ಬೆಂಗಳೂರು : ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಕೆ. ರವಿಕುಮಾರ ಚಾಮಲಾಪುರ ಅವರ ನಿಧನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಯೋಜಿತವಾಗಿರುವ ಸಂದರ್ಭದಲ್ಲಿ ಈ ಅಗಲುವಿಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ ಎಂದು ಅವರು ಕಂಬನಿಯನ್ನು ಮಿಡಿದಿದ್ದಾರೆ.
ಕಳೆದ ಏಳು ವರ್ಷಗಳಿಂದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ.ಕೆ. ರವಿಕುಮಾರ ಚಾಮಲಾಪುರ ಇವರು ದಿನಾಂಕ 04-03-2024ರ ಬೆಳಿಗ್ಗೆ ನಿಧನರಾಗಿದ್ದಾರೆ. ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಚಾಮಲಾಪುರ ಗ್ರಾಮದ ಶ್ರೀಮತಿ ಸಣ್ಣಮ್ಮ ಮತ್ತು ಶ್ರೀ ಸಿ. ಕಾಳೇಗೌಡ ದಂಪತಿಗಳ ಮಗನಾದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೂ, ಪ್ರೌಢ ಶಿಕ್ಷಣವನ್ನು ಹುಲಿವಾನದಲ್ಲಿ ಪಡೆದು, ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ಮಂಡ್ಯದ ಪ್ರತಿಷ್ಠಿತ ಪಿ.ಇ.ಎಸ್. ವಿಜ್ಞಾನ ಕಾಲೇಜಿನಲ್ಲಿ ಐಚ್ಛಿಕ ಕನ್ನಡ ವಿಷಯದೊಂದಿಗೆ ಪೂರೈಸಿರುತ್ತಾರೆ. ಪಿ.ಯು.ಸಿ. ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿಯೇ ವಿದ್ಯಾರ್ಥಿ ನಾಯಕರಾಗಿ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದರು. 1997ರಲ್ಲಿ ಮೈಸೂರು ವಿ.ವಿ.ಯಿಂದ ಎಂ.ಎ. ಪದವಿಯನ್ನು ಕನ್ನಡ ವಿಷಯದಲ್ಲಿ ಪ್ರಥಮ ದರ್ಜೆಯೊಂದಿಗೆ ಪಡೆದಿದ್ದ ಅವರು ಮೈಸೂರು ವಿ.ವಿ.ಯ ವಿದ್ಯಾರ್ಥಿ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
1997ರಿಂದ 2002ರವರೆಗೆ ಮಂಡ್ಯದ ಪಿ.ಇ.ಎಸ್. ಸಂಜೆ ಪದವಿ ಕಾಲೇಜಿನಲ್ಲಿ, 2003-2007ರವರೆಗೆ ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ 2007ರಿಂದ ಮಾಂಡವ್ಯ ವಿದ್ಯಾ ಸಂಸ್ಥೆ ಹಾಗೂ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಸಂಘಟಕರಾಗಿ ಕಾರ್ಯದರ್ಶಿ ಉನ್ನತಿ ಟ್ರಸ್ಟ್ (ರಿ) ಮಂಡ್ಯ 1998, ಕಾರ್ಯದರ್ಶಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಡ್ಯ 1998-2000, ಅಧ್ಯಕ್ಷರು ಮೈಸೂರು ವಿ.ವಿ. ಪದವೀಧರರ ಹಿತರಕ್ಷಣಾ ಸಮಿತಿ (ರಿ) ಮಂಡ್ಯ 2003, ಪ್ರಾಧ್ಯಾಪಕರು ಕನ್ನಡ ವಿಭಾಗ ಮಾಂಡವ್ಯ ಶಿಕ್ಷಣ ಸಂಸ್ಥೆ ಮಂಡ್ಯ, ಅಧ್ಯಕ್ಷರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಡ್ಯ 2012-2015, ಅಧ್ಯಕ್ಷರು ಸಾಹಿತ್ಯ ಲಯನ್ಸ್ ಕ್ಲಬ್ ಹೀಗೆ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದ್ದರು. ಸಾಹಿತ್ಯ, ಸಮಾಜ ಸೇವೆ, ಕನ್ನಡ ಪರವಾದ ಸಾಂಸ್ಕೃತಿಕ ಚಟುವಟಿಕೆಗಳು, ಅಧ್ಯಯನ-ಅಧ್ಯಾಪನ ಶ್ರೀಯುತರ ಆದ್ಯತೆಯ ಕ್ಷೇತ್ರಗಳಾಗಿರುತ್ತವೆ. ನಿರಂತರವಾದ ಕನ್ನಡಪರ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಹಲವಾರು ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಕನ್ನಡದ ಸೇವೆಯಲ್ಲಿ ನಿರತರಾಗಿದ್ದರು.
ಮಂಡ್ಯ ಸಾಹಿತ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಉಚಿತ ಬೃಹತ್ ಆರೋಗ್ಯ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಕೆರಗೋಡು, ಚಾಮಲಾಪುರ, ಮಂಡ್ಯ ಮತ್ತು ಬಸರಾಳುವಿನಲ್ಲಿ ಆಯೋಜಿಸಿ ಸಾವಿರಾರು ಬಡರೋಗಿಗಳಿಗೆ ನೆರವಾಗಿದ್ದರು. ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು, ಉಪನ್ಯಾಸಗಳನ್ನು, ಹೋರಾಟಗಳನ್ನು ಏರ್ಪಡಿಸಿಕೊಂಡು ಬಂದಿದ್ದ ರವಿ ಕುಮಾರ್ ಪ್ರಗತಿಪರರಿಂದ, ಸಾಹಿತಿಗಳಿಂದ, ವಿಚಾರವಂತರಿಂದ, ಶಿಕ್ಷಣ ತಜ್ಞರುಗಳಿಂದ ಪ್ರಶಂಸೆಗೆ ಭಾಜನರಾಗಿದ್ದರು ಸಂಘಟನಾ ಚತುರರಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿ, ಮಂಡ್ಯದ ನೆಲ, ಜಲ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಹೋರಾಡುತ್ತಾ ಬಂದಿದ್ದರು.
ರವಿ ಕುಮಾರ್ ಅವರು 2015 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿ ಹತ್ತಾರು ಸಮ್ಮೇಳನಗಳನ್ನು ನಡೆಸಿದ್ದರು. ಮತ್ತೆ 2021ರಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದ್ದರು. ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದರ ಕುರಿತು ತಮ್ಮ ನಿಲುವನ್ನು ವ್ಯವಸ್ಥಿತವಾಗಿ ಮಂಡಿಸಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರ ನಿಧನ ಕನ್ನಡ ನಾಡಿನ ಅದರಲ್ಲಿಯೂ ಮಂಡ್ಯದ ಸಾಂಸ್ಕೃತಿಕ ಲೋಕಕ್ಕಾದ ದೊಡ್ಡ ನಷ್ಟ. 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಅರ್ಥಪೂರ್ಣವಾಗಿ ನಡೆಸುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ದಾಂಜಲಿ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಹೇಳಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಅಗಲಿದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಈ ಸಂದರ್ಭದಲ್ಲಿ ಮಾತನಾಡಿ “ರವಿಕುಮಾರ್ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ತಮ್ಮ ನಿಲುವಿನಲ್ಲಿ ಗಟ್ಟಿಯಾಗಿ ನಿಲ್ಲುವ ಬೇರೆಯವರನ್ನೂ ತಮ್ಮ ನಿಲುವಿಗೆ ತರುವ ಶಕ್ತಿ ಅವರಿಗಿತ್ತು. ಕೆಲವು ತಿಂಗಳ ಹಿಂದೆ ನಡೆದ ಅಪಘಾತ ಅವರನ್ನು ಜರ್ಜಿತರನ್ನಾಗಿಸಿದ್ದರೂ ಅವರ ಗಟ್ಟಿಯಾದ ಆತ್ಮಸ್ಥೈರ್ಯ ನೋಡಿದರೆ ಚೇತರಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಇತ್ತು. ಆದರೆ ವಿಧಿಯ ನಿರ್ಣಯ ಬೇರೆಯದೇ ಆಗಿದೆ. 54 ನಿಜಕ್ಕೂ ಸಾಯುವ ವಯಸ್ಸಲ್ಲ” ಎಂದರು. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟು ನುಡಿ ನಮನಗಳನ್ನು ಸಲ್ಲಿಸಿದರು. ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಸೇರಿದಂತೆ ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.