ಆಲೂರು : ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಯೋಜಕತ್ವದಲ್ಲಿ ಹನುಮಂತರಾಯ ಸಮುದಾಯ ಭವನದಲ್ಲಿ ದಿನಾಂಕ 21 ನವೆಂಬರ್ 2025ರಂದು ತಾಳೂರು ಪಂಚಾಯಿತಿ ವ್ಯಾಪ್ತಿಯ ಕಾಮತಿಕೂಡಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಳೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಟಿ.ಕೆ. ಇವರು ಮಾತನಾಡಿ “ವಿದ್ಯಾರ್ಥಿಗಳ ಕಲಿಕೆಯಲ್ಲಿ ಕೇವಲ ಪಠ್ಯವಲ್ಲದೇ ಪಠ್ಯೇತರ ಚಟವಟಿಕೆಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಗಳು ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆಯನ್ನುಂಟು ಮಾಡುತ್ತವೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತೀರ್ಪುಗಾರರು ಪಕ್ಷಪಾತ ಮಾಡದೇ ನಿಜವಾದ ಅರ್ಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು” ಎಂದು ಅಭಿಪ್ರಾಯಪಟ್ಟರು.

ಪಾಳ್ಯ ಹೋಬಳಿ ಶಿಕ್ಷಣ ಸಂಯೋಜಕರಾದ ಎಂ.ಡಿ. ದಿವಾಕರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ “ಪ್ರತಿಭಾ ಕಾರಂಜಿಯಲ್ಲಿ ಬರುವ ವಿವಿಧ ಸ್ಪರ್ಧೆಗಳಾದ ಅಭಿನಯಗೀತೆ, ಪದ್ಯ ಕಂಠಪಾಠ, ದೇಶಭಕ್ತಿಗೀತೆ, ಧ್ವನಿ ಅನುಕರಣೆ, ಕ್ಲೇ ಮಾಡಲಿಂಗ್, ಛದ್ಮವೇಶ, ಚಿತ್ರಕಲೆ, ಕವನ ವಾಚನ ಹೀಗೆ ವೈವಿಧ್ಯಮಯ ಚಟವಟಿಕೆಗಳು ಮಕ್ಕಳ ಮನೋವಿಕಸನಕ್ಕೆ ಭದ್ರಬುನಾದಿಯನ್ನು ಒದಗಿಸುತ್ತವೆ. ವಿದ್ಯಾರ್ಥಿಗಳಲ್ಲಿ ವಿವಿಧ ಕೌಶಲಗಳನ್ನು ವೃದ್ಧಿಸುತ್ತವೆ” ಎಂದರು.

ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ “ತಾಳೂರಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಸಂಘಟಿಸಿದರೂ ನಮ್ಮ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಪೋಷಕರು, ತಾಳೂರು ಗ್ರಾಮ ಪಂಚಾಯಿತಿಯ ಸಹಕಾರ ಸದಾ ಇರುತ್ತದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ಯೋಗೇಶ್, ಉಪಾಧ್ಯಕ್ಷೆ ಉಷಾರಾಣಿ ಹರೀಶ್, ಗ್ರಾಮ ಪಂಚಾಯಿತಿ ಸದಸ್ಯ ಷಡಾಕ್ಷರಿ, ಎಸ್.ಡಿ.ಎಂ.ಸಿ. ಹಾಲಿ ಅಧ್ಯಕ್ಷ ಟಿ.ಕೆ. ದಿನೇಶ್, ಮಾಜಿ ಅಧ್ಯಕ್ಷರಾದ ಮಂಜುನಾಥ್, ಟಿ.ಕೆ. ಚಿದಾನಂದ, ಟಿ.ಇ. ಧರ್ಮ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಟಿ.ಎಂ. ರಾಜಶೇಖರ್, ಸಮಾಜ ಸೇವಕ ಗೃಹಲಕ್ಷ್ಮೀ ಆನಂದ್ ಹಾಗೂ ಮುಂತಾದ ಗ್ರಾಮಸ್ಥರ ಸಹಕಾರದಲ್ಲಿ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿದೆ” ಎಂದರು.

ಆಲೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಮುಖ್ಯ ಅತಿಥಿಗಳಾಗಿ ಮಾತನಾಡಿ “ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆ ಮಧ್ಯದ ಪಾಠಪ್ರವಚನಗಳಲ್ಲ. ಪಠ್ಯೇತರ ಚಟವಟಿಕೆಗಳು ಬಹಳ ಮುಖ್ಯ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಹಾಕಲು ಇದೊಂದು ಉತ್ತಮ ವೇದಿಕೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸೃಜನಾತ್ಮಕ ಹಾಗೂ ಸ್ಪರ್ಧಾತ್ಮಕ ಮನೋಭಾವನೆಗಳನ್ನು ಬೆಳೆಸುವುದರ ಜೊತೆಗೆ ಕಲೆಗಳನ್ನು ಪೋಷಿಸುತ್ತವೆ” ಎಂದರು.

ವೇದಿಕೆಯಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕವಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ಯೋಗೇಶ್, ಉಪಾಧ್ಯಕ್ಷೆ ಉಷಾರಾಣಿ ಹರೀಶ್, ಗ್ರಾಮ ಪಂಚಾಯಿತಿ ಸದಸ್ಯ ಷಡಾಕ್ಷರಿ, ಎಸ್.ಡಿ.ಎಂ.ಸಿ. ಹಾಲಿ ಅಧ್ಯಕ್ಷ ಟಿ.ಕೆ. ದಿನೇಶ್, ಮಾಜಿ ಅಧ್ಯಕ್ಷರಾದ ಮಂಜುನಾಥ್, ಟಿ.ಕೆ. ಚಿದಾನಂದ, ಟಿ.ಇ. ಧರ್ಮ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಟಿ.ಎಂ. ರಾಜಶೇಖರ್, ಸಮಾಜ ಸೇವಕ ಗೃಹಲಕ್ಷ್ಮೀ ಆನಂದ್ ಮುಂತಾದವರು ಮಾತನಾಡಿದರು. ಟಿ. ಗುಡ್ಡೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಎಚ್.ಡಿ. ಕುಮಾರ್, ತಾಳೂರು ಶಾಲೆಯ ಶಿಕ್ಷಕಿ ವಿ. ರವಿತ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ವಾಟೆಹೊಳೆ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ರಾವ್, ಟಿ. ಗುಡ್ಡೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಎಚ್.ಡಿ. ಕುಮಾರ್, ತಾಳೂರು ಶಾಲೆಯ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು, ಕಾಮತಿ ಕೂಡಿಗೆ ಶಾಲೆಯ ಮುಖ್ಯ ಶಿಕ್ಷಕಿ ಎಂ.ಇ. ಭಾಗ್ಯಲಕ್ಷ್ಮೀ, ಬೆಳ್ಳಾವರ ಶಾಲೆಯ ಮುಖ್ಯ ಶಿಕ್ಷಕ ಪರಮೇಶ್, ನಿಲುವಾಗಿಲು ಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್ ಶಫಿ, ಬೊಮ್ಮನಮನೆ ಶಾಲೆಯ ಮುಖ್ಯ ಶಿಕ್ಷಕ ಪರಮೇಶ್, ಚಿ. ಹೊಸಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಂ. ನಾಗರಾಜ್, ಅಜ್ಜೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಜಿ.ಜಿ. ಕೊಪ್ಪಲು ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ, ದೇವರಾಜಪುರ ಶಾಲೆಯ ಶಿಕ್ಷಕಿ ವೀಣಾ, ಹುಣಸೆ ಶಾಲೆಯ ಶಿಕ್ಷಕಿ ಮೀನಾಕ್ಷಿ, ಹಳೆಯ ವಿದ್ಯಾರ್ಥಿಗಳ ಸಂಘದ ಟಿ.ಎಂ. ಮಹೇಶ ಸೇರಿದಂತೆ 200ಕ್ಕೂ ಹೆಚ್ಚು ಮಕ್ಕಳು ಉಪಸ್ಥಿತರಿದ್ದರು.
