ಉಡುಪಿ : ಜೀವವಿಮ ನಿಗಮದ ನಿವೃತ್ತ ಅಧಿಕಾರಿ, ಕಲಾಪೋಷಕರು ಆಗಿದ್ದ, ಸರ್ಪಂಗಳ ಸುಬ್ರಮಣ್ಯ ಭಟ್ ಇವರ ನೆನಪಿನಲ್ಲಿ 14ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 11 ಅಕ್ಟೋಬರ್ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೖಸಿ ಸಭಾಂಗಣದಲ್ಲಿ ಜರಗಿತು.
ಸುರತ್ಕಲ್, ಹನುಮಗಿರಿ ಮುಂತಾದ ವಿವಿಧ ಮೇಳಗಳಲ್ಲಿ 54 ವರ್ಷ ತಿರುಗಾಟ ಮಾಡಿದ ಹಿರಿಯ ಕಲಾವಿದರಾದ ವೇಣೂರು ಸದಾಶಿವ ಕುಲಾಲ್ ಇವರಿಗೆ ‘ಸರ್ಪಂಗಳ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮೂರು ದಶಕಗಳ ಕಾಲ ಚಕ್ರತಾಳ ಕಲಾವಿದರಾಗಿ ಸೇವೆ ಸಲ್ಲಿಸಿದ ಸುರತ್ಕಲ್ಲಿನ ಪಿ. ಸುರೇಶ್ ಕಾಮತ್ ಇವರಿಗೆ ಸರ್ಪಂಗಳ ಪುರಸ್ಕಾರ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಪ್ರಶಸ್ತಿ ಪ್ರದಾನ ನೆರವೇರಿಸಿದರು. ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್ ಮತ್ತು ಮಕ್ಕಳು ಪ್ರಾಯೋಜಿಸಿದ ಈ ಕಾರ್ಯಕ್ರಮದಲ್ಲಿ ಡಾ. ಶೈಲಜಾ ಭಟ್, ಡಾ. ನರೇಂದ್ರ ಶೆಣೈ, ಅವಂತಿಕಾ, ಅನಿರುದ್ಧ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರಿಂದ ‘ಉಷಾ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು.
									 
					