ಪುತ್ತೂರು : ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇದರ ‘ನೃತ್ಯ ತರಂಗಿಣಿ’ ಸರಣಿ ಕಾರ್ಯಕ್ರಮದ ಅಂಗವಾಗಿ ಮಾಸ್ಟರ್ ಶಮಂತಕ ಜೊತೆಗಿನ ಮುಕ್ತ ಸಂವಾದ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025ರಂದು ಬರೆಕೆರೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.

ಡ್ಯಾನ್ಸ್ ಫೆಡರೇಶನ್ ಆಫ್ ಇಂಡಿಯಾದ ಯುವಕಲಾ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಬಾಲ ಕಲಾವಿದ ಮಾಸ್ಟರ್ ಶಮಂತಕ ಹಾಗೂ ಅವರ ತಾಯಿ ವಿದುಷಿ ಸವಿತಾ ಹೆಗಡೆ ಇವರೊಂದಿಗೆ ಸಂವಾದ ಏರ್ಪಟ್ಟಿತು. ವಿದುಷಿ ಸವಿತಾ ಹೆಗಡೆಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ನೃತ್ಯೋಪಾಸನಾ ಕಲಾ ಅಕಾಡೆಮಿ ಅಧ್ಯಕ್ಷ ಮಂಜುನಾಥ ಪಿ.ಎಸ್. ಹಾಗೂ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಉಪಸ್ಥಿತರಿದ್ದರು.


ಮಾಸ್ಟರ್ ಶಮಂತಕನ ನೃತ್ಯಾಭ್ಯಾಸ ಆರಂಭದ ಕುರಿತು ವಿದುಷಿ ಸವಿತಾ ಹೆಗಡೆ ತಿಳಿಸಿದರು. ಅದರಂತೆಯೇ ವಿದ್ಯಾರ್ಥಿಗಳಲ್ಲಿ ಇರಬೇಕಾದ ಆಸಕ್ತಿ, ಪ್ರತಿನಿತ್ಯದ ಅಭ್ಯಾಸ, ಹಾಗೆಯೇ ನೃತ್ಯದಲ್ಲಿ ಅಡವುಗಳ ಹಾಗೂ ವ್ಯಾಯಾಮ ಕ್ರಿಯೆಗಳ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ಮಕ್ಕಳ ಆಸಕ್ತಿಯ ವಿಷಯದಲ್ಲಿ ಪೋಷಕರು ನೀಡಬೇಕಾದ ಪೋತ್ಸಾಹದ ಬಗೆಗೆ ವಿವರಣೆ ನೀಡಿದರು. ಅಂತೆಯೇ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರ ಪ್ರಶ್ನೆಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿವರಣೆ ನೀಡಿದರು. ಹಾಗೆಯೇ ಮಾಸ್ಟರ್ ಶಮಂತಕ ವಿದ್ಯಾರ್ಥಿಗಳಲ್ಲಿದ್ದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು. ಕಲಾ ಅಕಾಡೆಮಿ ವಿದ್ಯಾರ್ಥಿನಿ ಅಂಕಿತ ಬಿ. ಪ್ರಾರ್ಥಿಸಿದರು. ಇನ್ನೋರ್ವ ವಿದ್ಯಾರ್ಥಿನಿ ವಿದುಷಿ ಶ್ರೇಯ ನಿರೂಪಿಸಿದರು.
