ಮಂಗಳೂರು : ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘವನ್ನು ಮುನ್ನಡೆಸಿದ್ದ ಕೀರ್ತಿಶೇಷ ನಾಗೇಶ ಪ್ರಭುಗಳ ಸಂಸ್ಮರಣೆ ಕಾರ್ಯಕ್ರಮವು ಶ್ರೀ ಮಹಾಮಾಯಿ ದೇವಸ್ಥಾನದ ವಠಾರದಲ್ಲಿ ದಿನಾಂಕ 18 ಆಗಸ್ಟ್ 2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಅಶೀರ್ವಚನವನ್ನು ನೀಡುತ್ತ ಇಸ್ಕಾನ್ ಸಂಸ್ಥೆಯ ಕಾರ್ಯದರ್ಶಿ ಸನಂದನ ದಾಸ ಪ್ರಭು “ಸಂತೃಪ್ತಿಯೇ ಸಾರ್ಥಕ ಜೀವನಕ್ಕೆ ದಾರಿ. ಇದ್ದುದರಲ್ಲೇ ತೃಪ್ತಿ ಪಡುತ್ತಾ ಜೀವನವನ್ನು ನಡೆಸಿದವರು ನಾಗೇಶ್ ಪ್ರಭುಗಳು. ತತ್ವ ವಿಚಾರದ ಆಳವಾದ ಜ್ಞಾನ ಹೊಂದಿದ್ದು ಮಾತ್ರವಲ್ಲದೆ ತನ್ನ ವಿಚಾರಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಪ್ರಾಂಜಲವಾಗಿ ಒಪ್ಪುವ ಮನೋಭಾವ ಅವರಲ್ಲಿ ಇತ್ತು” ಎಂದು ಹೇಳಿದರು.
ಶ್ರೀ ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಇದರ ಕಾರ್ಯದರ್ಶಿ ಶ್ರೀಧರ ಮಣಿಯಾಣಿಯವರು ಈ ಯಕ್ಷಗಾನ ಸಂಘದ ಸದಸ್ಯರ ಶಿಸ್ತಿನ ಬಗ್ಗೆ ಪ್ರಶಂಸೆಯ ಮಾತನ್ನಾಡಿದರು. ಇನ್ನೋರ್ವ ಅತಿಥಿ ಜಿ.ಕೆ. ಭಟ್ ಸೇರಾಜೆ ಮಾತನಾಡಿ “ನಾಗೇಶ ಪ್ರಭುಗಳು ಯಕ್ಷಗಾನ ಭಾಗವತ, ಅರ್ಥಧಾರಿ, ಹಿಮ್ಮೇಳ ವಾದಕ, ಸಂಘಟಕ ಮಾತ್ರವಲ್ಲದೆ ಓರ್ವ ಪೋಷಕ ಹಾಗೂ ಉತ್ತಮ ವಿಮರ್ಶಕನೂ ಆಗಿದ್ದರು” ಎಂದರು. ಶ್ರೀ ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಇದರ ಅಧ್ಯಕ್ಷ ಸುರೇಂದ್ರ ರಾವ್ ಮಾತನಾಡಿ “ಕಲಾವಿದನೊಬ್ಬ ಆಳಿದ ಬಳಿಕವೂ ಆತನ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮದಲ್ಲಿ ಸೇರಿದ ಅಭಿಮಾನಿಗಳೇ ಸಾಕ್ಷಿ. ಪ್ರತಿಯೊಂದು ದೇವಳಗಳಲ್ಲೂ ಯಕ್ಷಗಾನ ಕಲೆಯ ಉಳಿವಿಗಾಗಿ ಪ್ರೋತ್ಸಾಹ ಕಲ್ಪಿಸಬೇಕು” ಎಂದರು.
ಲಯನ್ ಸಂಜೀವ ಶೆಟ್ಟಿ ಬಿ.ಸಿ. ರೋಡ್ ಇವರು ನಾಗೇಶ್ ಪ್ರಭುಗಳ ಒಡನಾಟದ ದಿನಗಳನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರದೀಪ ಕುಮಾರ ಕಲ್ಕೂರರು “ನಾಗೇಶ ಪ್ರಭುಗಳ ಸಾಧನೆಯು ಮುಂದಿನ ಪೀಳಿಗೆಯ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಯಕ್ಷಗಾನ ನೀಡುವ ಜ್ಞಾನವೇ ನಾಗೇಶ ಪ್ರಭುಗಳ ಮಗನಾದ ಶಿವಪ್ರಸಾದರ ಇಂತಹ ಉತ್ತಮ ಕೆಲಸಗಳಿಗೆ ಪೂರಕ” ಎಂದರು.
ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿಯವರು ನಾಗೇಶ ಪ್ರಭುಗಳ ಸಂಸ್ಮರಣೆಯನ್ನು ಗೈದರು. ಈ ಸಂದರ್ಭ ನೀಡಲಾದ ‘ವಾಗೀಶ್ವರೀ ಅನುಗ್ರಹ ಪ್ರಶಸ್ತಿ’ಯನ್ನು ಪಡೆದ ಕೃಷ್ಣರಾಜ ಭಟ್ ನಂದಳಿಕೆ ಇವರ ಅಭಿನಂದನೆಯನ್ನು ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಮಾಡಿದರು. ದೇವಳದ ಅರ್ಚಕರಾದ ವೇದಮೂರ್ತಿ ವಿಠ್ಠಲ ಭಟ್, ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ, ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಸಂಘದ ಪೋಷಕರಾದ ಸಿ.ಎಸ್. ಭಂಡಾರಿ, ಶ್ರೀಮತಿ ಪ್ರಫುಲ್ಲ ನಾಯಕ್, ಪ್ರೀತಮ್ ಭಟ್ ಸೇರಾಜೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಶ್ರೀಮತಿ ಶೋಭಾ ಐತಾಳ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಪುರುಷಾಮೃಗ ಮತ್ತು ಸುಧನ್ವ ಮೋಕ್ಷ’ ಎಂಬ ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಜರಗಿತು.