ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ವತಿಯಿಂದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಕುತ್ತಾರಿನ ಹೊಟೇಲ್ ವೆಜಿನೇಷನ್ ಸಭಾಂಗಣದಲ್ಲಿ ದಿನಾಂಕ 25-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ.ಸಾ.ಪ. ಜಿಲ್ಲಾ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ “ಸಮಾಜ ಕಟ್ಟುವ ಕೆಲಸ ನಮ್ಮಿಂದ ಆಗಬೇಕಾಗಿದೆ. ನೃತ್ಯ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಸಾಧನೆಗಳನ್ನು ಮಾಡಿದ ಸಾಧಕರು ಜಿಲ್ಲಾಡಳಿತದಿಂದ ಗುರುತಿಸಲ್ಪಟ್ಟು, ಇದೀಗ ಅಬ್ಬಕ್ಕ ಉತ್ಸವ ಸಮಿತಿ ಅವರನ್ನು ಅಭಿನಂದಿಸುವ ಕಾರ್ಯಕ್ರಮವು ಮಹತ್ತರವಾದದ್ದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯ ರತ್ನ ವಿದ್ವಾನ್ ಮೋಹನ್ ಕುಮಾರ್ ಇವರನ್ನು ತಮ್ಮ 90ನೇ ವರ್ಧಂತಿ ಅಂಗವಾಗಿ ಹಾಗೂ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೃತ್ಯ ಗುರುಗಳಾದ ವಿದ್ವಾನ್ ಪ್ರಮೋದ್ ಉಳ್ಳಾಲ್ ಮತ್ತು ಪ್ರಖ್ಯಾತ ಶಿಲ್ಪ ಕಲಾಕಾರರಾದ ಕಲಾರತ್ನ ಉಮೇಶ್ ಬೋಳಾರ್ ಅವರನ್ನು ಸನ್ಮಾನಿಸಲಾಯಿತು. ಡಾ. ದೇವಕಿ .ಆರ್ ಉಳ್ಳಾಲ್, ಶ್ರೀಮತಿ ಶಶಿಕಾಂತಿ ಉಳ್ಳಾಲ್ ಹಾಗೂ ಶ್ರೀ ಮತಿ ಅನುಪಮ ಸನ್ಮಾನಿತರ ಪರಿಚಯ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯರತ್ನ ಮೋಹನ್ ಕುಮಾರ್ ಅವರು, “ನೃತ್ಯ ಎಂಬುದು ಒಬ್ಬರ ಸೊತ್ತಲ್ಲ. ಎಲ್ಲರೂ ಕಲಿಯುವಂತಾಗಬೇಕು. ಪವಿತ್ರವಾದ ಕಲೆ ವೇದದಿಂದ ಬಂದಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯ ಯುವಪೀಳಿಗೆಯದ್ದಾಗಿದೆ” ಎಂದು ಹೇಳಿದರು.
ಮಾಜಿ ಶಾಸಕ ಜಯರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ಬಕ್ಕ ಉತ್ಸವ ಸಮಿತಿಯ ಕೋಶಾಧಿಕಾರಿ ಆನಂದ ಅಸೈಗೋಳಿ, ಸದಸ್ಯ ಆಲಿಯಬ್ಬ, ಮಹೇಶ್, ಸದಾನಂದ ಬಂಗೇರ, ಜಾನಕಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿನಕರ ಉಳ್ಳಾಲ್ ಸ್ವಾಗತಿಸಿ, ಕೆ.ಎಂ.ಕೆ. ಮಂಜನಾಡಿ ಧನ್ಯವಾದ ಸಮರ್ಪಿಸಿದರು.