ಸುರತ್ಕಲ್ : ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ ದ.ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ ಮಂಗಳೂರು ಹಾಗೂ ಗೋವಿಂದ ದಾಸ ಪದವಿ ಪೂರ್ವ ಕಾಲೇಜು ಸುರತ್ಕಲ್ ಸಂಯುಕ್ತಾಶ್ರಯದಲ್ಲಿ ಪಸ್ತುತ ಪಡಿಸುವ ದಕ್ಷಿಣ ಕನ್ನಡ ಜಿಲ್ಲಾ 9ನೇ ‘ಗಮಕ ಕಲಾ ಸಮ್ಮೇಳನ’ವು ದಿನಾಂಕ 13-07-2024ರಂದು ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಸಮ್ಮೇಳನದ ಅಧ್ಯಕ್ಷತೆಯನ್ನು ಗಮಕ ವಿದ್ವಾನ್ ಎಚ್. ಯಜ್ಞೇಶಾಚಾರ್ಯ ವಹಿಸಲಿದ್ದಾರೆ. ಬೆಳಗ್ಗೆ 8-30ಕ್ಕೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡಲಿದ್ದು, ಬೆಳಿಗ್ಗೆ 9.30ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಎ.ವಿ. ಪ್ರಸನ್ನ ಇವರು ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟನೆ ನೆರವೇರಿಸಲಿದ್ದು, ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ, ವೇದಮೂರ್ತಿ ರಮಾನಂದ ಭಟ್ ಶುಭಹಾರೈಸಲಿದ್ದಾರೆ. ಶ್ರೀ ಜಯಚಂದ್ರ ಹತ್ವಾರ್, ಡಾ. ಎಂ.ಬಿ. ಪುರಾಣಿಕ್ ಶುಭಾಶಂಸನೆಗೈಯಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಮೊದಲಾದವರ ಉಪಸ್ಥಿತಿಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಸಮ್ಮಾನಿಸಲಾಗುವುದು.
ಬೆಳಗ್ಗೆ 11-00ಕ್ಕೆ ‘ಕಾವ್ಯ ತರಂಗ’ದಲ್ಲಿ ದಿ. ಪಿ.ಸಿ. ವಾಸುದೇವ ರಾವ್ ಸಂಸ್ಮರಣಾ ದತ್ತಿನಿಧಿ ಕಾರ್ಯಕ್ರಮ ಅಂಗವಾಗಿ ‘ರನ್ನನ ಗದಾಯುದ್ಧ’ದಿಂದ ಆಯ್ದು ಭಾಗದಿಂದ ವಾಚನ, ವ್ಯಾಖ್ಯಾನ ನಡೆಯಲಿದೆ. 12-00 ಗಂಟೆಗೆ ‘ಭಾವತರಂಗ’ದಲ್ಲಿ ಪಿ.ಎಚ್. ಸೇತುರಾವ್ ಹಾಗೂ ಶಾಂತಬಾಯಿ ದತ್ತಿನಿಧಿ ಅಂಗವಾಗಿ ‘ಹಲುಬಿದಳ್ ಕಲ್ಮರಂ ಕರಗುವಂತೆ’ ಭಾಗದ ವಾಚನ, ವ್ಯಾಖ್ಯಾನ ನಡೆಯಲಿದೆ. ಮಧ್ಯಾಹ್ನ ಗಂಟೆ 1-45ಕ್ಕೆ ‘ತಿಭಾಷಾ ಪಠ್ಯ ತರಂಗ’ದಲ್ಲಿ ಸಂಸ್ಕೃತ, ಕನ್ನಡ ಮತ್ತು ತುಳು ಭಾಷೆಯಲ್ಲಿ ಗಮಕ ನಡೆಯಲಿದೆ. ಅಪರಾಹ್ನ ಗಂಟೆ 2-30ಕ್ಕೆ ‘ಯುವ ತರಂಗ’ದಲ್ಲಿ ಕಾವ್ಯ ವಾಚನ, ದೇವರ ನಾಮ, ಜನಪದ ಗೀತೆ, ಭಾವಗೀತೆ, ವಚನ ಜರಗಲಿದೆ.
ಅಪರಾಹ್ನ 3-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಧಾನ ಅಭ್ಯಾಗತರಾಗಿ ದ.ಕ. ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಅಭ್ಯಾಗತರಾಗಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಭಾಗವಹಿಸಲಿರುವರು. ಮಂಗಳೂರಿನ ಗಮಕ ಕಲಾ ಪರಿಷತ್ತಿನ ಗೌರವ ಸಲಹೆಗಾರರಾದ ಶ್ರೀ ಎಂ.ಆರ್. ವಾಸುದೇವ ಸಮಾರೋಪ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನ ಮಂಗಳೂರು ಪ್ರಯೋಜಿತ ‘ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ’ ಪ್ರದಾನ ನಡೆಯಲಿದ್ದು, ಶ್ರೀಮತಿ ಮಂಜುಳಾ ಜಿ. ರಾವ್ ಇರಾ, ವಿದ್ವಾನ್ ಡಾ. ಬಂದಗದ್ದೆ ನಾಗರಾಜ್, ಪ್ರೊ. ಮಧೂರು ಮೋಹನ ಕಲ್ಲೂರಾಯ, ಡಾ. ಎಸ್.ಪಿ. ಗುರುದಾಸ್, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀ ಸೇರಾಜೆ ಸೀತಾರಾಮ ಭಟ್ಟ ಇವರುಗಳು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಂಜೆ ಗಂಟೆ 4-00ಕ್ಕೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಗಮಕ ಯಕ್ಷ ತರಂಗ’ ನಡೆಯಲಿದ್ದು, ಲಕ್ಷ್ಮೀಶ ಕವಿ ವಿರಚಿತ ಜೈಮಿನಿ ಭಾರತದ ಪ್ರಸಂಗ ‘ಸೀತಾ ಪರಿತ್ಯಾಗ’ ತಾಳಮದ್ದಳೆ ಜರಗಲಿದೆ.