ಮಂಗಳೂರು : ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 16-05-2024ರ ಗುರುವಾರದಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ. ಸಿ. ಭಂಡಾರಿ ತುಳು ಭಾಷೆಯ ಸಂಶೋಧನೆ ಹಾಗೂ ತುಳು ಭಾಷೆಯ ಉಳಿವಿಗಾಗಿ ಸೇವೆ ಸಲ್ಲಿಸಿದವರು ದಿ. ಪಾಲ್ತಾಡಿಯವರು. ಓರ್ವ ಅಧ್ಯಾಪಕರಾಗಿ ಶಾಲಾ ಪಠ್ಯಕ್ರಮದಲ್ಲಿ ಮಕ್ಕಳ ಕಲಿಕೆಗಾಗಿ ತುಳುವಿನ ಸೇರ್ಪಡೆಯು ಪಾಲ್ತಾಡಿಯವರು ನೀಡಿರುವ ದೊಡ್ಡ ಕೊಡುಗೆ.” ಎಂದರು.
ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ ‘ಪಾಲೆದ ಕೆತ್ತೆ’ ಎನ್ನುವ ಆಯುರ್ವೇದ ಗಿಡ ಮೂಲಿಕೆ ಔಷಧಿಯನ್ನು ಮೊದಲ್ಗೊಂಡು ಮಗುವನ್ನು ಮಲಗಿಸಲು ಬಳಸುತ್ತಿದ್ದ ಹಾಳೆ ಸಹಿತವಾಗಿ ತುಳು ನಾಡಿನ ನಂಬಿಕೆ, ಆಚರಣೆಗಳು, ಸಂಸ್ಕೃತಿ ಹಾಗೂ ಗ್ರಾಮೀಣ ಬದುಕಿನ ಜನಪದ ಒಳಮರ್ಮವನ್ನು ಅಧ್ಯಯನ ಮಾಡಿದ ಓರ್ವ ಅದ್ಭುತ ಸಾಧಕ ಶ್ರೇಷ್ಠರು ಪಾಲ್ತಾಡಿಯವರು. ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದುಕೊಂಡ ಪಾಲ್ತಾಡಿಯವರು ತುಳು ಅಕಾಡೆಮಿಯ ರಿಜಿಸ್ಟ್ರಾರ್ ಆಗಿ, ಅಧ್ಯಕ್ಷರಾಗಿ ತುಳು ಭಾಷೆ ಮತ್ತು ಸಂಸ್ಕೃತಿಯ ಒಟ್ಟು ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟಿರುವರು. ತುಳು ಭಾಷಾ ಸಂಸ್ಕೃತಿಯ ಜಿಜ್ಞಾಸೆಗಳಿಗೆ ಓರ್ವ ಅಧಿಕೃತ ವಕ್ತಾರರಂತೆ ಬದುಕಿದವರು ಪಾಲ್ತಾಡಿಯವರು.” ಎಂದರು.
ಅಧ್ಯಕ್ಷತೆ ವಹಿಸಿದ್ದ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ ಕಲ್ಕೂರ ಮಾತನಾಡಿ “ಪಾಲ್ತಾಡಿ ರಾಮಕೃಷ್ಣ ಆಚಾರ್ಯರು ತನ್ನ ಸ್ವಂತ ಪರಿಶ್ರಮ ಹಾಗೂ ಅಧ್ಯಯನ ಶೀಲತೆಯಿಂದ ತುಳು ಭಾಷೆಯ ಬೆಳವಣಿಗೆಗಾಗಿ ಸಕಲ ವಿಧದಲ್ಲೂ ಕೊಡುಗೆ ನೀಡಿದ್ದರು. ಸಮ್ಮೇಳನ, ಕಮ್ಮಟ, ಇತ್ಯಾದಿ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸೇವೆ ಗೈದಿರುವರು. ಸವಣೂರಿನಲ್ಲಿ ಜರಗಿದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ಸಿನಲ್ಲಿ ಹಾಗೂ ಪುತ್ತೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನ ನೆಲೆಯಲ್ಲಿಯೂ ಪಾಲ್ತಾಡಿಯವರ ಸಾಹಿತ್ಯ ಸೇವೆ ಅನುಪಮವಾದುದು.” ಎಂದರು.
ಸಾರಸ್ವತ ಲೋಕಕ್ಕೆ ಪಾಲ್ತಾಡಿಯವರ ಕೊಡುಗೆ ಅನನ್ಯವಾದುದು ಎಂದು ಕ. ಸಾ. ಪ. ದ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ನುಡಿದರು.
ಸುಂದರ ಶೆಟ್ಟಿ ಬೆಟ್ಟಂಪಾಡಿ ಮಾತನಾಡಿ “ತನ್ನ ಮತ್ತು ಪಾಲ್ತಾಡಿಯವರ ಬಾಲ್ಯದ ಬದುಕಿನಿಂದ ಪ್ರಭುತ್ವದವರೆಗಿನ ಬಾಂಧವ್ಯ ಪ್ರೇರಣಾದಾಯಕವಾಗಿತ್ತು.” ಎಂದು ಸ್ಮರಿಸಿದರು. ಡಾ. ಮಂಜುಳಾ ಶೆಟ್ಟಿ ನುಡಿನಮನ ಸಲ್ಲಿಸಿ “ರಾಮಕೃಷ್ಣ ಆಚಾರ್ಯರು ತಮ್ಮ ಹುಟ್ಟೂರಿನ ಹೆಸರನ್ನು ವಿಶ್ವಕ್ಕೆ ಪರಿಚಯಿಸಿದವರು. ಕರಾವಳಿಯ ಗುರು ಪರಂಪರೆಯಲ್ಲಿ ಓರ್ವ ‘ಐಕಾನ್’ ಆಗಿ ಗುರುತಿಸಲ್ಪಟ್ಟವರು. ಮೃದು ಭಾಷಿ ಹಾಗೂ ಗುಣಗ್ರಾಹಿತ್ವ ಹೊಂದಿದ್ದ ಓರ್ವ ಆದರ್ಶ ಶಿಕ್ಷಕರು.” ಎಂದು ಬಣ್ಣಿಸಿದರು. ಕೆ. ತಾರಾನಾಥ ಹೊಳ್ಳ, ಡಿ. ಐ. ಅಬೂಬಕರ್ ಕೈರಂಗಳ, ಮುಲ್ಕಿ ಕರುಣಾಕರ ಶೆಟ್ಟಿ, ಜಿ. ಕೆ. ಭಟ್ ಸೇರಾಜೆ, ಚಂದ್ರಶೇಖರ ಶೆಟ್ಟಿ, ಅರುಣಾ ನಾಗರಾಜ್ ಪುಷ್ಪನಮನ ಸಲ್ಲಿಸಿದರು.