟೆಗಳ ಕಾಲ ನಡೆದ ಈ ಕವಿಗೋಷ್ಠಿಯಲ್ಲಿ 160ಕ್ಕಿಂತಲೂ ಹೆಚ್ಚು ಪ್ರೇಕ್ಷಕರು ಚಿತ್ಪಾವನಿ ಭಾಷೆಯಲ್ಲಿನ ಕವನಗಳನ್ನು ಸವಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಉಷಾ ಮೆಹೆಂದಳೆ ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿ ಶ್ರೀ ಅನಂತ ತಾಹಮನ್ಕಾರ್ ಕವನಗಳ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿ, ಗೋಷ್ಠಿಯ ಕವನಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಶ್ರೀಮತಿ ಸಂಧ್ಯಾ ಪಾಳಂದ್ಯೆ ಮಾತನಾಡಿ “ಚಿತ್ಪಾವನಿ ಭಾಷೆಯಲ್ಲಿ ಗೋಷ್ಠಿಗಳನ್ನು ಹಮ್ಮಿಕೊಂದಿರುವುದು ನಿಜಕ್ಕೂ ಅಭಿನಂದನಾರ್ಹ ನಡೆ. ಮುಂದೆಯೂ ಹೆಚ್ಚು ಹೆಚ್ಚು ಕವಿಗೋಷ್ಠಿಗಳು ನಡೆಯಲಿ.” ಎಂದು ಹಾರೈಸಿದರು. ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಫದ ಅಧ್ಯಕ್ಷರಾದ ಶ್ರೀ ತ್ರಿವಿಕ್ರಮ ಹೆಬ್ಬಾರ್ ಮಾತನಾಡಿ “ಚಿತ್ಪಾವನಿ ಭಾಷೆಯು ಹಿಂದೆ ಮಹಾರಾಷ್ಟ್ರದಲ್ಲಿಯೂ ಪ್ರಚಲಿತದಲ್ಲಿತ್ತು. ಆದರೆ ಇಂದು ಅದು ನಶಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸೀಮಿತ ಮಂದಿಯಲ್ಲಿ ಮಾತ್ರ ಇದ್ದು, ಅಳಿವಿನ ಅಂಚಿನಲ್ಲಿದೆ. ಇದರ ಉಳಿವಿಗಾಗಿ ತಾಲೂಕು ಚಿತ್ಪಾವನ ಸಂಘದ ಪ್ರಯತ್ನವೆ ಈ ಕವಿಗೋಷ್ಠಿ.” ಎಂದರು.
ಸಂಘದ ಅಧ್ಯಕ್ಷ ಶ್ರೀ ತ್ರಿವಿಕ್ರಮ ಹೆಬ್ಬಾರ್ ಸ್ವಾಗತಿಸಿ, ಶ್ರೀ ವಿವೇಕ್ ಕೇಳ್ಕರ್ ಹಾಗೂ ಶ್ರೀ ದೀಪಕ್ ಆಠವಳೆ ಕಾರ್ಯಕ್ರಮ ನಿರ್ವಹಿಸಿ, ಶ್ರೀ ಚಂದ್ರಕಾಂತ ಗೋರೆ ಧನ್ಯವಾದ ಸಮರ್ಪಿಸಿದರು. ಡಾ. ಶಶಿಧರ ಡೋಂಗ್ರೆ ಹಾಗೂ ಶ್ರೀ ಪ್ರಭಾಕರ ಆಠವಳೆ ಸಹಕರಿಸಿದರು.