ಮಂಗಳೂರು : ಸುರತ್ಕಲ್ ನ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ‘ಸಂದೇಶ ಪ್ರಶಸ್ತಿ’ ಪುರಸ್ಕೃತರಾದ ಡಾ. ಇಂದಿರಾ ಹೆಗ್ಗಡೆಯವರನ್ನು ದಿನಾಂಕ 26 ಜನವರಿ 2026ರಂದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿಕಿ ಸೋರ್ಸ್ ಮತ್ತು ವಿಕಿಪೀಡಿಯಾದ ಕನ್ನಡ, ತುಳು ಭಾಷಾ ಸಮೂಹ ಬಳಗವು ವಿಕಿಸೋರ್ಸ್ ಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಇಂದಿರಾ ಹೆಗ್ಗಡೆಯವರಿಗೆ ಕೃತಜ್ಞತಾ ಪ್ರಮಾಣ ಪತ್ರವನ್ನು ನೀಡಿ ಸಂಮಾನಿಸಿತು.
ಮಂಗಳೂರು ವಿ.ವಿ.ಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕಿ ಕವಿತಾ ಗಣೇಶ್ ಮಾತನಾಡಿ “2023ರ ಸೆಪ್ಟೆಂಬರ್ ನಲ್ಲಿ ಗೋವಿಂದ ದಾಸ ಕಾಲೇಜಿನಲ್ಲಿ ಸಾಹಿತಿಗಳ ಅನುಮತಿಯೊಂದಿಗೆ ಅವರ ಕೃತಿಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯದ ತರಬೇತಿ ಪಡೆದು ಇದೀಗ ಕನ್ನಡ ವಿಕಿಸೋರ್ಸ್ ನೊಂದಿಗೆ ತುಳು ವಿಕಿಸೋರ್ಸ್ ನ್ನು ಆರಂಭಿಸಲಾಗಿದೆ. ತುಳು ವಿಕಿಸೋರ್ಸ್ ಹನ್ನೆರಡು ಲೇಖಕರ 101 ಪುಸ್ತಕಗಳನ್ನು ಡಿಜಿಟೈಸೇಷನ್ ಮಾಡುತ್ತಿದ್ದು, ಲೇಖಕರ ಸಹಕಾರ ಅಗತ್ಯ” ಎಂದರು.

ಕೆನರಾ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಬಬಿತ ಶೆಟ್ಟಿ ವಿಕಿಸೋರ್ಸ್ ನ ವಿವಿಧ ದಾಖಲೀಕರಣ ಯೋಜನೆಗಳನ್ನು ವಿವರಿಸಿದರು. ವಿಕಿಪೀಡಿಯದ ತರಬೇತುದಾರ ಬೆನೆಟ್ ಅಮ್ಮಣ್ಣ ಕಣ್ಮರೆಯಾಗುತ್ತಿರುವ ಮಾಹಿತಿಗಳನ್ನು ಉಳಿಸಿ ದಾಖಲಿಸುವ ಕ್ರಮಗಳನ್ನು ತಿಳಿಸಿದರು. ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಸಂಶೋಧನಾ ಸಾಧ್ಯತೆ ತಿಳಿಸಿದರು. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಕೃಷ್ಣ ಮೂರ್ತಿ ಸ್ವಾಗತಿಸಿ, ಕೋಶಾಧಿಕಾರಿ ಡಾ. ಜ್ಯೋತಿ ಚೇಳ್ಯಾರು ವಂದಿಸಿದರು. ಸದಸ್ಯೆ ಸುಜಾತ, ಟಿ.ವಿ. ನಿರೂಪಕ ಪ್ರಕಾಶ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.
