ಬಂಟ್ವಾಳ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ ಸಮಿತಿಯು ಸೀನಿಯರ್ ಚೇಂಬರ್ ಸಹಯೋಗದಲ್ಲಿ ಆಯೋಜಿಸಿದ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮಿಲನದ ಸಮಾರೋಪ ಸಮಾರಂಭ ಹಾಗೂ ಕವಿಗೋಷ್ಠಿಯು 04 ಆಗಸ್ಟ್ 2024ರಂದು ಬಂಟ್ವಾಳ ಜೋಡುಮಾರ್ಗದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಂಗಳೂರಿನ ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯ ಹಾಗೂ ಬರಹಗಾರರಾದ ಡಾ. ಸುರೇಶ ನೆಗಳಗುಳಿ ಮಾತನಾಡಿ “ಪರರಿಂದ ಬರೆಯಿಸಿ ಹೆಸರಿಗಾಗಿ ಸಾಹಿತಿಯಾದರೆ ರಸಹೀನ ಕಬ್ಬಿನಂತೆ.” ಎಂದರು. ಚುಟುಕು ಸಾಹಿತ್ಯದ ಸ್ವಾರಸ್ಯದ ಬಗ್ಗೆ ತಿಳಿಸಿಕೊಟ್ಟ ಇವರು ಒಂದೇ ವಿಷಯವನ್ನು ಹೇಗೆ ಬಗೆ ಬಗೆಯ ಸಾಹಿತ್ಯ ಪ್ರಕಾರದಲ್ಲಿ ಬರೆಯಬಹುದು ಎನ್ನುತ್ತಾ ಚುಟುಕು, ರುಬಾಯಿ, ಮುಕ್ತಕ, ತನಗ, ಹಾಯ್ಕು, ಟಂಕಾ ಹಾಗೂ ಹನಿಗವನವಾಗಿ ಒಂದೇ ವಸ್ತುವನ್ನು ವಾಚಿಸಿ ತೋರಿಸಿದರು. ಚುಟುಕು ವಾಚಿಸಿದ ಸುಮಾರು ನಲುವತ್ತಕ್ಕೂ ಅಧಿಕ ವಾಚಕರನ್ನು ಹೆಸರಿಸಿ ಶ್ಲಾಘಿಸಿದರು.

ಪರಿಷತ್ತಿನ ದ. ಕ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ವಿ. ಬಿ. ಕುಳಮರ್ವ ಹಾಗೂ ವಾಮನ ರಾವ್ ಬೇಕಲರಿಂದ ಉಪನ್ಯಾಸ, ಡಾ. ವಾಣಿಶ್ರೀ ಹಾಗೂ ಶಾಂತಾ ಕುಂಟಿನಿ ಇವರ ಬಳಗಗಳ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಅದ್ದೂರಿಯಾಗಿ ನೆರವೇರಿತು. ಪರಿಷತ್ತಿನ ಸ್ಥಾಪಕಾಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ರೇಮಂಡ್ ಡಿ’ಕೂನ್ಹ , ಕಾರ್ಯದರ್ಶಿ ಶಾಂತಾ ಪುತ್ತೂರು ,ಸಂಚಾಲಕಿ ಮಧುರಾ ಕಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾವೇರಿ, ಹುಬ್ಬಳ್ಳಿ, ಹಾಸನ, ಸಹಿತ ದೂರದ ಊರುಗಳಿಂದಲೂ ಆಗಮಿಸಿದ್ದ ಕವಿಗಳು ಹಾಗೂ ಜಿಲ್ಲಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಪೂರ್ವ ಕಾರಂತ್, ರವೀಂದ್ರ ಕುಕ್ಕಾಜೆ ಹಾಗೂ ರೇಖಾ ಸುದೇಶ ರಾವ್ ನಿರೂಪಣೆಗೈದರು.