ಕೋಣಾಜೆ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಂಗಳೂರು ವಿವಿ ವತಿಯಿಂದ ವಿವಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ದಿನಾಂಕ 09 ಜನವರಿ 2025ರಂದು ನಾ. ಡಿಸೋಜ ನುಡಿನಮನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ ಕುಲಸಚಿವ ರಾಜು ಮೊಗವೀರ ಇವರು ಮಾತನಾಡಿ “ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಕನ್ನಡದ ಲೇಖಕ ನಾ. ಡಿಸೋಜ, ಅವರ ಕಾದಂಬರಿಗಳಲ್ಲಿ ಪ್ರಕೃತಿ ವಿನಾಶದ ದುಷ್ಪರಿಣಾಮಗಳ ಕುರಿತು, ಅಭಿವೃದ್ಧಿಯ ಅಮಾನವೀಯ ಮುಖ ಅನಾವರಣಗೊಂಡಿದೆ. ಅಭಿವೃದ್ಧಿಯ ಮಾದರಿಗಳು ಭಿನ್ನ ಇರಬಹುದು. ಶರಾವತಿಯಲ್ಲಿ ಮುಳುಗಡೆಯಿಂದ, ರಸ್ತೆ ಅಗಲೀಕರಣದಿಂದ, ವಿಮಾನ ನಿಲ್ದಾಣದಿಂದ ಹೀಗೆ ಬೇರೆ ಬೇರೆ ಕಾರಣಗಳಿಂದ ಮನೆ, ಜಾಗ ಕಳೆದುಕೊಂಡು ವಲಸೆ ಹೋಗಬೇಕಾದವರ ಭಾವನೆಗಳು, ಸಂಕಟಗಳು ಸಮಾನ. ಬರಹಗಾರರು ಇಂತಹ ನೋವಿಗೆ ಮಿಡಿಯುತ್ತಾರೆ. ನಾ. ಡಿಸೋಜರ ಬರಹದಲ್ಲಿ ಅದನ್ನು ಕಾಣಬಹುದಾಗಿದೆ.” ಎಂದು ತಿಳಿಸಿದರು.
ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿದರು. ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಪುಷ್ಪ ನಮನ ಸಲ್ಲಿಸಿದರು. ಉಳ್ಳಾಲ ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದಾಮೋದರ್ ಕುಂದರ್, ಕ.ಸಾ.ಪ. ಗೌರವ ಕಾರ್ಯದರ್ಶಿ ರಾಜೇಶ್ವರಿ, ಉಳ್ಳಾಲ ಕ.ಸಾ.ಪ. ಕಾರ್ಯದರ್ಶಿ ರವೀಂದ್ರ ರೈ ಹರೇಕಳ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ದೇರಳಕಟ್ಟೆ, ಪುಷ್ಪರಾಜ್ ಮಂಗಳೂರು, ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ್ ರೇವಣ್ಕರ್, ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮೀ ರೈ ಕಲ್ಲಿಮಾರ್, ಶಿಕ್ಷಕ ತ್ಯಾಗಂ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.