14 ಏಪ್ರಿಲ್ 2023, ಕಾಸರಗೋಡು: ರಂಗ ಚೇತನ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಹಾಗೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಸಹಾಬಾಗಿತ್ವದಲ್ಲಿ ಪೆರ್ಮುದೆ ಶಾಲೆಯಲ್ಲಿ ಜರಗುತ್ತಿರುವ ಚಿತ್ತಾರ ರಂಗದ ರಂಗೋಲಿ ಮೂರು ದಿನಗಳ ಸಹವಾಸ ಶಿಬಿರಕ್ಕೆ ದಿನಾಂಕ 12-04-2023ರಂದು ಆಕರ್ಷಕ ತೆರೆ ಬಿತ್ತು.
ಚಿತ್ತಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಂಗಡಿಮೊಗರು ಸರ್ವಿಸ್ ಕೊ ಓಪರೇಟಿವ್ ಬ್ಯಾಂಕ್ ನ ಕಾರ್ಯದರ್ಶಿ ಶ್ರೀ ವಿಠಲ ರೈ ಮಾತನಾಡಿ,”ಗ್ರಾಮೀಣ ಪ್ರದೇಶದ ಕನ್ನಡ ಮಕ್ಕಳಿಗೆ ಇಂತಹ ಶಿಬಿರದ ಮೂಲಕ ಹೆಚ್ಚು ಹೆಚ್ಚು ಅವಕಾಶಗಳು ಲಭಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವೇದಿಕೆಯಾಗಲಿ. ಈ ನಿಟ್ಟಿನಲ್ಲಿ ರಂಗ ಚೇತನ (ರಿ) ಕಾಸರಗೋಡು ಇದರ ವತಿಯಿಂದ ವರ್ಷಂಪ್ರತಿ ಜರಗುತ್ತಿರುವ ಮಕ್ಕಳ ಸಹವಾಸ ಶಿಬಿರವು ಮಾದರಿಯಾಗಿದ್ದು, ಈ ಸಂಸ್ಥೆಯ ಮೂಲಕ ಇನ್ನಷ್ಟು ಇಂತಹ ಶಿಬಿರವನ್ನು ಹಮ್ಮಿಕೊಳ್ಳುವಂತಾಗಲಿ” ಎಂದು ಶುಭ ಹಾರೈಸಿದರು. ರಂಗ ಚೇತನ ಕಾಸರಗೋಡು ಇದರ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಪಾವಳರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿವಿಧ ಅಧ್ಯಾಪಕ ಸಂಘಟನೆಯಾದ KSTA ಜಿಲ್ಲಾ ಅಧ್ಯಕ್ಷರಾದ ಶ್ಯಾಮ್ ಭಟ್, NTU ನ ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ದಯಾನಂದ ಕುಬಣೂರು, KPSTU ಮಂಜೇಶ್ವರ ಉಪ ಜಿಲ್ಲಾ ಅಧ್ಯಕ್ಷರಾದ ಇಸ್ಮಾಯಿಲ್, ಶಿಬಿರ ಸಂಯೋಜಕರು ಸದಾಶಿವ ಬಾಲಮಿತ್ರ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಧ್ಯಾಪನ ಸೇವೆಯಿಂದ ನಿವ್ರತ್ತಿಯಾಗುತ್ತಿರುವ ರಂಗ ಚೇತನದ ಗೌರವಾಧ್ಯಕ್ಷರಾದ ಯತೀಶ್ ಕುಮಾರ್ ರೈ ಮುಳ್ಳೇರಿಯರವನ್ನು ರಂಗ ಚೇತನ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಶಿವರಾಮ್ ಮಾಸ್ಟರ್ ಕಾಟುಕುಕ್ಕೆ ಮಾಡಿದರು. ಶಿಬಿರದ ಕೊನೆಯ ದಿನ ಬೆಳಿಗ್ಗೆ ಚಿನ್ಮಯ ವಿದ್ಯಾಲಯ ಬದಿಯಡ್ಕ ಇಲ್ಲಿನ ದೈಯಿಕ ಶಿಕ್ಷಕಿ ಸೌಮ್ಯ ಟೀಚರ್ ನವರಿಂದ ಎರೋಬಿಕ್ಸ್ ಸಂಗೀತದೊಂದಿಗೆ ವ್ಯಾಯಾಮ ಜರಗಿತು. ಚಾ ವಿರಾಮದ ಬಳಿಕ ಕಿರಣ್ ಕಲಾಂಜಲಿ, ಪ್ರಕಾಶ್ ಕುಂಬಳೆ ಹಾಗೂ ಜಯ ಪ್ರಕಾಶ್ ಶೆಟ್ಟಿ ಬೇಳರವರ ನೇತೃತ್ವದಲ್ಲಿ ಮುಖವಾಡ ತಯಾರಿ, ವಿವಿಧ ಬೊಂಬೆಗಳ ತಯಾರಿ, ಚಿತ್ರ ರಚನಾ ಕೌಶಲ್ಯವನ್ನು ಹೆಚ್ಚಿಸುವ ಪ್ರಾತ್ಯಕ್ಷಿಕೆ, ರಂಗ ಗೀತೆಗಳು ಮೊದಲಾದವುಗಳು ಜರಗಿತು. ತದನಂತರ ಅನುರಾಜ್ ಕುಬಣೂರುರವರಿಂದ ಮ್ಯಾಜಿಕ್ ಪ್ರದರ್ಶನ ಜರಗಿತು. ನಂತರ ಶಿಬಿರಾರ್ಥಿಗಳಿಂದ ಸದಾಶಿವ ಮಾಸ್ಟರ್ ರವರ ನಿರ್ದೇಶನದಲ್ಲಿ, ಮೆಲ್ವಿನ್ ರವರ ಛಾಯಾಗ್ರಹಣದಲ್ಲಿ ಜಲ ಸಂರಕ್ಷಣೆಯ ಅಶಯವಿರುವ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಶಿಬಿರಾರ್ಥಿಗಳಿಗೆ ಹಾಗೂ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ ಧರ್ಮತಡ್ಕ ಶಾಲೆಯ NSS ಘಟಕದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಅಭಿನಂದನಾ ಪತ್ರದ ವಾಚನವನ್ನು ಪ್ರಸಾದ್ ಮುಗು ಮತ್ತು ಹರಿನಾಥ್ ಕುಬನೂರು ನೆರವೇರಿಸಿದರು. ರಂಗ ಚೇತನ ಜತೆ ಕಾರ್ಯ ವಸಂತ ಮಾಸ್ಟರ್ ಮೂಡಂಬೈಲ್ ಸ್ವಾಗತಿಸಿ, ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ವಂದಿಸಿದರು. ಸದಸ್ಯರಾದ ಶಿವ ಚೆರುಗೊಳಿ ನಿರೂಪಿಸಿದರು. ಶಿಬಿರದ ನೇತೃತ್ವವನ್ನು ಗೋಪಾಲ ಮಾಸ್ತರ್ ಕಾಟುಕುಕ್ಕೆ, ರಾಜ್ ಕುಮಾರ್ ಕಾಟುಕುಕ್ಕೆ, ಶಿವಪ್ರಸಾದ್ ರಾವ್ ಪೈವಳಿಕೆ, ಉದಯ್ ಶೆಟ್ಟಿ, ಚಂದ್ರಿಕಾ ಟೀಚರ್, ದೇವಾನಂದ ಕಾಡೂರು ಮೊದಲಾದವರು ವಹಿಸಿಕೊಂಡರು.