ಪುತ್ತೂರು : ಪುತ್ತೂರು ಶಿವಸದನದ ಹಿರಿಯರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಯಕ್ಷಗಾನ ತಾಳಮದ್ದಳೆ ಸಂಭ್ರಮವನ್ನು ಮಂಗಳೂರಿನ ಪ್ರಖ್ಯಾತ ‘ಯಕ್ಷ ಮಂಜುಳಾ’ ಕದ್ರಿ ಮಹಿಳಾ ಬಳಗ ಇವರ ತಂಡದಿಂದ ‘ದಕ್ಷ ಯಜ್ಞ’ ತಾಳಮದ್ದಲೆಯು ಅಮೋಘವಾಗಿ ದಿನಾಂಕ 18 ಜುಲೈ 2025ರಂದು ಶಿವ ಸದನದಲ್ಲಿ ಪ್ರದರ್ಶಿಸಲ್ಪಟ್ಟಿತು. ಇದರಲ್ಲಿ ಭಾಗವಹಿಸಿದ ಕಲಾವಿದರೆಲ್ಲರೂ ಮೇರು ವ್ಯಕ್ತಿತ್ವದವರು.
ಪ್ರಧಾನ ಸಂಚಾಲಕರಾಗಿರುವ ಶ್ರೀಮತಿ ಪೂರ್ಣಿಮಾ ಪ್ರಭಾಕರ್ ರಾವ್ ಪೇಜಾವರ ಹಾಗೂ ಇವರ ಪತಿ ಶ್ರೀ ಪ್ರಭಾಕರ್ ರಾವ್ ಪೇಜಾವರ ಯಕ್ಷ ಮಂಜುಳಾದ ಗೌರವಾಧ್ಯಕ್ಷರಾಗಿ ತುಂಬಾ ಸಮಯದಿಂದ ಯಕ್ಷಗಾನದಲ್ಲಿ ಅಭಿರುಚಿ ಹೊಂದಿ ಯಕ್ಷಗಾನದ ಮೇಲಿನ ಅಭಿಮಾನದಿಂದ ಈ ಸಂಸ್ಥೆಯನ್ನು ಹುಟ್ಟು ಹಾಕಿ ದಂಪತಿಗಳು ಪ್ರೋತ್ಸಾಹ ನೀಡುತ್ತಾ ಬರುತ್ತಿರುವರು.
ಈ ತಂಡದ ನಿರ್ದೇಶಕರಾಗಿ ಶ್ರೀ ಅಲೆವೂರಾಯರು ಪ್ರಸಿದ್ಧ ಸ್ತ್ರೀ ವೇಷಧಾರಿಯೂ ಹೌದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಸವಕಲ್ಯಾಣ ಪ್ರಶಸ್ತಿ ಪಡೆದು ಅನೇಕ ಸಂಘಗಳನ್ನು ರಚಿಸಿ ‘ಸರಯೂ’ ಬಾಲ ಯಕ್ಷ ವೃಂದ ರಚಿಸಿ ಯಕ್ಷಗಾನ ಕಲೆಯ ಪರಿಚಯವನ್ನು ಅನೇಕ ಮಕ್ಕಳಿಗೆ ಪರಿಚಯಿಸಿ ದಾರಿದೀಪವಾಗಿದ್ದಾರೆ.
ಇಂಜಿನಿಯರಿಂಗ್ ಪದವೀಧರರಾದ ಭಾಗವತಿಕೆಯಲ್ಲಿ ಸಹಕರಿಸಿದ ಶ್ರೀ ಚಿನ್ಮಯ ಭಟ್ ಕಲ್ಲಡ್ಕ ಯಕ್ಷಗಾನದ ಮೇಲಿನ ಅಭಿರುಚಿಯಿಂದ ಇದೇ ವೃತ್ತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರ ಧ್ವನಿ ಶ್ರವಣಾಮೃತ ಅವರ ಪಾರಮ್ಯ ಭಾವಪೂರ್ಣ ಗಾಯನ, ಶಬ್ದ ಮೇಳನೆಯ ಲಾಲಿತ್ಯದಲ್ಲಿ ತಾಳಮದ್ದಳೆ ಜೀವಂತವಾಗಿತ್ತು.
ಮದ್ದಳೆ ಮತ್ತು ಚೆಂಡೆಯಲ್ಲಿ ಶ್ರೀ ಚೈತನ್ಯಕೃಷ್ಣ ಪದ್ಯಾಣ ಹಾಗೂ ಶ್ರೀ ಕೌಶಲ್ ರಾವ್ ಪುತ್ತಿಗೆ ಇವರ ಕಲಾತ್ಮಕತೆಯ ಶ್ರಾವಣೀಯ, ರಸಿಕರ ಕಿವಿಗೆ ಪ್ರೀತಿಯ ಸಂಗೀತವಾಗಿ ತಾಳದ ಸಮರ್ಪಣೆ ,ಶಬ್ದಗಳ ಪ್ರದರ್ಶನ ತಾಳ ಮದ್ದಲೆಯ ತೀವ್ರತೆಯನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ಅಪಾರ. ಯಕ್ಷಗಾನದಲ್ಲಿ ಧ್ವನಿ ವಿಧಾನ ಅಡಿಪಾಯ ಇಂದು ನಮ್ಮ ಕಲಾವಿದರ ಚಂಡೆ ತಮ್ಮ ಕೈ ಚಲನೆಯ ಮೂಲಕ ನಾಟಕದ ಪ್ರಭಾವವನ್ನೇ ಹೆಚ್ಚಿಸಿದರು. ಎಲ್ಲರೂ ತಮ್ಮ ವಿಶಿಷ್ಟ ಧ್ವನಿಯ ಮೂಲಕ ಶ್ರದ್ಧೆಯಿಂದ ಪಾತ್ರಾಭಿನಯ ಮಾಡಿ ಸಂಭಾಷಣೆಗೆ ಜೀವ ತುಂಬಿದ್ದರೆ, ಶೋತ್ರುಗರ ಮನಸ್ಸಿನಲ್ಲಿ ಭಾವನಾತ್ಮಕ ಸ್ಪಂದನ ಉಂಟುಮಾಡಿ ಪುರಾಣದ ಸಂಕೀರ್ಣತೆಯನ್ನು ಸುಲಭವಾಗಿ ಮನನ ಮಾಡುವ ಶೈಲಿಯಿಂದ ಗಮನ ಸೆಳೆದಿದ್ದಾರೆ.
ಚಕ್ರತಾಳದಲ್ಲಿ ಶ್ರೀ ಅಲೆವೂರಾಯತರು ನಿಖರವಾದ ನಾಜೂಕಾದ ತಾಳ ನಿರ್ವಹಣೆ ಮೂಲಕ ಸ್ಪಷ್ಟ ಹಾಗೂ ಸ್ಥಿರವಾದ ತಾಳ ನೀಡಿಕೆಯಲ್ಲಿ ಭಾಗವತರು ಹಾಗೂ ವಾದಕರು ಸುಗಮವಾಗಿ ಕಲಾಪವನ್ನು ಮುಂದುವರಿಸಲು ಸಹಕರಿಸಿದರು. ಒಟ್ಟು ಈ ಮೇಳದಲ್ಲಿ ಕಲಾವಿದರು ತಮ್ಮ ಸಂಯೋಜಿತ ಶ್ರದ್ಧೆ, ಕಲಾ ಪ್ರತಿಭೆ ಹಾಗೂ ಪರಂಪರೆಯ ಪಾಲನೆಯ ಮೂಲಕ ಈ ತಾಳಮದ್ದಲೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ
ಇನ್ನು ಪಾತ್ರಧಾರಿಗಳಾಗಿ ಅಭಿನಯಿಸಿದ ದಕ್ಷ ಪ್ರಜಾಪತಿ ಪಾತ್ರವನ್ನು ಶ್ರೀಮತಿ ಪೂರ್ಣಿಮ ಪ್ರಶಾಂತ್ ಶಾಸ್ತ್ರಿ ತಮ್ಮ ಅಮೋಘ ಕಂಠದಿಂದ ಪ್ರತಿಯೊಂದು ಸನ್ನಿವೇಶವನ್ನೂ ಮನಮುಟ್ಟುವಂತೆ ಪ್ರದರ್ಶಿಸಿದ್ದಾರೆ. ದಾಕ್ಷಾಯಿಣಿಯಾಗಿ ಶ್ರೀಮತಿ ಪೂರ್ಣಿಮಾ ಪೇಜಾವರ್ ಪ್ರೀತಿಯಿಂದ ಗಂಡನ ಮಾತನ್ನು ತಿರಸ್ಕರಿಸಲು ಆಗದ ದುಃಖಭರಿತ ಸನ್ನಿವೇಶದಲ್ಲೂ ಮೈ ಮರೆತು ತನ್ನ ತಂದೆಯ ಯಜ್ಞಕ್ಕೆ ಆಹ್ವಾನವಿಲ್ಲದೆ ಹೋದ ಸಂದರ್ಭದ ಮಾತುಗಳು ಸಭಿಕರ ಕಣ್ಣಲ್ಲಿ ನೀರು ತಂದು ಮಂತ್ರ ಮುಗ್ಧರನ್ನಾಗಿಸಿತು.
ಈಶ್ವರನ ಪಾತ್ರಧಾರಿ ಶ್ರೀಮತಿ ಅರುಣ ಸೋಮಶೇಖರನ್ ದಾಕ್ಷಾಯಿಣಿಯನ್ನು ಸಮಾಧಾನ ಪಡಿಸುವಲ್ಲಿ ತನ್ನ ಮೃದುವಾದ ಕಂಠದಿಂದ ಹಾಗೂ ಆಹ್ವಾನವಿಲ್ಲದ ತಂದೆ ನಡೆಸುವ ಯಜ್ಞಕ್ಕೆ ಹೊರಟೇ ಬಿಡುತ್ತೇನೆ ಎಂದಾಗ ದಾಕ್ಷಿಣ್ಯವಿಲ್ಲದೆ ಹೇಳಿದ ಮಾತುಗಳು ಅವರ್ಣನೀಯವಾಗಿತ್ತು.
ದೇವೇಂದ್ರನಾಗಿ ಶ್ರೀಮತಿ ರೂಪ ಶಾಸ್ತ್ರಿ ದಕ್ಷ ಪ್ರಜಾಪತಿಯು ನಡೆಸುವ ಯಜ್ಞ ನಡೆಯುವಾಗ ಸಹಾಯ ಮಾಡುವಲ್ಲಿ ತನ್ನ ಪಾಂಡಿತ್ಯವನ್ನು ಬೆಳೆಸಿಕೊಂಡು ತನ್ನ ನಗುಮೊಗದಿಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಬ್ರಾಹ್ಮಣನ ಪಾತ್ರಧಾರಿಯಾಗಿ ಶ್ರೀಮತಿ ಅನುಪಮಾ ಅಡಿಗ ತನ್ನ ವಿಚಿತ್ರ ಹಾವಭಾವದ ಮಾತುಗಳ ವರ್ತನೆಯ ಹಾಸ್ಯದ ಪರಿ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿ ಚಪ್ಪಾಳೆಗಿಟ್ಟಿಸಿಕೊಂಡರು.
ವೀರಭದ್ರನಾಗಿ ಶ್ರೀಮತಿ ಶೈಲಜ ಶ್ರೀಕಾಂತ್ ರಾವ್ ತನ್ನ ಸ್ವರಭಾರದಿಂದ ಶಿವನ ಆಜ್ಞೆಯಂತೆ ದಕ್ಷನನ್ನು ಸಂಹರಿಸುವುದು, ಯಜ್ಞ ಕುಂಡವನ್ನು ನಾಶ ಮಾಡುವುದು ಇಂತಹ ಸಮಯದಲ್ಲಿ ಗಡಸುತನದಲ್ಲಿ ಮಾತನಾಡಿ ಆ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ.
ಶ್ರೀ ಮೋಹನ್ ದಾಸ್ ಫಿಲಿಂಜರವರು ಸುಂದರವಾಗಿ ಸಿಂಗರಿಸಿದ ವೇದಿಕೆಯಲ್ಲಿ ಮೊದಲಾಗಿ ಶ್ರೀಮತಿ ಸುಜಾತಾ ಬೆಳ್ಳೆ ಹಾಗೂ ಶ್ರೀಮತಿ ಶ್ರೀಲತಾ ರಾವ್ ಇವರಿಂದ ಗಣಪತಿಯ ಸ್ತುತಿಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಶಿವ ಸದನದ ಟ್ರಸ್ಟಿನ ಅಧ್ಯಕ್ಷೆ ಶ್ರೀಮತಿ ಸುಮಂಗಲ ಪ್ರಭಾಕರ್ ಬಂದ ಕಲಾವಿದರನ್ನು ಪ್ರೀತಿಯಿಂದ ಸ್ವಾಗತಿಸಿದರೆ, ಸದನದ ಸದಸ್ಯರು, ಶಿವ ಸದನದ ಸದಸ್ಯರು, ಶಿಕ್ಷಕಿಯರು ಪ್ರೀತಿಯ ಹೂ ನೀಡಿ ಸ್ವಾಗತಿಸಿದರು. ಟ್ರಸ್ಟಿನ ಕೋಶಾಧಿಕಾರಿ ಶ್ರೀ ದಿನಕರ್ ರಾವ್ ಪುತ್ತೂರು ಇವರ ಧನ್ಯವಾದ ಸಮರ್ಪಣೆಯೊಂದಿಗೆ ತಾಳಮದ್ದಲೆ ದಕ್ಷ ಯಜ್ಞ ಸಮಾಪನಗೊಂಡಿತು.
ಆಗಮಿಸಿದ ಅತಿಥಿಗಳೆಲ್ಲರಿಗೂ ವಿಶೇಷ ಭೋಜನದ ವ್ಯವಸ್ಥೆಯನ್ನು ಟ್ರಸ್ಟಿನ ಕಾರ್ಯದರ್ಶಿ ಶ್ರೀ ಕರುಣಾಕರಬೆಳ್ಳೆ, ಮೋಹನ್ ದಾಸ್ ಪಿಲಿಂಜ, ಶ್ರೀ ಸತ್ಯನಾರಾಯಣ ರಾವ್, ಸ್ವಾಗತ ಹೋಟೆಲಿನ ಶ್ರೀಪತಿ ರಾವ್ ಅವರ ಕುಟುಂಬ, ಸದನದ ಕೋಶಾಧಿಕಾರಿ ಶ್ರೀ ಶ್ರೀಕಾಂತ ರಾವ್, ಟ್ರಸ್ಟಿನ ಸದಸ್ಯರು, ಸುಬ್ರಮಣ್ಯ ಸದನದ ಸದಸ್ಯರು, ಪುತ್ತೂರಿನ ಬಂಧುಗಳು ಸಿಬ್ಬಂದಿ ವರ್ಗದವರು ಸಹಕರಿಸಿದರು. ಇವರಿಗೆ ಅಭಿನಂದನೆಗಳು ಮತ್ತು ಅಭಿನಯದ ಪ್ರಭಾವ ನಮ್ಮಲ್ಲಿ ಬಹುಕಾಲ ಉಳಿಯಲಿ ಎಂಬ ಹಾರೈಕೆ.
ಹಿರಿಯರೆಲ್ಲರೂ ಕಾರ್ಯಕ್ರಮ ಕೊನೆಯಾಗುವ ತನಕ ಮಂತ್ರ ಮುಗ್ಧರಾಗಿ ಕುಳಿತಲ್ಲೇ ಕುಳಿತು ಕೇಳುತ್ತಿದ್ದರೆ, ಈ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳ ವೀಕ್ಷಣಾ ಮಟ್ಟ, ಮಾನಸಿಕ ಸಾಮರ್ಥ್ಯ, ತಾಳ್ಮೆ, ಸಂಯಮ, ಅರಿವು ಮನದಲ್ಲಿ ಮೂಡಿದೆ ಎಂದು ಶಿಕ್ಷಕಿಯರ ಅಭಿಪ್ರಾಯ. ಪ್ರಸ್ತುತಿಯಲ್ಲಿ ಸಹಕರಿಸಿದ ಶ್ರೀಮತಿ ಪುಷ್ಪ ಶ್ರೀನಿವಾಸ್ ರಾವ್, ವಿಡಿಯೋದಲ್ಲಿ ಸಹಕರಿಸಿದ ಕುಮಾರಿ ಡಾ. ಗಾನ ಪಿಲಿಂಜ ಇವರಿಗೆ ಮನದಾಳದ ಕೃತಜ್ಞತೆಗಳು. ಇಂತಹ ಮನ ಸೆಳೆಯುವ ಕಾರ್ಯಕ್ರಮ ಶಿವ ಸದನದಲ್ಲಿ ಮೂಡಿಬರುತ್ತಿರಲಿ.
ಸುಮಂಗಲಾ ಪ್ರಭಾಕರ್