ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದವರಿಂದ 23ನೇ ವರ್ಷದ ‘ಭರತಮುನಿ ಜಯಂತ್ಯುತ್ಸವ’ದ ಪ್ರಯುಕ್ತ ನೃತ್ಯ ಪ್ರದರ್ಶನವು ದಿನಾಂಕ 26 ಅಕ್ಟೋಬರ್ 2025ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು.
ಬೆಳಗ್ಗೆ ರಾಧಾಕೃಷ್ಣ ನೃತ್ಯ ನಿಕೇತನದ ಶಿಷ್ಯ-ಪ್ರಶಿಷ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವಿದುಷಿ ಸುಶ್ಮಿತಾ ಗಿರಿರಾಜ್, ವಿದುಷಿ ಶ್ರೀವಿದ್ಯಾ ಸಂದೇಶ್ ಹಾಗೂ ವಿದುಷಿ ಶ್ರೀಕಲ್ಯಾಣಿ ಜೆ. ಪೂಜಾರಿ ಇವರು ತಮ್ಮ ಶಿಷ್ಯರೊಡಗೂಡಿ ಅತ್ಯದ್ಭುತವಾದ ನೃತ್ಯ ಕಾರ್ಯಕ್ರಮವನ್ನು ರಮಣೀಯವಾಗಿ ಪ್ರದರ್ಶಿಸಿದರು. ಮಧ್ಯಾಹ್ನ ಇದೇ ಸಂಸ್ಥೆಯ ವಿದ್ಯಾರ್ಥಿನಿಯರಿಂದ ‘ನೃತ್ಯ ಸಿಂಚನಾ’ ಕಾರ್ಯಕ್ರಮವು ಬಹಳ ಸುಂದರವಾಗಿ ಮೂಡಿಬಂದಿತು.


ಸಂಜೆ ‘ನೃತ್ಯಾಭಿಷೇಕಂ’ ಕಾರ್ಯಕ್ರಮವು ಸಂಸ್ಥೆಯ ಶಿಷ್ಠೆಯರಿಂದ ಕೂಚುಪುಡಿಯ ಲಾಲಿತ್ಯಮಯವಾದ ಮೆರುಗನ್ನು ಹೊರಹೊಮ್ಮಿಸಿತು. ಶ್ರೀರಂಗನನ್ನು ವಿಧವಿಧವಾಗಿ ಬಣ್ಣಿಸುವ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಆರಂಭಗೊಳಿಸಿ, ಅನಂತರ ರಾಮಾಯಣವನ್ನು ಬಣ್ಣಬಣ್ಣವಾಗಿ ವರ್ಣಿಸುವ ‘ರಾಮಾಯಣ ಶಬ್ದಂ’ ಅನ್ನು ಪ್ರದರ್ಶಿಸಲಾಯಿತು. ಶಿವ-ಪಾರ್ವತಿಯರ ‘ಆನಂದ ತಾಂಡವ’ವು ಕಲಾಭಿಮಾನಿಗಳ ಗಮನ ಸೆಳೆದರೆ, ಇಲ್ಲಿಂದ ಮುಂದುವರಿದ ಅರ್ಧನಾರೀಶ್ವರ ನೃತ್ಯ ಪ್ರದರ್ಶನವು ಶಿವ ಹಾಗೂ ಶಕ್ತಿಯ ಎರಡೂ ಭಾವಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ದುರ್ಗೆ ಎಂಬ ದೇವಿಯ ವರ್ಣನ ಪ್ರಸ್ತುತಿಯಲ್ಲಿ ಮಹಿಷಾಸುರನ ಸಂಹಾರವು ಪ್ರತಿಯೊಬ್ಬರ ಮನಮುಟ್ಟುವಂತೆ ಮೂಡಿ ಬಂದಿತು.

ಹಿಮ್ಮೇಳದಲ್ಲಿ ಹಾಡುಗಾರಿಕೆ, ನಟುವಾಂಗ ಮತ್ತು ನೃತ್ಯ ನಿರ್ದೇಶನದಲ್ಲಿ ಸಂಸ್ಥೆಯ ನೃತ್ಯ ಗುರುಗಳಾದ ವಿದುಷಿ ವೀಣಾ ಮುರಲೀಧರ ಸಾಮಗ ಅವರು ತಮ್ಮ ವಿದ್ವತ್ ಅನ್ನು ತೋರಿದರೆ ವಯೋಲಿನ್‌ನಲ್ಲಿ ಶ್ರೀಧರ್ ಆಚಾರ್ಯ, ಮೃದಂಗದಲ್ಲಿ ವಿದ್ವಾನ್ ಮನೋಹರ ರಾವ್ ಮಂಗಳೂರು, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಕಾರ್ತಿಕ್ ಇನ್ನಂಜೆ ತಮ್ಮ ಕಲಾ ನೈಪುಣ್ಯದಿಂದ ಕಾರ್ಯಕ್ರಮಕ್ಕೆ ಇನ್ನು ಮೆರುಗನ್ನು ತಂದಿತ್ತರು. ವರ್ಣಾಲಂಕಾರದಲ್ಲಿ ವಿದುಷಿ ಸುಶ್ಮಿತಾ ಗಿರಿರಾಜ್, ಹರೀಶ್ ಬ್ರಹ್ಮಾವರ ಮತ್ತು ವಿಜೇಶ್ ಸಹಕರಿಸಿದರು.

ಡಾ. ದ್ವಾರಕನಾಥ್
