Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಕಣ್ಮನ ಸೂರೆಗೊಂಡ ಆರಭಿ ಕಲಾತ್ಮಕ ನೃತ್ಯಾರ್ಪಣೆ
    Article

    ನೃತ್ಯ ವಿಮರ್ಶೆ | ಕಣ್ಮನ ಸೂರೆಗೊಂಡ ಆರಭಿ ಕಲಾತ್ಮಕ ನೃತ್ಯಾರ್ಪಣೆ

    September 9, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಆಹ್ಲಾದಕರ ನರ್ತನವೊಂದು ಹೇಗಿರುತ್ತದೆ ಎಂಬುದನ್ನು ಸಾಕ್ಷೀಕರಿಸಿದ ಆರಭಿಯ ಮನಮೋಹಕ ನೃತ್ತ ಲಾಸ್ಯಗಳ – ಶಿಲ್ಪಾತ್ಮಕ ನೃತ್ಯಭಂಗಿಗಳ ಅನನ್ಯತೆ ಕಣ್ಮನ ಸೂರೆಗೊಂಡಿತು. ಇತ್ತೀಚೆಗೆ, ಜಯನಗರದ ಜೆ.ಎಸ್.ಎಸ್. ವೇದಿಕೆಯೆಂಬ ರಂಗೋದ್ಯಾನದಲ್ಲಿ ನಾಟ್ಯಮಯೂರಿಯೊಂದು ಸ್ವಚ್ಚಂದವಾಗಿ ಕುಣಿದಾಡಿ ತನ್ನ ನೃತ್ಯ ಸಾಧನೆಯ ಚೆಂಬೆಳಕನ್ನು ಹೊರಚೆಲ್ಲಿ ಕಲಾರಸಿಕರ ಹೃದಯವನ್ನು ಆಹ್ಲಾದಗೊಳಿಸಿತು.

    ಉದಯೋನ್ಮುಖ ನೃತ್ಯ ಕಲಾವಿದೆ ಆರಭಿ ಅಂದು ತನ್ನ ರಂಗಾರ್ಪಣೆಯಲ್ಲಿ ನುರಿತ ನರ್ತಕಿಯಂತೆ ಲೀಲಾಜಾಲವಾಗಿ ಪಾದಭೇದಗಳ ಸೌಂದರ್ಯದಲ್ಲಿ, ಭಾವನಿಮಗ್ನತೆಯ ಸುಂದರಾಭಿನಯದಲ್ಲಿ ಎರಡು ಗಂಟೆಗಳ ಕಾಲ ನಿರಾಯಾಸವಾಗಿ ನಗುಮೊಗದಿಂದ ನರ್ತಿಸಿದ್ದು ವಿಶೇಷ. ವಿ. ಪೂರ್ಣಿಮಾ ಗುರುರಾಜರ ಶಿಷ್ಯೆ, ತನ್ನ ಹೆಸರಿಗೆ ಅನ್ವರ್ಥಕವಾದ ಆರಭಿ ರಾಗದ ‘ಶ್ರೀ ಸರಸ್ವತಿ ನಮೋಸ್ತುತೆ’ಯ ನಂತರ, ಗಣಪತಿ ಸ್ತುತಿ- ‘ಆದಿಪೂಜಿತ ಗಣೇಶ ಚರಣಂ’ ನೆನೆಯುತ್ತ ಮೋದಕಪ್ರಿಯನ ವಿವಿಧ ರೂಪ – ಭಂಗಿಗಳನ್ನು ತನ್ನ ಸುಕೋಮಲ ಆಂಗಿಕಾಭಿನಯದಿಂದ ಕಟ್ಟಿಕೊಟ್ಟಳು. ಹದವಾದ ಮೈಕಟ್ಟಿನ ಕಲಾವಿದೆಯ ಸ್ಫುಟವಾದ ಹಸ್ತಮುದ್ರೆ, ಹರಿತ ನೃತ್ತಾವಳಿಗಳು, ‘ಪುಷ್ಪಾಂಜಲಿ’ಯ ಸ್ವರಾವಳಿಗಳ ಖಚಿತ ಹೆಜ್ಜೆಗಳು ನೋಡಲು ಚೆಂದವೆನಿಸಿದವು.

    ಮೋಹನ ರಾಗದ ‘ಜತಿಸ್ವರ’- ಆಮೋದಪ್ರದವಾಗಿ ಸಾಗುತ್ತ, ಆರಭಿಯ ಅಂಗಶುದ್ದ ಹಸ್ತಗಳ ವಿತರಣೆ, ಜಿಂಕೆಮರಿಯ ಲಾಘವದಲಿ ಮೂಡಿಬಂದ ರಂಗಾಕ್ರಮಣದ ಪುಟ್ಟಹೆಜ್ಜೆಗಳ ರಮ್ಯ ಲಹರಿ, ಚೇತೋಹಾರಿ ಜತಿಗಳ ಸೊಗಸನ್ನು ಬಿಂಬಿಸಿತ್ತು. ಪ್ರಸ್ತುತಿಯ ಹೃದಯ ಭಾಗ ಅಷ್ಟೇ ಹೃದ್ಯವೂ ಆದ ‘ವರ್ಣ’ (ರಾಗ- ವಲಚಿ, ಆದಿತಾಳ-ರಚನೆ – ಸುಬ್ಬುಡು) ಖಂಡಿತ ನಾಯಕಿ ದೇವಯಾನಿಯ ಮನೋವ್ಯಥೆಯನ್ನು ಹಲವು ಬಗೆಗಳಲ್ಲಿ ಅನಾವರಣಗೊಳಿಸಿದ ದೀರ್ಘ ಬಂಧ. ಅನ್ಯ ಸ್ತ್ರೀ ವಲ್ಲಿಯ ಸಂಗ ಮಾಡಿರುವ ತನ್ನಿನಿಯ ಮುರುಗನ ಬಗ್ಗೆ ಕುಪಿತಳಾಗಿರುವ ನಾಯಿಕೆ, ಅವನನ್ನು ಮರುಳು ಮಾಡಿ ಒಲಿಸಿಕೊಂಡಿರುವ ತನ್ನ ಸವತಿಯನ್ನು ಸಂಕಟದಿಂದ ನಿಂದಿಸುತ್ತಾಳೆ. ಮುರುಗನಿಗೆ ಹಿಡಿದಿರುವ ಭ್ರಮೆಯನ್ನು ಬಿಡಿಸಿ, ಮರಳಿ ತನ್ನಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನದಲ್ಲಿರುವ ದೇವಯಾನಿ ತನ್ನ ಗಂಡ ಅಮಾಯಕ ಎಂದೇ ಭಾವಿಸಿದ್ದಾಳೆ. ಉತ್ಖಂಠಿತ ಭಾವನೆಗಳಿಂದ ಕುದಿವ ಅವಳ ನೋವಿನ ಮಜಲುಗಳನ್ನು ಕಲಾವಿದೆ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತನ್ನ ಭಾವತೀವ್ರ ಅಭಿನಯದಿಂದ ಸಾಂದ್ರಗೊಳಿಸಿದಳು. ಕಡೆಯಲ್ಲಿ ಹತಾಶಳಾದ ಅವಳು ನಿರಾಶೆಗೊಂಡು ಇಂಥವನು ತನಗೆ ಬೇಡವೇ ಬೇಡ ಎಂದು ತನ್ನ ಮನೆಯ ಬಾಗಿಲನ್ನು ಹಾಕಿ ಅವನನ್ನು ನಿರಾಕರಿಸಿದ ದೃಶ್ಯ ಪರಿಣಾಮಕಾರಿಯಾಗಿತ್ತು. ನಾಯಿಕೆ ತನ್ನ ಭಾವಸ್ತರಗಳ ನಡುವೆ ತನ್ನ ಮನಸ್ಥಿತಿಯ ಅಸಮತೋಲನದ ಪ್ರತಿಬಿಂಬವಾಗಿ ವಿವಿಧ ನೃತ್ತ ವಿನ್ಯಾಸಗಳಲ್ಲಿ, ಆಕಾಶಚಾರಿ, ಕರಣಗಳ ಪ್ರಫುಲ್ಲತೆಯಲ್ಲಿ ನರ್ತಿಸುವ ಓಘ ನೋಡುಗರ ಕಣ್ಣೋಟವನ್ನು ಹಿಡಿದಿಟ್ಟಿತ್ತು. ಅಭಿನಯ ಮತ್ತು ನೃತ್ತಗಳ ಹದವಾದ ಮಿಶ್ರಣ ಮುದನೀಡಿತು. ಗುರು ಪೂರ್ಣಿಮಾರ ನಟುವಾಂಗದ ಹರಿವು ಕಲಾವಿದೆಯ ನರ್ತನಕ್ಕೆ ಇಂಬು ನೀಡಿತ್ತು. ಸುಧಾ ರಘುರಾಮರ ವಿಶಿಷ್ಟ ಗಾಯನ ಶೈಲಿ ನಾಯಿಕೆಯ ಭಾವಕೋಶವನ್ನು ಸಮರ್ಥವಾಗಿ ಪೋಷಿಸಿತ್ತು.

    ಅನಂತರ ಕ್ಷೇತ್ರಜ್ಞ ವಿರಚಿತ ಭೈರವಿ ರಾಗದ ‘ಪದಂ’ನ ಪ್ರಾರಂಭದಲ್ಲಿ ಆರಭಿ ತಾನು ಸೊಗಸಾದ ಗಾಯಕಿ ಕೂಡ ಎಂದು ತನ್ನ ಬಹುಮುಖ ಪ್ರತಿಭೆಯನ್ನು ಸಾಬೀತುಗೊಳಿಸಿದಂತೆ, ವಾಲ್ಮೀಕಿ ವಿರಚಿತ ಅರಣ್ಯಖಾಂಡದ ಶ್ಲೋಕಗಳನ್ನು ಗಮಕ ರೂಪದಲ್ಲಿ ಹಾಡಿದಳು. ಪ್ರಿಯತಮೆಯಿಂದ ದೂರಾದ ನಾಯಕ, ತನ್ನ ವಿರಹತಪ್ತ ಭಾವನೆಗಳಿಗೆ ಶ್ರೀರಾಮಚಂದ್ರನ ಜೀವನದ ಕೆಲವು ಸಮವಾಯಿ ಪ್ರಸಂಗಗಳನ್ನು ಸಮೀಕರಿಸಿಕೊಂಡು, ವಿರಹಿ ರಾಮ ಅನುಭವಿಸಿರಬಹುದಾದ ನೋವು, ತೀವ್ರಾಲಾಪಗಳನ್ನು ತನ್ನ ನೋವು- ವಿಷಾದವನ್ನು ವ್ಯಕ್ತಪಡಿಸುತ್ತಾ ಹೋಗುವ ಕಲಾವಿದೆಯ ಸಾತ್ವಿಕಾಭಿನಯ ಮನಮುಟ್ಟಿತು.

    ಮುಂದೆ ಸ್ವಾತಿ ತಿರುನಾಳರ ಬೃಂದಾವನ ಸಾರಂಗದ ಭಜನೆ –ಕೃಷ್ಣನ ಒಡನಾಟದ ಸುಂದರ ಕ್ಷಣಗಳನ್ನು ಕಲ್ಪಿಸಿಕೊಳ್ಳುತ್ತಾ, ಮೈಮರೆತ ವಿರಹಿ ರಾಧೆ, ಅವನನ್ನರಸುತ್ತ ಯಮುನಾ ನದಿಯ ದಂಡೆಗೆ ಬಂದರೆ, ಅಲ್ಲಿ ಕೃಷ್ಣ, ಒಬ್ಬೊಬ್ಬ ಗೋಪಿಕೆಯರ ಸಾಂಗತ್ಯದಲ್ಲೂ ಒಬ್ಬೊಬ್ಬ ಕೃಷ್ಣನಾಗಿ ರಾಸಲೀಲೆಯಾಡುತ್ತಿರುವ ದೃಶ್ಯ ಕಂಡು ಅವಳಿಗೆ ಭ್ರಮ ನಿರಸನವಾಗಿ, ದುಃಖದಿಂದ ಹಾಗೇ ವಿಸ್ಮಿತಳಾಗಿ ಪ್ರತಿಮೆಯಂತೆ ನಿಂತುಬಿಡುತ್ತಾಳೆ. ಆರಭಿ ಈ ಸನ್ನಿವೇಶವನ್ನು ನಾಟಕೀಯ ಚಲನೆಗಳಲ್ಲಿ, ನವಿರು ಭಾವನೆಗಳ ಅಭಿನಯ, ಸುಂದರ ಹೆಜ್ಜೆಮೇಳ –ಹರ್ಷಚಿತ್ತದ ಕೋಲಾಟದ ಸೊಬಗನ್ನು ಮೆರೆದ ಮೆರಗಿನ ಬಗೆ ಅನನ್ಯ. ಹಿನ್ನಲೆಯಲ್ಲಿ ವಿವೇಕ ಕೃಷ್ಣರ ಮಧುರ ಮುರಳಿಗಾನ, ವಿನಯ್ ನಾಗರಾಜನರ ಲಯಾತ್ಮಕ ಮೃದಂಗ ನಿನಾದ ಮತ್ತು ಪ್ರದೇಶಾಚಾರರ ಸಮ್ಮೋಹನ ವಯಲಿನ್ ನಾದಮಂಜರಿ ಪೂರಕವಾಗಿ ಧ್ವನಿಸಿತು. ಅಂತ್ಯದ ಶುದ್ಧ ಸಾರಂಗ ರಾಗದ ‘ತಿಲ್ಲಾನ’- ಮೈ ಅಡವುಗಳು ಮತ್ತು ಶುದ್ಧ ಹಸ್ತಗಳು, ಕೋರ್ವೆಗಳ ಸಂಯೋಜನೆಯಲ್ಲಿ ರೋಮಾಂಚಕರವಾಗಿ ಹೊಮ್ಮಿ ಪ್ರಸ್ತುತಿ ಮಂಗಳದೊಂದಿಗೆ ಸುಸಂಪನ್ನಗೊಂಡಿತು.

    ವೈ.ಕೆ. ಸಂಧ್ಯಾ ಶರ್ಮ
    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    Share. Facebook Twitter Pinterest LinkedIn Tumblr WhatsApp Email
    Previous Articleಕಟೀಲಿನಲ್ಲಿ ಸಂಪನ್ನಗೊಂಡ ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ ಸಮ್ಮೇಳನ
    Next Article ದಿ. ಕಲಾವಿದ ವಿ.ಟಿ. ಶ್ರೀನಿವಾಸ್ ನೆನಪು, ನುಡಿ ಮತ್ತು ಗಾನ ನಮನ
    roovari

    Comments are closed.

    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.