ಉಡುಪಿ : ರಾಗ ಧನ ಉಡುಪಿ (ರಿ.) ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಕಲಾವಿಹಾರಿ, ಕಲಾಭಿಜ್ಞ, ಕಲಾತಿಲಕ ಶ್ರೀ ಎ. ಈಶ್ವರಯ್ಯ ಸಂಸ್ಮರಣಾ ಕಾರ್ಯಕ್ರಮ, ‘ಕಲಾ ಪ್ರವೀಣ ಪ್ರಶಸ್ತಿ ಪ್ರದಾನ’, ರಾಗರತ್ನಮಾಲಿಕೆ -36 ಗೃಹಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮವು ಪರ್ಕಳದ ‘ಸರಿಗಮ ಭಾರತಿ’ ಸಭಾಂಗಣದಲ್ಲಿ ದಿನಾಂಕ 19 ಏಪ್ರಿಲ್ 2025ರಂದು ನಡೆಯಿತು.
ಕಲಾವಿಹಾರಿ ಎ. ಈಶ್ವರಯ್ಯನವರು 2018ರಲ್ಲಿ ಪ್ರಾಯೋಜಿಸಿ ಸ್ಥಾಪಿಸಿದ ‘ಕಲಾಪ್ರವೀಣ ಪ್ರಶಸ್ತಿ’ಯನ್ನು ಈ ಬಾರಿ ಬೆಂಗಳೂರಿನ ಹೆಸರಾಂತ ಲೇಖಕಿ ಹಾಗೂ ವಿಮರ್ಶಕಿ ಶ್ರೀಮತಿ ವೈ.ಕೆ. ಸಂಧ್ಯಾ ಇವರಿಗೆ ಅವರ ಅನುಪಸ್ಥಿತಿಯಲ್ಲಿ ನೀಡಲಾಯಿತು. ಹಿರಿಯ ಪತ್ರಕರ್ತ ಶ್ರೀ ನಿತ್ಯಾನಂದ ಪಡ್ರೆ ಅಭಿನಂದನಾ ಭಾಷಣ ನೆರವೇರಿಸಿದರು. ಶ್ರೀಕೃಷ್ಣಯ್ಯ ಅನಂತಪುರ ಪ್ರಶಸ್ತಿಯ ಬಗ್ಗೆ ಪ್ರಸ್ತಾವಿಸಿದರು. ಡಾ. ಶ್ರೀಕಿರಣ್ ಹೆಬ್ಬಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ಉಮಾಶಂಕರಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪೂರ್ವಭಾವಿಯಾಗಿ ರಾಗರತ್ನಮಾಲಿಕೆ -36ನ್ನು ವಿದುಷಿ ಶ್ರೀಮತಿ ಬಾಂಬೆ ಲಕ್ಷ್ಮೀ ರಾಜಗೋಪಾಲನ್ ಇವರು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಡಾ. ಮಂಜರಿಚಂದ್ರ ಪುಷ್ಪರಾಜ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.