ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 15 ಆಗಸ್ಟ್ 2025ರಿಂದ 17 ಆಗಸ್ಟ್ 2025ರವರೆಗೆ ಕಲೆ- ಸಂಸ್ಕೃತಿ- ಸಾಹಿತ್ಯ ಉಳಿಸುವ, ಬೆಳೆಸುವ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯಂತೆ ಮೂರು ದಿನಗಳಲ್ಲಿ ಭಜನೆ, ಹರಿಸಂಕೀತನೆ, ಗಮಕ, ಹವ್ಯಾಸಿ ತಂಡಗಳ ಯಕ್ಷಗಾನ ತಾಳಮದ್ದಳೆಗಳು, ವಿದ್ಯಾರ್ಥಿ ಸಮಾಗಮ ಯಶಸ್ವಿಯಾಗಿ ನಡೆಯಿತು.
ಮೊದಲ ದಿನ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿಯವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ಪಿ.ಯನ್. ಮೂಡಿತ್ತಾಯರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಅಥಿತಿಗಳನ್ನು ಸ್ವಾಗತಿಸಿ, ಜಗದೀಶ ಕೆ. ಕೂಡ್ಲು ನಿರೂಪಿಸಿದರು.
ಎರಡನೇ ದಿನ ಶ್ರೀ ವಿಷ್ಣು ಯಕ್ಷ ಬಳಗ ಮಜಿಬೈಲು ಇವರ ‘ನರಕಾಸುರ ಮೋಕ್ಷ’, ಮಹಮ್ಮಾಯಿ ಯಕ್ಷಗಾನ ಕಲಾ ತಂಡ ಬಾಯಾರು ಇವರಿಂದ ‘ಜಾಂಬವತೀ ಕಲ್ಯಾಣ’, ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು ಇವರ ‘ಸುಧನ್ವ ಮೋಕ್ಷ’, ಶ್ರೀ ರಾಜಗೋಪಾಲ್ ಜೋಶಿ ಮೈರ ಇವರ ತಂಡದ ‘ಪಾರ್ಥ ಸಾರಥ್ಯ’ ತಾಳಮದ್ದಳೆ ನಡೆಯಿತು. ವಿಶೇಷವಾಗಿ ಉಜಿರೆಯ ಎಸ್.ಡಿ.ಯಂ. ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಪ್ರಾತ್ಯಕ್ಷಿಕೆ- ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಆರಂಭದಲ್ಲಿ ಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಇವರು ಉದ್ಘಾಟಿಸಿದರು.
ಮೂರನೇ ದಿನದಂದು ನವ ಕರ್ನಾಟಕ ಕೃಪಾಶ್ರಿತ ಯಕ್ಷಗಾನ ಮಂಡಳಿ ಬಾಯಾರು ಇವರಿಂದ ‘ಶಾಂಭವಿ ವಿಲಾಸ’, ವಾಘ್ದೇವೀ ಯಕ್ಷಗಾನ ಕಲಾ ಸಂಘ ಮೂಡಂಬೈಲು ಇವರ ‘ಭೀಷ್ಮ ವಿಜಯ’, ಶ್ರೀ ಕಾವಿ ಯಕ್ಷ ಬಳಗ ವರ್ಕಾಡಿ ಇವರಿಂದ ‘ಅಂಗದ ಸಂಧಾನ’, ಶ್ರೀ ಗುರುನರಸಿಂಹ ಯಕ್ಷ ಬಳಗ ಮೀಯಪದವು ಇವರಿಂದ ‘ಗುರುದಕ್ಷಿಣೆ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡ ಘಟಕ ಕಾಸರಗೋಡಿನ ಇವರ ಗಮಕ ಶ್ರಾವಣ ವಿಶೇಷವಾಗಿ ನಡೆಯಿತು. ಸಂಜೆ 4-00 ಗಂಟೆಗೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುತ್ಯಾಳ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ಕೆ.ಜಿ. ಶ್ಯಾನುಭೋಗ್ ಇವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ಸಂತೋಷ ಐತಾಳ ಪಣಂಬೂರು, ಮಾನ್ಯ ಶ್ರೀ ಧರ್ಮಸ್ಥಳ ಮೇಳದ ಹಿರಿಯ ಸೇವಾ ಕರ್ತರಾದ ಶ್ರೀ ರವಿಶಂಕರ ಇವರು ಭಾಗವಹಿಸಿದರು. ಜಗದೀಶ ಕೆ. ಕೂಡ್ಲು, ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ, ಶ್ರೀರಾಜ ಮಯ್ಯ ನಿರೂಪಿಸಿ, ರಾಮಕೃಷ್ಣ ಮಯ್ಯ ಸುಮಿತ್ರಾ ಮಯ್ಯ ಧನ್ಯವಾದವಿತ್ತರು. ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಸಿರಿ ಸಿರಿಬಾಗಿಲುನಲ್ಲಿ ಮೆರೆಯಿತು.