ಮಳವಳ್ಳಿ : 21 ಆಗಸ್ಟ್ 2024ರಂದು ಉದ್ಘಾಟನೆಗೊಂಡ ರಂಗಬಂಡಿ ಸಂಸ್ಥೆ ಆಯೋಜಿಸಿದ ‘ಮಳವಳ್ಳಿ ಸುಂದರಮ್ಮ ರಂಗೋತ್ಸವ’ದ ಸಮಾರೋಪ ಸಮಾರಂಭವು 25 ಆಗಸ್ಟ್ 2024ರಂದು ಮಳವಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಕರ್ಮಿ ಹಾಗೂ ಸಿನಿಮಾ ನಟ ಬಿ. ಸುರೇಶ್ ಮಾತನಾಡಿ “ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಟಕಗಳು ಅಭಿವೃದ್ಧಿ ಮತ್ತು ಸೌಹಾರ್ದತೆ ನೆಲೆಸಲು ಕಾರಣವಾಗುತ್ತವೆ. ಮಳವಳ್ಳಿಯ ಜನತೆ ಹಿಂದಿನಿಂದಲೂ ಜನಪದ ಕಲೆಗೆ ಹೆಸರಾಗಿದ್ದು, ಅದನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಸಿನಿಮಾ, ನಾಟಕ, ಜನಪದದಲ್ಲಿ ದೊಡ್ಡ ಹೆಸರು ಮಾಡಿದ ಕಲಾವಿದರಿದ್ದಾರೆ. ಆದರಲ್ಲೂ ಮಳವಳ್ಳಿ ತಾಲೂಕು ಮಂಟೇಸ್ವಾಮಿ, ಮಾದಪ್ಪ ನಡೆದಾಡಿದ ನೆಲೆಯಾಗಿದೆ. ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಪ್ರತಿರೋಧ ಒಡ್ಡಿದ ಜನಪದ ನಾಯಕರು ಇವರಾಗಿದ್ದಾರೆ. ಇವರ ಪ್ರಭಾವ ಈ ಭಾಗದ ಜನರಲ್ಲಿದೆ. ಮಳವಳ್ಳಿ ಸುಂದರಮ್ಮ ಮೊಟ್ಟ ಮೊದಲ ರಂಗನಟಿಯಾಗಿ ಪಾತ್ರಗಳನ್ನು ಮಾಡಿದ್ದಾರೆ. ಸಂಗೀತ ಹಾಗೂ ಹಾಡುಗಾರಿಕೆಯಲ್ಲೂ ಪ್ರತಿಭಾವಂತರಾಗಿ ಅದ್ಭುತ ಸಾಧನೆ ಮಾಡಿದ್ದಾರೆ. ಅದರನ್ನು ಪ್ರತಿವರ್ಷ ಸ್ಮರಿಸಿ ನಾಟಕೋತ್ಸವ ನಡೆಸಬೇಕು. ಅಂಬೇಡ್ಕರ್ ಭವನ ಬಹಳ ಉತ್ತಮವಾಗಿದ್ದು, ಇನ್ನೊಂದಷ್ಟು ಮೂಲ ಸೌಲಭ್ಯಗಳ ಕೊರತೆಯಿದೆ. ಅದನ್ನು ಸರಿಪಡಿಸಲು ಜನಪ್ರತಿನಿಧಿಗಳು ಗಮನ ಕೊಡಬೇಕು.” ಎಂದು ಮನವಿ ಮಾಡಿದರು.
ರಂಗಕರ್ಮಿ ಮಂಡ್ಯ ರಮೇಶ್ ಮಾತನಾಡಿ “ರಂಗಭೂಮಿ ಬಹಳ ಸತ್ವಯುತವಾದದ್ದು. ನಮ್ಮ ಕಲೆಗಳು ಜನರಿಗೆ ನೇರವಾಗಿ ಕಾಣುತ್ತವೆ. ಡೂಪ್ ಮಾಡಿ ಪಾತ್ರ ಮಾಡಲು ಸಾಧ್ಯವಿಲ್ಲ. ರಂಗಬಂಡಿ ಸಂಸ್ಥೆ ಐದು ದಿನಗಳ ಕಾಲ ರಂಗೋತ್ಸವ ನಡೆಸಿ ಖ್ಯಾತನಟಿ ಉಮಾಶ್ರೀ ಅವರಿಗೆ ರಂಗ ಸನ್ಮಾನ ಮಾಡಿ ಗೌರವಿಸಿರುವುದು ಶ್ಲಾಘನೀಯ.” ಎಂದರು.
ಇದೇ ಸಂದರ್ಭದಲ್ಲಿ ರಂಗೋತ್ಸವದ ಸಂಘಟಕ ಹಾಗೂ ರೈತ ಸಂಘದ ಜಿಲ್ಲಾ ಸಂಚಾಲಕರಾದ ಎನ್. ಎಲ್. ಭರತ್ ರಾಜ್, ಜಗದೀಶ್ ಕಟ್ಟೆಮನಿ ಹಾಗೂ ದರ್ಶನ್ ಇವರನ್ನು ಅಭಿನಂದಿಸಲಾಯಿತು. ರಂಗಬಂಡಿ ಟ್ರಸ್ಟ್ ಅಧ್ಯಕ್ಷ ಮಧು ಮಳವಳ್ಳಿ, ಸಮಾಜ ಸೇವಕ ಟಿ. ಎಂ. ಪ್ರಕಾಶ್, ಪುರಸಭೆ ಸದಸ್ಯರಾದ ನೂರುಲ್ಲಾ ಕಲಾವಿದರಾದ ಮಧುಕರ್ ಹಾಗೂ ವೇಣುಗೋಪಾಲ್ ಉಪಸ್ಥಿತರಿದ್ದರು.