ಉಪ್ಪಳ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಇವರನ್ನು ದಿನಾಂಕ 31 ಸೆಪ್ಟೆಂಬರ್ 2025ರಂದು ಪೈವಳಿಕೆಯ ಸಮೀಪದ ಕೊಳಚಪ್ಪುವಿನಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಚೆತ್ತೋಡಿಯವರು ಸತ್ಯವತಿಯವರನ್ನು ಶಾಲು ಹೊದೆಸಿ ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ, ಸಾಹಿತಿ ಪ್ರೊ. ಪಿ.ಎನ್. ಮೂಡಿತ್ತಾಯ ಇವರು ಮಾತನಾಡಿ “ಸತ್ಯವತಿ ಭಟ್ ಕೊಳಚಪ್ಪು ಇವರು ಅಂಬಾ ಅಂಬಾ, ಗೊಂಚಲು ಕವನ ಸಂಕಲನಗಳ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿ ಕಾಮನಬಿಲ್ಲು, ನವಿಲಗರಿ, ಮುತ್ತು- ಅಮ್ಮನ ಕೈ ತುತ್ತು, ಸ್ವಾತಿಮುತ್ತು, ದಿಗಂತದಾಚೆಗಿನ ನೋಟಗಳು, ಮತ್ತೆ ನಕ್ಕಳು ಪ್ರಕೃತಿ, ಕುಂದಣದ ಹರಳುಗಳು, ಮುಷ್ಟಿ ಸಮಷ್ಟಿ ಮೊದಲಾದ ಹತ್ತು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಸಾಹಿತ್ಯ ಕೃಷಿ ಮಾತ್ರವಲ್ಲದೆ ಜೇನು ಸಾಕಣೆ, ಕಸೂತಿ, ಈಜು, ಯೋಗ, ಪ್ರಾಣಾಯಾಮ ಎಲ್ಲದರಲ್ಲೂ ಸೈ ಎನಿಸಿಕೊಂಡವರು. ಸತ್ಯವತಿ ಭಟ್ ಅವರ ಸಾಧನೆ, ಜೀವನೋತ್ಸಾಹ ಮಹಿಳೆಯರಿಗೆ ಸಾಧನೆ ಮಾಡಲು ಸ್ಫೂರ್ತಿ ನೀಡಬಲ್ಲುದು” ಎಂದು ಹೇಳಿದರು.
ಮೀಂಜ ಕೊಳಚಪ್ಪು, ಶ್ರೀ ಶಾಸ್ತಾವೇಶ್ವರ ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಕೆ., ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕ್ಷೇತ್ರ ಅರ್ಚಕ ಸುಬ್ರಹ್ಮಣ್ಯ ಭಟ್ ಕೊಳಚ್ಚಪ್ಪು, ಸಾಹಿತಿ ಲತೀಶ್ ಸಂಕೊಳಿಗೆ, ಸತ್ಯವತಿ ಭಟ್ ಪುತ್ರ ಬಿ. ಮಹಾಬಲ ತಿಲಕ, ಮಹಾವೀರ ಶಿವಮೊಗ್ಗ, ಸವಿತಾ ಶಿವಮೊಗ್ಗ ಉಪಸ್ಥಿತರಿದ್ದರು. ಸತ್ಯವತಿ ಭಟ್ ಇವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿ “ಡಾ. ರಮಾನಂದ ಬನಾರಿಯವರ ಕವನಗಳನ್ನು ಓದಿ ಸ್ಫೂರ್ತಿ ಪಡೆದು ತಾನು ಸಾಹಿತ್ಯ ಕೃಷಿಯನ್ನು ಆರಂಭಿಸಿದೆ. ಮನೆಯವರ ಪ್ರೋತ್ಸಾಹ ಈ ಇಳಿವಯಸ್ಸಿನಲ್ಲೂ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿತು” ಎಂದು ಹೇಳಿದರು. ಕ.ಸಾ.ಪ. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ಸಾವಿತ್ರಿ ವಂದಿಸಿದರು.