ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 07-10-2024ರಂದು ಸಂಜೆ ಗಂಟೆ 6.25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಧನ್ವ ಎಸ್. ಆಚಾರ್ಯ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಮೂಲತಃ ಶಿವಪುರ, ಹೆಬ್ರಿಯವರಾದ ಸುಧನ್ವಾ ಎಸ್. ಆಚಾರ್ಯರವರು ಶ್ರೀ ಸುಬ್ರಹ್ಮಣ್ಯ ಎಸ್.ಜಿ. ಹಾಗೂ ಶ್ರೀಮತಿ ದೀಪಾ ಎಸ್. ಆಚಾರ್ಯರವರ ಜ್ಯೇಷ್ಠ ಪುತ್ರ. ತಮ್ಮ 3ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಪಾಶ್ಚಾತ್ಯ ನೃತ್ಯಕ್ಕೆ ವೇದಿಕೆ ಹತ್ತಿದ ಇವರು ತಮ್ಮ 12ನೇ ವಯಸ್ಸಿನಲ್ಲಿ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ ಕಲಿಯಲು ಪ್ರಾರಂಭಿಸಿದರು. ಗೌರಿಬಿದನೂರಿನ ಶ್ರೀ ಶಾರದಾ ಕಿನ್ನರ ಕಲಾ ಮಂದಿರದ ಶ್ರೀಮತಿ ತಾರಿಣಿ ಶ್ರೀನಿವಾಸ್ ಇವರ ಮೊದಲ ಗುರು. ನಂತರ ಶ್ರೀಮತಿ ಚೈತ್ರ ಮೋಕ್ಷಗುಂಡಂ, ಯಲಹಂಕದಲ್ಲಿ ಶ್ರೀಮತಿ ಸಂತೋಷಿ ಪ್ರಶಾಂತ್ ಹಾಗೂ ಶಿವಪ್ರಿಯ ಡ್ಯಾನ್ಸ್ ಸ್ಕೂಲ್ ನ ಕಲಾ ಆರತಿ ರತ್ನ, ಡಾ. ಸಂಜಯ್ ಶಾಂತಾರಾಮ್ ಇವರಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಆಗಸ್ಟ್ 15 2023ರಲ್ಲಿ ರಂಗಪ್ರವೇಶ ಮುಗಿಸಿ ಇದೀಗ ಸೀನಿಯರ್ ಎಕ್ಸಾಮ್ ಬರೆದಿದ್ದಾರೆ. ಗುರು ಸಂಜಯ್ ಶಾಂತಾರಾಮ್ ಇವರೊಂದಿಗೆ ಶ್ರೀಲಂಕಾ, ಮಸ್ಕಟ್ ಇಂಡೋನೇಷ್ಯಾ ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.