ಮಂಗಳೂರು : ನೃತ್ಯಗುರು ಕಮಲಾ ಭಟ್ ಇವರ ಶಿಷ್ಯ ವರ್ಗದವರು ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರಂದು ಉರ್ವದ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕಟೀಲಿನ ವೇದಮೂರ್ತಿ ಕಮಲಾದೇವಿ ಪ್ರಸಾದ್ ಆಸ್ರಣ್ಣ “ನಾಲ್ಕು ದಶಕದ ಹಿಂದೆ ನಗರದಲ್ಲಿ ನಾಟ್ಯದ ಮೂಲಕ ಕಲೆಯ ದೀಪ ಬೆಳಗಿಸಿ ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿ, ಕಲಾ ಬದುಕಿನಲ್ಲಿ ಸಾರ್ಥಕ್ಯ ಕಂಡು ಇದೀಗ ದೇವರ ಪಾದ ಸೇರಿದ ಗುರು ಕಮಲ ಭಟ್ ಸದಾ ಸ್ಮರಣೀಯರು. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಇವೆರಡುಗಳ ಮಧ್ಯೆ ಬದುಕನ್ನು ಕಟ್ಟಿಕೊಂಡು ಕಲಾಮಾತೆಯ ಸೇವೆಯನ್ನು ಮಾಡುತ್ತ, ಶ್ರೀ ಕ್ಷೇತ್ರ ಕಟೀಲಿನ ಪರಮ ಭಕ್ತೆ ಕಮಲ ಭಟ್ ಅವರಿಗೆ ಜಗನ್ಮಾತೆಯು ಸದ್ಗತಿ ನೀಡಲಿ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಅವರ ಶಿಷ್ಯರು ಮುನ್ನಡೆಯಲು ದೇವರ ಆಶೀರ್ವಾದ ಸದಾ ಇರಲಿ” ಎಂದು ನುಡಿದರು.
ಪ್ರದೀಪ್ ಕುಮಾರ್’ ಕಲ್ಕೂರ ಮಾತನಾಡಿ, “ಕಲಾಸೇವೆ ತನ್ನ ಜೀವನದ ಸರ್ವಸ್ವ, ಕಲಾರಾಧನೆಯೊಂದಿಗೆ ಸಮಾಜಮುಖಿಯಾಗಿ ಆದರ್ಶ ಗುರುವಾಗಿ ಎಲ್ಲರೊಂದಿಗೆ ಸೌಹಾರ್ದ ಬದುಕನ್ನು ಕಟ್ಟಿಕೊಂಡ ಗುರು ಕಮಲ ಭಟ್ ಸದಾ ಸ್ಮರಣೀಯರು” ಎಂದರು. ನಾಟ್ಯ ಗುರು ಉಳ್ಳಾಲ ಮೋಹನ ಕುಮಾರ್ ಮಾತನಾಡುತ್ತಾ “ಶಿಷ್ಯೆಯಾಗಿದ್ದು ಮಗಳ ಸಮಾನರಾಗಿದ್ದ ಕಮಲಾ ಭಟ್ ಅವರ ಗುರುಭಕ್ತಿ, ನೃತ್ಯದ ಬಗೆಗೆ ಅವರಿಗಿದ್ದ ಆಸಕ್ತಿ ಹೀಗೆ ಹಳೆಯ ನೆನಪು ಗಳನ್ನು ಮತ್ತೆ ನೆನಪಿಸಿಕೊಳ್ಳುವ ಮೂಲಕ ನುಡಿ ನಮನ ಸಲ್ಲಿಸಿದರು.
ಹಿರಿಯ ಶಿಷ್ಯೆ ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ಸಹನ ಭಟ್ ಹುಬ್ಬಳ್ಳಿ, ವಿದುಷಿ ಸೌಮ್ಯ ಸುಧೀಂದ್ರ, ವಿದುಷಿ ಸುನಿತಾ ಶೃಂಗೇರಿ, ಡಾ. ಹರಿಕೃಷ್ಣ ಪುನರೂರು, ಸಂಸ್ಕಾರ ಭಾರತಿಯ ಚಂದ್ರಶೇಖರ ಶೆಟ್ಟಿ, ವಿದ್ವಾನ್ ಚಂದ್ರಶೇಖರ ನಾವಡ ಮೊದಲಾದವರು ನುಡಿ ನಮನ ಸಲ್ಲಿಸಿದರು. ಶಾಸಕ ವೇದವ್ಯಾಸ ಕಾಮತ್, ಪುತ್ರ ಕಿರಣ್, ಸೊಸೆ ಸಿಂಧು, ವಿನಯರಾವ್, ವಾಣಿ ಲಕ್ಷ್ಮೀಶ್ ಉಪಸ್ಥಿತರಿದ್ದರು. ಸಂಘಟಕ ಶ್ರೀಧರ ಹೊಳ್ಳ ನಿರೂಪಿಸಿ, ವಿದ್ವಾನ್ ಗಣೇಶ್ ರಾಜ್ ನಾದನಮನ ಸಲ್ಲಿಸಿದರು.