ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮತ್ತು ತುಳು ನಾಟಕ ಕಲಾವಿದರ ಒಕ್ಕೂಟ ವತಿಯಿಂದ ಇತ್ತೀಚೆಗೆ ನಿಧನರಾದ ಯಕ್ಷಗಾನದ ಹಿರಿಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 25 ಅಕ್ಟೋಬರ್ 2024ರ ಶುಕ್ರವಾರದಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳು ಅಕಾಡೆಮಿಯ ತುಳು ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಹಿರಿಯ ಯಕ್ಷಗಾನ ಅರ್ಥದಾರಿ ಹಾಗೂ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿ ಮಾತನಾಡಿ “ಜಯರಾಮ ಆಚಾರ್ಯ ಅತ್ಯಂತ ಸೂಕ್ಷ್ಮ ಪ್ರಜ್ಞೆಯ ಕಲಾವಿದರಾಗಿದ್ದರು. ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು. ಸ್ವಾಭಿಮಾನಿಯಾಗಿದ್ದ ಜಯರಾಮ ಆಚಾರ್ಯರ ಕುಟುಂಬದ ಜತೆಗೆ ಅಭಿಮಾನಿಗಳು ನಿಲ್ಲುವ ಆವಶ್ಯವಿದೆ.” ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಅತ್ಯಂತ ಸಜ್ಜನ ಹಾಗೂ ಸ್ವಾಭಿಮಾನಿ ಕಲಾವಿದ ಜಯರಾಮ ಆಚಾರ್ಯರು. ಅವರ ಹೆಸರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿಗೆ ಸೇರ್ಪಡೆಯಾಗಿತ್ತು.” ಎಂದರು.
ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ “ಜಯರಾಮ ಆಚಾರ್ಯ ಅವರೊಂದಿಗೆ ತನಗೆ ಸುದೀರ್ಘ ಕಾಲದ ಒಡನಾಟವಿತ್ತು. ಕಲಾವಿದರ ಪೈಕಿ ಜಯರಾಮ ಆಚಾರ್ಯರು ಅತ್ಯಂತ ಭಿನ್ನ ರೀತಿಯವರು.” ಎಂದರು. ನಟ ಅರವಿಂದ ಬೋಳಾರ್ ಮಾತನಾಡಿ “ತನಗಿಂತ ಕಿರಿಯ ಕಲಾವಿದರಿಗೆ ಗೌರವ ನೀಡುವ ಹಾಗೂ ಸೂಕ್ತ ಮಾರ್ಗದರ್ಶನ ಮಾಡುವಂತ ಔದಾರ್ಯ ಅವರಲ್ಲಿತ್ತು.” ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಉಪಾಧ್ಯಕ್ಷರಾದ ಪುರುಷೋತ್ತಮ ಭಂಡಾರಿ, ತುಳು ನಾಟಕ ಕಲಾವಿರ ಒಕ್ಕೂಟದ ಉಪಾಧ್ಯಕ್ಷರಾದ ಪ್ರದೀಪ್ ಆಳ್ವ, ಹಿರಿಯ ಕಲಾವಿದ ಭಾಸ್ಕರ ರೈ, ನಾರಾಯಣ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿದರು.
ಜಯರಾಮ ಆಚಾರ್ಯರ ಪುತ್ರ ವರುಣ್ ಆಚಾರ್ಯ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಉಪಾಧ್ಯಕ್ಷರಾದ ಜಯಶೀಲ ಅಡ್ಯಂತಾಯ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್, ನಟ ಲಕ್ಷ್ಮಣ್ ಕುಮಾರ್ ಮಲ್ಲೂರು, ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ತುಳು ಅಕಾಡೆಮಿ ಸದಸ್ಯರಾದ ಸಂತೋಷ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ರೋಹಿತ್, ಯಕ್ಷಗಾನ ಅಕಾಡೆಮಿ ಸದಸ್ಯರಾದ ಮೋಹನ್, ಜಿ. ವಿ. ಎಸ್. ಉಳ್ಳಾಲ್, ತುಳು ಅಕಾಡೆಮಿ ಮಾಜಿ ಸದಸ್ಯರಾದ ಬಾಳ ಜಗನ್ನಾಥ ಶೆಟ್ಟಿ ಹಾಗೂ ಬೆನೆಟ್ ಅಮ್ಮನ್ನ ಉಪಸ್ಥಿತರಿದ್ದರು. ತುಳು ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ನಿರೂಪಿಸಿ, ವಂದಿಸಿದರು.