ಮಂಡ್ಯ : ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆದ 42ನೇ ಓಟೋರಿನೋಲಾರಿಂಗೋಲಜಿನ್ಸ್ ಆಫ್ ಇಂಡಿಯಾ ರಾಜ್ಯ ಸಮ್ಮೇಳನದಲ್ಲಿ ಕೊಡಗಿನ ಸಂಸ್ಕೃತಿ ಸಿರಿ ಟ್ರಸ್ಟಿನಿಂದ ದಿನಾಂಕ 19 ಸೆಪ್ಟೆಂಬರ್ 2025ರಂದು ಮಂಡ್ಯದ ಅಮರಾವತಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕೊಡವ ಸಂಸ್ಕೃತಿಯ ನೃತ್ಯ ಆಕರ್ಷಿಸಿತು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನರಿ ಮಂಗಲ, ಉಮ್ಮತ್ತಾಟ್, ಗೆಜ್ಜೆ ತಂಡ್, ಪುತ್ತರಿ, ಉರ್ ಟಿ ಕೊಟ್ಸ್ ಆಟ್ ಹಾಗೂ ಕೊಡವ ವಾಲಗ ಕಾರ್ಯಕ್ರಮ ಅಗತ್ಯ ಮಾಹಿತಿಯೊಂದಿಗೆ ನಡೆಯಿತು. ಕೊಡವ ಸಾಂಪ್ರದಾಯಿಕ ಸೀರೆ, ಬಿಳಿ ಮತ್ತು ಕಪ್ಪು ಕುಪ್ಯಾಧಾರಿಗಳು ಉತ್ತಮ ನೃತ್ಯ ಪ್ರದರ್ಶನ ನೀಡಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವೈದ್ಯರುಗಳ ಪ್ರಸಂಸೆಗೆ ಪಾತ್ರರಾದರು. ಕೊಡಗಿನ ನಟಿ, ನಿರ್ಮಾಪಕಿ, ಕವಿಯತ್ರಿ ಹಾಗೂ ಸಂಸ್ಕೃತಿ ಸಿರಿ ಟ್ರಸ್ಟ್ ನ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅವರು ನೃತ್ಯರೂಪಕದ ನೇತೃತ್ವ ವಹಿಸಿ ಕೊಡವ ಸಂಸ್ಕೃತಿ ಮತ್ತು ನೃತ್ಯ ಬಗೆಯ ವಿವರ ನೀಡಿದರು.
ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಉಪಾಧ್ಯಕ್ಷೆ ಕೋಲೆಯಂಡ ನಿಶಾ ಮೋಹನ್, ಗೌರವ ಕಾರ್ಯದರ್ಶಿ ಕೇಚಂಡ ಸುನೀತಾ ಗಣೇಶ್, ಖಜಾಂಚಿ ಕೂಡಂಡ ದೀಪ ಕಾವೇರಪ್ಪ ಸೇರಿದಂತೆ 17 ಮಂದಿಯ ತಂಡ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು. ಕೊಡಗಿನ ವೈದ್ಯಕೀಯ ನೃತ್ಯ ತಂಡದಿಂದ ನಡೆದ ಭರತನಾಟ್ಯ, ಕಥಕ್ ನೃತ್ಯ ಮತ್ತು ಗಾಯನ ಕಾರ್ಯಕ್ರಮ ಕೂಡ ಗಮನ ನೆಳೆಯಿತು. ಕೊಡಗಿನ ಸಂಸ್ಕೃತಿಯನ್ನು ರಾಜ್ಯ ಸಮ್ಮೇಳನದಲ್ಲಿ ಪ್ರದರ್ಶಿಸಿ ಯಶಸ್ವಿಯಾದ ಬಗ್ಗೆ ಹಿರಿಯ ವೈದ್ಯ ಡಾ. ಕೋಲೆಯಂಡ ಮೋಹನ್ ಅಪ್ಪಾಜಿ, ಹರಿಣಿ ವಿಜಯ್, ಈರಮಂಡ ವಿಜಯ್ ಉತ್ತಯ್ಯ ಹಾಗೂ ಡಾ. ವಿಕ್ರಂ ಶೆಟ್ಟಿ ಅವರುಗಳು ಹರ್ಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ವೈದ್ಯರ ಅಂತರಾಷ್ಟ್ರೀಯ ಮಟ್ಟದ ನಮ್ಮೇಳನಕ್ಕೆ ಸಂಸ್ಕೃತಿ ಸಿರಿ ಟ್ರಸ್ಟಿನ ನೃತ್ಯ ತಂಡ ಆಯ್ಕೆಯಾಗಿರುವ ಕುರಿತು ಹೇಳಿದರು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ವೈದ್ಯರುಗಳಾದ ಡಾ. ಹನುಮಾನ್ ಪ್ರಸಾದ್, ಡಾ. ರವಿ ಡಿ., ಡಾ. ನರಸಿಂಹಯ್ಯ ಸ್ವಾಮಿ, ಡಾ. ರಾಮಲಿಂಗ ಗೌಡ ಎನ್., ಡಾ. ಶ್ರೀಕಾಂತ್ ಸೇರಿದಂತೆ ಸಾವಿರಕ್ಕೂ ಅಧಿಕ ವೈದ್ಯರು ಪಾಲ್ಗೊಂಡಿದ್ದರು.