ಮಂಗಳೂರು : ಅಡ್ಯಾರ್‌ನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 31 ಅಕ್ಟೋಬರ್ 2025ರಂದು ಸಂಸ್ಕಾರ ಭಾರತೀ ಇದರ ವತಿಯಿಂದ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಾಗ್ಮಿ ದಾಮೋದರ ಶರ್ಮ “ಭಾರತ ಬೆಳಕಿನ ದೇಶ ಜ್ಞಾನ ಪರಂಪರೆಯಿಂದ ಈ ಬೆಳಕು ಲಭ್ಯವಾಗಿದೆ. ಪ್ರಕೃತಿಯನ್ನು ಪೂಜಿಸುವ ಭಾರತೀಯರು ಭಾವನೆಗಳೊಂದಿಗೆ ಬದುಕನ್ನು ಕಟ್ಟಿಕೊಂಡವರು. ಭಾರತದ ವೈಭವಪೂರ್ಣ ಕಥಾನಕಗಳು, ನಮ್ಮಲ್ಲಿನ ಉನ್ನತವಾದ ಹಾಗೂ ಮೌಲ್ಯಯುತ ಸಂಸ್ಕಾರಗಳು ಈಗಿನ ಮಕ್ಕಳಿಗೆ ಸ್ಫೂರ್ತಿ- ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಸಂಸ್ಕಾರ ಭಾರತೀ ಸಂಘಟನೆಯ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ ಸರ್ವರಿಗೂ ಮಾದರಿ” ಎಂದು ಹೇಳಿದರು.


ಸಂಸ್ಕಾರ ಭಾರತೀ ಮಂಗಳೂರು ನಗರ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ ಅಧ್ಯಕ್ಷತೆ ವಹಿಸಿದ್ದು, “ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ದಶಕಗಳ ಕಾಲದಿಂದ ದೀಪಾವಳಿ ಹಬ್ಬವನ್ನು ಎಲ್ಲರನ್ನು ಸೇರಿಸಿಕೊಂಡು ಬಹಳ ಅರ್ಥ ಪೂರ್ಣ ಕಾರ್ಯಕ್ರಮ ಸಂಸ್ಕಾರ ಭಾರತೀ ಮಾಡಿಕೊಂಡು ಬರುತ್ತಿದೆ. ಕಲಾವಿದರಿಗೆ ಪುರಸ್ಕಾರ, ಹಬ್ಬದೂಟ ಹೀಗೆ ಎಲ್ಲವನ್ನು ಶಿಸ್ತು ಬದ್ಧವಾಗಿ ಎಲ್ಲರ ಸಹಕಾರದಿಂದ ಆಚರಿಸಿಕೊಂಡು ಬಂದಿದೆ” ಎಂದರು.


ದೇವಸ್ಥಾನದ ಗೌರವಾಧ್ಯಕ್ಷ ದಿವಾಕರ ನಾಯ್ಕ್ ಅಡ್ಯಾರ್, ಅಧ್ಯಕ್ಷ ರಮೇಶ್ ತುಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಕತ್ತಲ್ ಸಾರ್ ಮತ್ತು ಬಳಗದವರಿಂದ ‘ತುಳುನಾಡ ಬಲೀಂದ್ರ ಲೆಪ್ಪುದ ಪೊರ್ಲು’ ನಡೆಯಿತು. ಸಂಘ ಶತಾಬ್ದ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಕಾರ ಭಾರತೀ ಸೇವಾ ಪುರಸ್ಕಾರವನ್ನು ಪ್ರದೀಪ್ ಕುಮಾರ್ ಶೆಟ್ಟಿ, ನಾರಾಯಣ ನಾಯ್ಕ್, ಗಜೇಂದ್ರ ಪೂಜಾರಿ, ಮಾಧವ ಉಳ್ಳಾಲ್, ರಮೇಶ್ ಕಾವೂರು, ಧನಂಜಯ ಕೊಟ್ಟಾರಿ ಇವರುಗಳಿಗೆ ನೀಡಲಾಯಿತು. ಈ ಅಭಿನಂದನಾ ಕಾರ್ಯಕ್ರಮ ಡಾ. ಅರುಣ್ ಉಳ್ಳಾಲ್ ನೆರವೇರಿಸಿದರು. ನಾಟ್ಯ ನಿಕೇತನ ಕೊಲ್ಯ, ಸನಾತನ ನಾಟ್ಯಾಲಯ, ಭರತಾಂಜಲಿ ಕೊಟ್ಟಾರ ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು. ಶ್ರೀಧರ್ ಹೊಳ್ಳ ವಂದಿಸಿ, ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.


