ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಮೈಸೂರು ಆಯೋಜಿಸಿರುವ ‘ರಂಗವಿಮರ್ಶೆ ಸದ್ಯದ ಸ್ಥಿತಿ ಸಾಧ್ಯತೆ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವು ದಿನಾಂಕ 08 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ಇಲ್ಲಿರುವ ನಮನ ಕಲಾವೇದಿಕೆಯಲ್ಲಿ ನಡೆಯಲಿದೆ.
ಶಶಿಕಾಂತ ಯಡಹಳ್ಳಿ, ಎನ್. ಧನಂಜಯ, ಯತೀಶ್ ಕೊಳ್ಳೇಗಾಲ, ಸುಗುಣ ನಿರಂತರ, ರವಿ ಕುಮಾರ್ (ಕಲಾಬ್ರಹ್ಮ) ಪ್ರಸನ್ನ ಕುಮಾರ್ ಕೆರಗೋಡು, ಕುಸುಮಾ ಆಯರಹಳ್ಳಿ ಇವರುಗಳು ಸಂವಾದದಲ್ಲಿ ಭಾಗವಹಿಸಲಿದ್ದು, ಪ್ರೊ. ಎಸ್.ಆರ್. ರಮೇಶ್ ಇವರು ನಿರ್ವಹಣೆ ಮಾಡಲಿದ್ದಾರೆ.
ನಾಟಕ ನೋಡುವುದೇ ಒಂದು ಚಂದ. ನೋಡಿದ ಮೇಲೆ ನಾಟಕದ ಕಥಾವಸ್ತುವನ್ನು ಅದರ ಪ್ರಸ್ತುತತೆಯನ್ನು ಅರ್ಥೈಸಿಕೊಳ್ಳುವುದು, ರಂಗಪ್ರಯೋಗದ ಸೂಕ್ಷ್ಮತೆಗಳು, ಅಂತರ್ಗತ ಅರ್ಥಗಳು ಪ್ರೇಕ್ಷಕರಿಗೆ ಸಂವಹನೆಯಾದ ಬಗೆ ಈ ಎಲ್ಲಾ ಅಂಶಗಳೊಂದಿಗೆ ನಾಟಕದೊಳಗೆ ಮರುಪ್ರವೇಶ ಮಾಡಿ, ಚಿಂತನ ಮಂಥನ ನಡೆಸಿ ಮತ್ತೆ ರಂಗಾಸಕ್ತರ ಮುಂದಿಡುವುದನ್ನು ಒಂದರ್ಥದಲ್ಲಿ ರಂಗವಿಮರ್ಶೆ ಎನ್ನಬಹುದು. ರಂಗವಿಮರ್ಶೆ ಹಿಂದೆ ಹೇಗಿತ್ತು ? ಸದ್ಯ ಹೇಗಿದೆ ?? ಸಾಧ್ಯತೆಗಳು ಏನೆಲ್ಲಾ ಇರಬಹುದು ??? ವಿಷಯ ಕುರಿತ ಸಂವಾದ.

