ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ‘ಶ್ವೇತಯಾನ’ ಸರಣಿ ಕಾರ್ಯಕ್ರಮದ ‘ಸಿನ್ಸ್ 1999’ ಅಂಗವಾಗಿ 11ನೇ ಕಾರ್ಯಕ್ರಮವು ದಿನಾಂಕ 26-03-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಸಂಘಸಂಸ್ಥೆಗಳ ಧನಸಹಾಯ ಯೋಜನೆಯಡಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ “ಸಾಂಪ್ರದಾಯಿಕವಾಗಿಯೇ ಜನಾನುರಾಗಿಯಾದ ಯಕ್ಷಾಂತರಂಗ ಕೋಟ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಪ್ರಸಿದ್ಧ ಕಲಾವಿದರನ್ನೊಳಗೂಡಿಕೊಂಡು ಯಕ್ಷಗಾನದ ಹಲವು ಚಟುವಟಿಕೆಗಳನ್ನು ಕರಾವಳಿ ಭಾಗದಲ್ಲಿ ಮಾಡುತ್ತಾ ಬಂದಿದೆ. ಪರಿಪೂರ್ಣ ಸಾಂಪ್ರದಾಯಿಕ ಪ್ರದರ್ಶನ ಹಾಗೂ ತರಗತಿಗಳಿಗೆ ಒತ್ತು ಕೊಟ್ಟು ಸಮಾಜಮುಖಿಯಾಗಿ ತೆರೆದುಕೊಂಡಿದೆ. ಇಂತಹ ಸಂಸ್ಥೆಗಳಿಗೆ ಪ್ರಜ್ಞಾವಂತ ಕಲಾಭಿಮಾನಿಗಳು ಮಾನ್ಯತೆ ನೀಡಬೇಕು.” ಎಂದರು.
ಉದ್ಯಮಿ ಸುಬ್ರಾಯ ಆಚಾರ್ ಮಾತನಾಡಿ “ಯಕ್ಷಗಾನದ ಕಲೆ ವಿಶ್ವವ್ಯಾಪಿಗೊಳಿಸುವಲ್ಲಿ ಸಾಂಪ್ರದಾಯಿಕವಾಗಿಯೇ ಮುನ್ನಡೆಸಿದ ಸಂಸ್ಥೆ ‘ಯಕ್ಷಾಂತರಂಗ’. ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದೊಳಗೆ ಯಕ್ಷಾಂತರಂಗದ ಕಾರ್ಯಕ್ರಮ ನೆರವೇರಿರುವುದು ಇನ್ನೂ ಅರ್ಥಪೂರ್ಣ.” ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಯಕ್ಷ ಸೌರಭ ಹಿರೇ ಮಹಾಲಿಂಗೇಶ್ವರ ಯಕ್ಷಗಾನ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಕರ್ಕೇರ ಉಪಸ್ಥಿತರಿದ್ದರು. ಪ್ರಸಾದ್ ಕುಮಾರ್ ಮೊಗೆಬೆಟ್ಟು ಪ್ರಾರ್ಥನೆಗೈದು, ಸ್ವಾಗತಿಸಿ, ಕೃಷ್ಣಮೂರ್ತಿ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ‘ದಕ್ಷಾಧ್ವರ’ ರಂಗಪ್ರಸ್ತುತಿಗೊಂಡಿತು.