ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ (ರಿ.) ಮತ್ತು ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ದಿನಾಂಕ 15 ಆಗಸ್ಟ್ 2024ರಂದು ಶೇಣಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ‘ಶೇಣಿ ಪ್ರಶಸ್ತಿ-2024’ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಮಾತನಾಡಿ “ಶೇಣಿ ಪ್ರಶಸ್ತಿ ನನ್ನ ಪಾಲಿಗೆ ದೇವರ ಪ್ರಸಾದಕ್ಕೆ ಸಮನಾದುದು. ಈ ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ. ಶೇಣಿ ಗೋಪಾಲಕೃಷ್ಣ ಭಟ್ ಅವರ ಜತೆ ಒಡನಾಟ ಹೊಂದಿ ಕಲಾಮಾತೆಯ ಸೇವೆ ಮಾಡಿದ್ದರಿಂದ ಈ ಪ್ರಶಸ್ತಿ ನನಗೆ ಒಲಿದಿರಬಹುದು. ಆಟ-ಕೂಟಗಳಲ್ಲಿ ಶೇಣಿಯವರು ಇದ್ದರೆ ಸಹಕಲಾವಿದರು ಬಹಳ ಎಚ್ಚರಿಕೆಯಿಂದ ಅರ್ಥ ಹೇಳಬೇಕಿತ್ತು. ಅವರು ಸಹಕಲಾವಿದರ ಜತೆ ಪಾತ್ರಕ್ಕೆ ಒದಗುವ ಬಗೆ ಅಸಾಮಾನ್ಯವಾಗಿತ್ತು. ಹರಿದಾಸರಾಗಿದ್ದ ಅವರಿಂದ ಯಕ್ಷಗಾನದ ಮಾತುಗಾರಿಕೆಯ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ಲಭಿಸಿದೆ. ಅವರಂಥ ಕಲಾವಿದರು ಇನ್ನಷ್ಟು ಹುಟ್ಟಿಬರಬೇಕು” ಎಂದು ಶೇಣಿ ಜತೆಗಿನ ಒಡನಾಟವನ್ನು ಸ್ಮರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧರ್ಮದರ್ಶಿ, ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು “ಶೇಣಿಯವರು ಯಕ್ಷಗಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ಮಹಾನ್ ಕಲಾವಿದ” ಎಂದು ಹೇಳಿದರು. ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಹಿರಿಯ ಹೋಟೆಲ್ ಉದ್ಯಮಿ ಜಯಪ್ರಕಾಶ್ ರಾವ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಹಿರಿಯ ಚಿಂತಕ ನಿತ್ಯಾನಂದ ಕಾರಂತ ಶುಭಾಶಂಸನೆ ಮಾಡಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ.ಆರ್. ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅರ್ಥಧಾರಿ ಜಿ.ಕೆ. ಭಟ್ ಸೇರಾಜೆ ಶೇಣಿ ಸಂಸ್ಮರಣೆ ಮತ್ತು ಪಾತಾಳ ಅಭಿನಂದನಾ ನುಡಿಗಳನ್ನಾಡಿದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಕೂಡ್ಲು ಉಪಸ್ಥಿತರಿದ್ದರು. ಹಿರಿಯ ಅರ್ಥಧಾರಿ ಸರ್ಪಂಗಳ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಪಾರ್ಥ ಸಾರಥ್ಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.