ಆಚಾರ್ಯ ದೀಪಾ ನಾರಾಯಣ್ ಶಶೀಂದ್ರನ್ ನೇತೃತ್ವದ ‘ಕೂಚಿಪುಡಿ ಪರಂಪರಾ ಫೌಂಡೇಶನ್’ ಪ್ರತಿವರ್ಷ ವಿಭಿನ್ನವಾದ ನಾಟ್ಯದ ಔತಣವನ್ನು ಕಲಾರಸಿಕರಿಗೆ ನೀಡುತ್ತ ಬಂದಿರುವುದು ದಾಖಲೆಯ ಸಂಗತಿ. ದಿನಾಂಕ 26 ಅಕ್ಟೋಬರ್ 2024 ರಂದು ಕೋರಮಂಗಲದ ‘ಮೇಡೈ’ ಸಹಯೋಗದೊಂದಿಗೆ ಖ್ಯಾತ ನೃತ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿಯ ಸ್ಮರಣಾರ್ಥ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಅಂದು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ನೃತ್ಯ ಕಲಾವಿದರ ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳು ಕಲಾರಸಿಕರ ಕಣ್ಮನವನ್ನು ಸೂರೆಗೊಂಡವು. ವೈವಿಧ್ಯ ನಾಟ್ಯ ಮನರಂಜನೆಯು ಕಲಾವಿದರ ಬಹುಮುಖ ಪ್ರತಿಭೆಯ ಅಸ್ಮಿತೆಯನ್ನು ಎತ್ತಿ ಹಿಡಿದಿತ್ತು.
ಶುಭಾರಂಭಕ್ಕೆ ಉದಯೋನ್ಮುಖ ಕುಚಿಪುಡಿ ನೃತ್ಯಕಲಾವಿದೆ ಜನನಿ ರಾವ್ ‘ಗಣೇಶ ಕೌತ್ವಂ’ ಕೃತಿಯನ್ನು ತಮ್ಮ ಮೋಹಾಕಾಭಿನಯದಿಂದ ಪ್ರಸ್ತುತಪಡಿಸಿದರು. ಗಣೇಶನ ಮೆಲುನಡೆಗಳಿಂದ, ಕಣ್ಸೆಳೆವ ಭಂಗಿಗಳಿಂದ ಗಣಪನ ವೈಶಿಷ್ಟ್ಯವನ್ನು ಕಂಡರಿಸಿದಳು. ಹುಸಿ ಅಡವುಗಳಿಂದ ಕೂಡಿದ ಕಲಾವಿದೆಯ ಸ್ಫುಟವಾದ ಆಂಗಿಕಾಭಿನಯ, ಬಾಗು-ಬಳಕು ಮುದನೀಡಿತು. ಸಾಮಾನ್ಯವಾಗಿ ಕುಚಿಪುಡಿ ನೃತ್ಯಶೈಲಿಯಲ್ಲಿ ರಂಗಾಕ್ರಮಣದಲ್ಲಿ ಕಲಾವಿದರ ನಿಷ್ಕ್ರಮಣ ನಡೆಯುವುದು ಆಕರ್ಷಕವಾಗಿರುತ್ತದೆ. ಮುಂದಿನ ಕೃತಿ ‘ರಾಮಾಯಣ ಶಬ್ದಂ’ ಇಡೀ ರಾಮಾಯಣ ಕಥೆಯನ್ನು ಸಂಕ್ಷಿಪ್ತವಾಗಿ ಅಷ್ಟೇ ಪರಿಣಾಮಕಾರಿಯಾಗಿ ನಿರೂಪಿಸಲಾಯಿತು. ವೆಂಪಟಿ ಚಿನ್ನ ಸತ್ಯಂ ನೃತ್ಯ ಸಂಯೋಜಿಸಿದ ಕೃತಿಯನ್ನು ಕಲಾವಿದೆ ನಯನ ಮನೋಹರವಾದ ನೃತ್ತಾವಳಿಗಳಿಂದ, ಭಾವಪೂರ್ಣ ಅಭಿನಯದಿಂದ ರಾಮಾಯಣದ ಮುಖ್ಯ ಘಟನೆಗಳನ್ನು ಚಿತ್ರಿಸಿದಳು. ಅನಂತರ- ಅಣ್ಣಮಾಚಾರ್ಯ ವಿರಚಿತ ‘ಮುದ್ದುಗಾರಿ ಯಶೋದ’ – ಮನನೀಯ ಕೃತಿಯಲ್ಲಿ ಶ್ರೀ ಕೃಷ್ಣನ ಲೀಲಾವಿನೋದ, ಸಾಹಸಗಾಥೆಗಳನ್ನು ಮತ್ತು ವಾತ್ಸಲ್ಯಮೂರ್ತಿ ಯಶೋದೆಯ ಪಾತ್ರವನ್ನು ಕಲಾವಿದೆ ಜನನಿ ಚಿತ್ರವತ್ತಾಗಿ ಕಟ್ಟಿಕೊಟ್ಟಳು.
ಅನಂತರ- ಕಲಾವಿದ ದಿಲೀಪ್ ಸೇಲರ್ ಪುರಿಯ ಜಗನ್ನಾಥನನ್ನು ಭಕ್ತಿಭಾವದಿಂದ ಆರಾಧಿಸುತ್ತ, ಒಡಿಯಾ ನೃತ್ತ ಸೌಂದರ್ಯದಿಂದ ಶೋಭಿಸಿದ ‘ಪಲ್ಲವಿ’ಯನ್ನು ಕಲಾವಿದ ತಾನೇ ನೃತ್ಯ ಸಂಯೋಜಿಸಿ, ತಮ್ಮ ನೃತ್ತ ಸಾಮರ್ಥ್ಯದ ಮಿನುಗಿನಿಂದ ಕಣ್ಮನ ತಣಿಸಿದರು. ಮಧುರ ಭಾಷಿಣಿ, ಸೌಮ್ಯ ಹಾಸಿನಿ, ಕೋಟಿ ಪ್ರಕಾಶಿನಿಯಾದ ಸರಸ್ವತಿಯ ಮಹಿಮೆಯನ್ನು ತನ್ನ ಸುಂದರ ಭಾವ-ಭಂಗಿಗಳಿಂದ ಸಾದರಪಡಿಸಿದರು. ಸಂಚಾರಿ ಕಥಾನಕದಲ್ಲಿ ‘ದ್ರೌಪದಿಗೆ ಅಕ್ಷಯ ವಸ್ತ್ರ’ ನೀಡುವ ಪ್ರಕರಣ ಹಾಗೂ ಗಜೇಂದ್ರ ಮೋಕ್ಷವನ್ನು ಇಡೀ ರಂಗವನ್ನು ಬಳಕೆ ಮಾಡಿಕೊಂಡು ನಿರೂಪಿಸಿದ್ದು ಆನಂದದಾಯಕವಾಗಿತ್ತು. ನಂತರ- ನಾರಾಯಣ ತೀರ್ಥ ವಿರಚಿತ ‘ಕೃಷ್ಣ ಲೀಲಾ ತರಂಗಿಣಿ’ಯಿಂದ ಆಯ್ದಭಾಗ ಕೃಷ್ಣನ ವರ್ಣನೆ ಕುಚಿಪುಡಿ ನರ್ತನ ಶೈಲಿಯಲ್ಲಿ ಭಕ್ತಿ ಪ್ರಧಾನವಾಗಿ ನವರಸ ಭಾವಗಳಿಂದ ಅರ್ಪಿತವಾಯಿತು. ಹಿತ್ತಾಳೆಯ ತಟ್ಟೆಯ ಮೇಲೆ ನಿಂತು ನೃತ್ತಗಳನ್ನು ಲಯಬದ್ಧವಾಗಿ ಅಷ್ಟೇ ರಮ್ಯವಾಗಿ ನಿರೂಪಿಸಿದ್ದು ಮತ್ತು ನಿರಂತರ ಭ್ರಮರಿಗಳಲ್ಲಿ ತಮ್ಮ ನೃತ್ತ ಪ್ರಾವೀಣ್ಯವನ್ನು ದಿಲೀಪ್ ತೋರಿಸಿದರು.
ನಾಟ್ಯಾಚಾರ್ಯ ದೀಪಾ ಶಶೀಂದ್ರನ್ ಶಿಷ್ಯೆ ಕಾರ್ತೀಕಾ ಮೋಹನ್ ಮುಂದೆ – ‘ದ್ರೌಪದಿ ಪ್ರವೇಶ ಧರುವು’ ಕೃತಿಯನ್ನು ತನ್ನ ಚೈತನ್ಯಪೂರ್ಣ ನೃತ್ಯದ ಲಾಸ್ಯದಿಂದ, ತನ್ನ ಬಾಗು-ಬಳುಕಿನ ಆಂಗಿಕಾಭಿನಯದಿಂದ ಆಕರ್ಷಿಸಿದಳು. ಪರಮ ಪತಿವ್ರತೆ ದ್ರೌಪದಿಯ ಕಥನದ ಸುತ್ತ ಪರಿಭ್ರಮಿಸಿದ ನೃತ್ಯಲಹರಿ, ಕಾರ್ತಿಕಳ, ನೃತ್ತ ಮೆರುಗಿನಿಂದ ಶೋಭಿಸಿತು. ನಂತರದ ‘ಜಾವಳಿ’ಯಲ್ಲಿ ವಿಪ್ರಲಬ್ಧ ಉತ್ತಮ ಶೃಂಗಾರ ನಾಯಿಕೆಯಾಗಿ ಕಲಾವಿದೆ- ‘ಸಾಲು ಸಾಲಾರ ಸಾಮಿ’ (ರಚನೆ- ಸ್ವಾತಿ ತಿರುನಾಳ್ ಮಹಾರಾಜ) ಎಂದು ಬಾರದ, ಕಾಯಿಸಿ, ಸತಾಯಿಸುವ ಇನಿಯನ ಬಗ್ಗೆ ಹುಸಿಮುನಿಸು ತೋರುತ್ತ ಶೃಂಗಾರ- ಭಕ್ತಿಭಾವದಲ್ಲಿ ವಿಲಪಿಸುತ್ತಾಳೆ. ನವಿರಾದ ಭಾವನೆಗಳನ್ನು ತನ್ನ ಸೂಕ್ಷ್ಮ ಅಭಿನಯದಲ್ಲಿ ಸಾಂದ್ರೀಕರಿಸಿ ಅಭಿವ್ಯಕ್ತಿಸಿದಳು ಕಲಾವಿದೆ.
ಕಾರ್ಯಕ್ರಮದ ಅಂತ್ಯದಲ್ಲಿ ಬಹು ಸ್ವಾರಸ್ಯವಾದ ಅಷ್ಟೇ ಆಸಕ್ತಿ ಕೆರಳಿಸಿದ ಕಲಾಮಂಡಲಂ ಖ್ಯಾತಿಯ ರೋಶಿನ್ ಚಂದ್ರನ್ ಪ್ರಸ್ತುತಪಡಿಸಿದ ‘ಓಟ್ಟಂತುಲ್ಲಾಲ್’ (ನಮ್ಮ ಯಕ್ಷಗಾನ ಮತ್ತು ಕೇರಳದ ಕಥಕ್ಕಳಿಯನ್ನು ನೆನಪಿಗೆ ತರುವ) ನಾಟಕೀಯ ಆಯಾಮದ ನೃತ್ಯ ಪ್ರೇಕ್ಷಕರನ್ನು ನಕ್ಕು-ನಗಿಸಿ ಮನರಂಜನೆ ನೀಡಿತು. ದ್ರೌಪದಿಯ ಬೇಡಿಕೆಯ ಈಡೇರಿಕೆಗಾಗಿ, ಭೀಮನು ಸೌಗಂಧಿಕಾ ಪುಷ್ಪವನ್ನು ತರಲು ಕದಳೀವನಕ್ಕೆ ತೆರಳಿದಾಗ ಅಲ್ಲಿ, ಹನುಮಂತನಿಂದ ಅವನು ಅಹಂಕಾರ ಭಂಗಕ್ಕೆ ಒಳಗಾದ ಘಟನೆಯನ್ನು ಕಲಾವಿದ ತನ್ನ ಹಾಸ್ಯೋಕ್ತಿ, ಸಂಗೀತ- ನಾಟಕಾಭಿನಯದಿಂದ ಕೂಡಿದ ಹೆಜ್ಜೆ-ಗೆಜ್ಜೆಗಳ ಸಮ್ಮಿಳಿತದಿಂದ ಅಮೋಘವಾಗಿ ಪ್ರದರ್ಶಿಸಿ ಪ್ರೇಕ್ಷಕರ ಭಾರಿ ಕರತಾಡನ ಪಡೆದರು.
ಕೇರಳದ ಶಾಸ್ತ್ರೀಯ ಪ್ರದರ್ಶನ ಕಲೆಗಳಲ್ಲಿ, ‘ಒಟ್ಟಂತುಲ್ಲಾಲ್’ ಪ್ರದರ್ಶನಗಳಲ್ಲಿ ಕಂಡು ಬರುವ ಜಾಣ್ಮೆ ಮತ್ತು ಸಾಮಾಜಿಕ ವಿಮರ್ಶೆ, ವಿಡಂಬನೆ- ಆಹ್ಲಾದತೆಯ ಕಾರಣಕ್ಕೆ ಜನಪ್ರಿಯತೆಯನ್ನು ಗಳಿಸಿದೆ. ಇಂಥ ಒಂದು ಅಪರೂಪದ ನೃತ್ಯ ಪ್ರಕಾರವನ್ನು ನೋಡುವ ಸುಯೋಗವನ್ನು ಆಚಾರ್ಯ ದೀಪಾ ಶಶೀಂದ್ರನ್ ವಿವಿಧ ಕುಚಿಪುಡಿ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಿ, ಕಲಾರಸಿಕರಿಗೆ ವಿನೂತನ ಅನುಭೂತಿ ಒದಗಿಸಿದ್ದರು. ಇಂಥ ಅನುಪಮ ಕಾರ್ಯಕ್ರಮಕ್ಕಾಗಿ ದೀಪಾ ಅವರಿಗೆ ಹಾರ್ದಿಕ ಅಭಿನಂದನೆಗಳು.
ವಿಮರ್ಶಕಿ : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.