ಬಂಟ್ವಾಳ : ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಇದರ ವತಿಯಿಂದ ಏರ್ಪಡಿಸಲಾದ ಮೂರು ದಿನಗಳ ‘ಸಂಸ್ಕೃತಿ ಉತ್ಸವ’ ಕಾರ್ಯಕ್ರಮವು ದಿನಾಂಕ 22 ಡಿಸೆಂಬರ್ 2024ರಿಂದ 24 ಡಿಸೆಂಬರ್ 2024ರವರೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಕುಕ್ಕಾಜೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ, ಉಪನ್ಯಾಸಕ ಜಯಾನಂದೆ ಪೆರಾಜೆ “ಭಾರತೀಯ ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಮೂಲದಿಂದ ಬೆಳೆದು ಬಂದಿದೆ. ಬಹುಭಾಷಾ ಸಂಸ್ಕೃತಿ ಇದ್ದರೂ ಏಕಭಾವವನ್ನು ಹೊಂದಿದೆ. ವಿವಿಧ ಹಬ್ಬಗಳ ಆಚರಣೆ ಹಾಗೂ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ” ಎಂದು ಹೇಳಿದರು.
ಮಂಚಿ ಹಿ.ಪ್ರಾ. ಶಾಲಾ ಸಂಚಾಲಕ ನೂಜಿಬೈಲು ನಾರಾಯಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿ ಮಾತನಾಡಿದರು. “ನಾಟಕ, ಸಾಹಿತ್ಯ, ಸಂಗೀತ, ಚಿತ್ರಕಲೆಗಳೆಲ್ಲ ಸಂಸ್ಕೃತಿಯ ವಿವಿಧ ರೂಪಗಳಾಗಿವೆ. ಜೀವನವು ಕಲಾವಂತಿಕೆಯಿಂದ ಕೂಡಿರಬೇಕು. ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ” ಎಂದು ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು. ಹಿರಿಯ ನ್ಯಾಯವಾದಿ ಚಂದ್ರಶೇಖರ ಕೆ.ವಿ. ಇವರು ಸಭಾಧ್ಯಕ್ಷತೆ ವಹಿಸಿದ್ದರು.
ಆಕಾಶವಾಣಿ ಕಲಾವಿದೆ ಗಮಕಿ ಮಂಜುಳಾ ಸುಬ್ರಮಣ್ಯ ಭಟ್, ಕವಯಿತ್ರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಿಜಯಾ ಶೆಟ್ಟಿ ಸಾಲೆತ್ತೂರು, ಲೇಖಕಿ ಅನಿತಾ ನರೇಶ್ ಮಂಚಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಭಜನಾ ಮಂಡಳಿ ಅಧ್ಯಕ್ಷ ಗಣೇಶ ಐತಾಳ್ ಸ್ವಾಗತಿಸಿ, ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಸ್ತಾವನೆಗೈದು, ಸಾರ್ವಜನಿಕರ ಸಹಕಾರವನ್ನು ಸ್ಮರಿಸಿದರು. ಶೈಲಜಾ ಮತ್ತು ಶಿಕ್ಷಕ ಉಮಾನಾಥ ರೈ ಸನ್ಮಾನಪತ್ರ ವಾಚಿಸಿ, ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಮಕ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಮತ್ತು ಕುಮಾರ ವ್ಯಾಸ ಭಾರತದಿಂದ ಆಯ್ದ ‘ಸೌಗಂಧಿಕಾ ಸಂಧಿ’ ಗಮಕ ವಾಚನ, ವ್ಯಾಖ್ಯಾನ ನಡೆಯಿತು. ಮಂಜುಳಾ ಸುಬ್ರಮಣ್ಯ ವಾಚನ ಮಾಡಿ, ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನಿಸಿದರು. ಸಮಾರೋಪ ಸಮಾರಂಭವು ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಎಂ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಗಳಾಗಿ ರಮೇಶ ರಾವ್ ಪತ್ತುಮುಡಿ, ನಿಶ್ಚಲ್ ಜಿ. ಶೆಟ್ಟಿ ಕಲ್ಲಾಡಿ ಅತಿಥಿಗಳಾಗಿದ್ದರು. ಆಕಾಶವಾಣಿ ಕಲಾವಿದೆ ಮಂಜುಳಾ ಗುರುರಾಜ್ ರಾವ್ ಇರಾ ಇವರಿಂದ ‘ಪಾದುಕಾ ಪಟ್ಟಾಭಿಷೇಕ’ ಹರಿಕಥೆ, ಶಿವರಂಜಿನಿ ಕಲಾಕೇಂದ್ರ ಪೊಳಲಿ ಇವರಿಂದ ಸಾಂಸ್ಕೃತಿಕ ವೈವಿಧ್ಯ, ಶಾರದಾ ಎಸ್. ರಾವ್ ಬಳಗದವರಿಂದ ಸ್ಯಾಕ್ಸೋ ಫೋನ್ ವಾದನ ಜನಮೆಚ್ಚುಗೆ ಪಡೆಯಿತು.