ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 93ನೇ ಶಾಸ್ತ್ರೀಯ ಮಾಸಿಕ ಸಂಗೀತ ಕಛೇರಿ ‘ಆಲಾಪ್’ ಕಾರ್ಯಕ್ರಮವನ್ನು ದಿನಾಂಕ 10 ಮೇ 2025ರಂದು ಸಂಜೆ 06-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಈ ಹಿಂದೂಸ್ಥಾನಿ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಹೇಮಂತ್ ಕೃಷ್ಣ ಇವರಿಂದ ಬಾನ್ಸೂರಿ ವಾದನ ಹಾಗೂ ಭಾರ್ಗವ್ ರಾವ್ ಇವರಿಂದ ತಬಲಾ ವಾದನ ನಡೆಯಲಿದೆ.
‘ಆಲಾಪ್’ ಸರಣಿ ಸ್ವರ ಮಾಲಿಕೆಯ 93ನೇ ಕಾರ್ಯಕ್ರಮ ಇದಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗಾಗಿಯೇ ಆಯೋಜಿಸುವ ಈ ಸರಣಿಯಲ್ಲಿ ಒಂದು ತಿಂಗಳು ಹಿಂದೂಸ್ಥಾನಿ ಹಾಗೂ ಒಂದು ತಿಂಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯುತ್ತಿದೆ. ಶ್ರೀ ನಿವಾಸ್ ಜಿ. ಕಪ್ಪಣ್ಣ ಹಾಗೂ ಲಲಿತ ಕಪ್ಪಣ್ಣ ದಂಪತಿಗಳು ತಮ್ಮ ಮನೆಯ ಅಂಗಳದಲ್ಲಿಯೇ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಕಪ್ಪಣ್ಣ ಅವರ ಪುತ್ರಿ ಹಾಗೂ ಕಪ್ಪಣ್ಣ ಅಂಗಳದ ನಿರ್ದೇಶಕಿಯಾದ ಸ್ನೇಹ ಕಪ್ಪಣ್ಣರವರು ಈ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಡಾ. ಎ. ಭಾನು ಇವರು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದಾರೆ.