ಮಂಗಳೂರು: ಮಂಗಳೂರಿನ ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಖ್ಯಾತ ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರೊಂದಿಗಿನ ಸಂವಾದ ಕಾರ್ಯಕ್ರಮ ದಿನಾಂಕ 09 ಫೆಬ್ರವರಿ 2025 ರಂದು ಮಂಗಳೂರಿನ ಕೊಡಿಯಾಲ್ ಗುತ್ತು ಕಲೆ ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.
ಸಂವಾದದಲ್ಲಿ ಮಾತನಾಡಿದ ಖ್ಯಾತ ಕವಿ ಬಿ.ಆರ್. ಲಕ್ಷ್ಮಣ ರಾವ್ “ನನ್ನನ್ನು ಭಾವಗೀತೆಗಳಿಂದಲೇ ಗುರುತಿಸುತ್ತಾರೆ. ಭಾವಗೀತೆಗಳು ಅರಮನೆಯ ಹೆಬ್ಬಾಗಿಲಿನಂತೆ. ಒಳಗಡೆಗೂ ಹೋಗಬೇಕು. ಭಾವಗೀತೆಗಳ ಬಗ್ಗೆ ಮಾತನಾಡುವಾಗ ಅದರಲ್ಲಿರುವ ಕಾವ್ಯಾಂಶಗಳ ಬಗ್ಗೆ ಮಾತಾಡಿ, ನನ್ನ ಕವನಗಳು ಜನಮಾನಸದಲ್ಲಿ ಉಳಿದಿದೆ ಎನ್ನುವಾಗ ಸಾರ್ಥಕತೆ ಮತ್ತು ಕವನ ಪದ್ಯವಾಗಿ ಹಾಡಾಗಿ ಉಳಿದಾಗ ಖುಷಿಯಾಗುತ್ತದೆ. ಗಂಭೀರ ಕವನಗಳೂ ನವ್ಯ ಕವನಗಳೂ ಉಳಿದಿವೆ ಎಂದ ಅವರು ಮೂವತ್ತು ವರ್ಷಗಳ ಹಿಂದೆ ಕ್ಯಾಸೆಟ್ ಕಾಲದಲ್ಲಿ ಮದ್ರಾಸಿಗೆ ಹೋಗಿದ್ದೆವು ರೆಕಾರ್ಡ್‌ಗೆ. ಅಲ್ಲಿಂದ ರೆಕಾರ್ಡ್ ಮುಗಿಸಿ ರೈಲಿನಲ್ಲಿ ನಾನು ಸಿ. ಅಶ್ವತ್ ಬಾಲಿ ವಾಪಾಸು ಬರಲು ನಿಂತಿದ್ದಾಗ ಇಬ್ಬರು ಪೊಲೀಸರು ಬಂದು ಅಶ್ವತ್‌ರಿಗೆ ಅಡ್ಡ ಬಿದ್ದು ನಮಸ್ಕರಿಸಿ ನಿಮ್ಮ ಅಭಿಮಾನಿಗಳು ನಾವು ನಿಮ್ಮ ಹಾಡು ಕೇಳಿ ಮಲಗೋದು ಎಂದರು. ಪೊಲೀಸರು ಮನಸೇ ಮನಸೇ ಕವನವನ್ನು ಹೊಗಳಿದಾಗ ಆ ಕವನ ಬರೆದವರು ಇವರೇ ಎಂದು ಹೇಳಿ ನನ್ನ ಕಾಲಿಗೂ ನಮಸ್ಕಾರ ಮಾಡಿಸಿದ್ದರು” ಎಂದು ನೆನಪಿಸಿಕೊಂಡರು.
ಖ್ಯಾತ ಸಾಹಿತಿ ನಾ. ದಾಮೋದರ ಶೆಟ್ಟಿ ಮಾತನಾಡಿ “ಹೊಸತಲೆಮಾರಿನವರೂ ಸಿದ್ದತೆ ಮಾಡಿ, ಹಾಡಿ, ಮಾತಾಡಿಸುವುದೂ ಕವಿಗೆ ಸಿಗುವ ನಿಜವಾದ ಸಂಮಾನ” ಎಂದರು.
ಜಯಂತ್ ಕೋಡ್ಕಣಿ ಮಾತನಾಡಿ “ಲಕ್ಷ್ಮಣ್ ರಾವ್ ಪ್ರೀತಿಯ ಹಂಚುವ ಕವಿ. ಅನೇಕರು ಕವಿತೆ ಬರೆದು ಸುಮ್ಮನೆ ಕೂತು ಕೈಗೇ ಸಿಗದೆ ಇರುತ್ತಾರೆ ಆದರೆ ಬಿ. ಆರ್. ಎಲ್. ಜನರಿಗೆ ಕೈಗೆ ಸಿಗುವ ಕವಿ. ಮಂದಿಯ ಜೊತೆ ಸೇರುವ ಕವಿ ಆದುದರಿಂದ ಇಷ್ಟ ಆಗುತ್ತಾರೆ. ಲಕ್ಷ್ಮಣ ರಾಯರು ಕ್ರೀಡೆಯ ಬಗ್ಗೆಯೂ ಕವನ ಬರೆದವರು” ಎಂದು ಹೇಳಿದರು.
ಈ ಬಗ್ಗೆ ಬಿ. ಆರ್. ಎಲ್. ಮಾತನಾಡಿ “ನಾನು ಕ್ರೀಡೆ, ಕಲೆ ಹೀಗೆ ಎಲ್ಲದರಲ್ಲೂ ಆಸಕ್ತ. ಜಿ. ಆರ್. ವಿಶ್ವನಾಥ್ ಬಗ್ಗೆ ನನ್ನ ತಂದೆಗೆ ವಿಶೇಷ ಆಸಕ್ತಿ. ನಾವು ಚಿಂತಾಮಣಿಯಿಂದ ಚೆನ್ನೈಗೆ ಹೋಗಿ ಕ್ರಿಕೆಟ್ ನೋಡಿದ್ದೂ ಇದೆ. ವಿಶ್ವನಾಥ್ ಬಗ್ಗೆ ಕವನ ಬರೆದಾಗ ವೆಂಕಟೇಶಮೂರ್ತಿ ಅಭಿನಂದಿಸಿದ್ದ. ವಿಶ್ವನಾಥ ಕಲೆಗಾರ ಎಂದು ಬರೆದಿದ್ದೆ. ಕ್ರೀಡಾಪಟು ಅಂತ ಅಲ್ಲ” ಎಂದರು.
ನರೇಂದ್ರ ಪೈ ಮಾತನಾಡಿ “ಲಕ್ಷ್ಮಣ ರಾಯರು ಹಕ್ಕಿ ಮನೆ ಒಳಗೆ ಬಂದು ಆಚೀಚೆ ಹೋಗಿ ಕನ್ನಡಿ ನೋಡಿ ಹೋದದ್ದನ್ನೂ ಒಂದು ಕವಿತೆಯನ್ನಾಗಿಸಿದ್ದಾರೆ. ‘ವಾಸಂತಿ ಸಿಕ್ಕಿದ್ದಾಳೆ ಉಳಿದು ಹೋಗಿದ್ದಾಳೆ’ ಕವನವೂ ಹೀಗೆ. ದೈನಂದಿನ ಜೀವನದ ಸಂಗತಿಗಳ ಬಗ್ಗೆ ಕಾವ್ಯ ಕಟ್ಟುತ್ತ ಆಪ್ತವಾಗುತ್ತಾರೆ ಇಷ್ಟವಾಗುತ್ತಾರೆ” ಎಂದರು.
ವಸಂತಕುಮಾರ ಪೆರ್ಲ ಮಾತನಾಡಿ “ಬೆಂಗಳೂರಿನಲ್ಲಿ ಬಿ. ಆರ್. ಎಲ್. ಸೇರಿದಂತೆ ನಾವು ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆ ಜೊತೆಯಾಗುತ್ತಿದ್ದೆವು. ಚಿಂತಾಮಣಿಯಲ್ಲಿ ಅವರ ತಂದೆ ರಾಜಾರಾಯರು ಇಪ್ಪತ್ತು ಮೂವತ್ತು ಮಂದಿ ಕವಿಗಳ ಭಾವಚಿತ್ರ ತೆಗೆದಿದ್ದರು” ಎಂದು ಹಳೆಯ ನೆನಪು ಮಾಡಿಕೊಂಡರು.
ರಘು ಇಡ್ತಿದು ಅಭಿಪ್ರಾಯ ಹೇಳಿದರು. ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು. ವಿನಮ್ರ ಇಡೀದು ಲಕ್ಷ್ಮಣ ರಾಯರ ಭಾವಗೀತೆಗಳಿಗೆ ದನಿಯಾದರು. ಪ್ರೊ. ಪಿ. ಕೃಷ್ಣಮೂರ್ತಿ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಸುಭಾಸ್ ಚಂದ್ರ ಬಸು, ಸುಬ್ರಾಯ ಭಟ್, ಬಿ. ಆರ್. ಎಲ್. ಇವರ ಪತ್ನಿ ಗಿರಿಜಾ ಉಪಸ್ಥಿತರಿದ್ದರು.