ಉಡುಪಿ : ಕಾಲೇಜು ವಿದ್ಯಾರ್ಥಿಗಳಲ್ಲಿ ಶಾಸ್ತ್ರೀಯ ಕಲೆಯ ಬಗೆಗಿನ ಸಂವೇದನೆಯನ್ನು ಮೂಡಿಸುವಂಥ ಕಲಾಚಟುವಟಿಕೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಈ ಬಾರಿಯ ವಾರ್ಷಿಕೋತ್ಸವದಲ್ಲಿ ಸುಮಾರು 26 ಮಂದಿ ವಿದ್ಯಾರ್ಥಿನಿಯರು ಯತಿಕವಿ ಶ್ರೀವಾದಿರಾಜ ವಿರಚಿತ ಶ್ರೀರುಗ್ಮಿಣೀಶ ವಿಜಯ ಎಂಬ ಸಂಸ್ಕೃತಕಾವ್ಯವನ್ನು ಆಧರಿಸಿದ ‘ಭಾವ ನೃತ್ಯ ನಮನ’ ಎಂಬ ನೃತ್ಯನಾಟಕವನ್ನು ದಿನಾಂಕ 22 ಡಿಸೆಂಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಉಡುಪಿಯ ಸಮೂಹ ಕಲಾಲಾಂಛನದ ರಂಗನಿರ್ದೇಶಕರಾದ ಪ್ರೊ. ಉದ್ಯಾವರ ಮಾಧವ ಆಚಾರ್ಯರ ರಂಗಕೃತಿ ಹಾಗೂ ನಿರ್ದೇಶನದ ಈ ನೃತ್ಯನಾಟಕವನ್ನು ವಿದುಷಿ ಡಾ. ಭ್ರಮರಿ ಶಿವಪ್ರಕಾಶ್ ಸಂಯೋಜಿಸಿದ್ದು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರುಗಳ ಪೂರ್ಣ ಬೆಂಬಲದೊಂದಿಗೆ ಪ್ರದರ್ಶನಗೊಳ್ಳಲಿದೆ. ಕಲಾಸಕ್ತರಿಗೆ ಮುಕ್ತಪ್ರವೇಶವಿದೆ.


