Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೆ ಪುಸ್ತಕ ಆಯ್ಕೆ

    February 6, 2026

    ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ’ ತಾಳಮದ್ದಳೆ

    February 6, 2026

    ನೇಸರು ಜಾಗತಿಕ ಕವನ, ಕಥೆ ಮತ್ತು ನಾಟಕ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ

    February 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಬಾಲ ಗಂಧರ್ವೆಯ ಮನಮೋಹಕ ನಾಟ್ಯ ಸೊಬಗು- ‘ಆದ್ಯ’ ವೈಶಿಷ್ಟ್ಯ
    Article

    ನೃತ್ಯ ವಿಮರ್ಶೆ | ಬಾಲ ಗಂಧರ್ವೆಯ ಮನಮೋಹಕ ನಾಟ್ಯ ಸೊಬಗು- ‘ಆದ್ಯ’ ವೈಶಿಷ್ಟ್ಯ

    February 6, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅಂದು – ಬೆಂಗಳೂರಿನ ದೊಡ್ದ ಕಲ್ಲಸಂದ್ರದ ಕುಮಾರನ್ಸ್ ಶಾಲೆಯ ‘ಮೀನಾಕ್ಷಿ ರಂಗಮಂಚ’ದ ಮೇಲೆ ಕೋಪಾವಿಷ್ಟಳಾಗಿ ಸಿಡಿದೆದ್ದ ದ್ರೌಪದಿಯ ವೀರಾವೇಶದ ಕಟುನುಡಿಗಳು, ಹೆಂಡತಿಗೆ ಅಪಮಾನವಾಗುತ್ತಿದ್ದರೂ ತೆಪ್ಪನೆ ಕುಳಿತ ನಿರಭಿಮಾನಿ ಗಂಡಂದಿರ ಷಂಡತ್ವವನ್ನು ಚುಚ್ಚಿ ಪ್ರಶ್ನಿಸಿದ ಆತ್ಮಾಭಿಮಾನಿಯೊಬ್ಬಳ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಗುಡುಗಿದ ಪುಟ್ಟ ನಟಿ- ನರ್ತಕಿ ‘ಆದ್ಯ’ಳನ್ನು ಕಂಡು ಇಡೀ ಸಭಾಸದನದ ವೀಕ್ಷಕ ಸಮಸ್ತರೂ ಬೆರಗಾಗಿದ್ದರು !

    ಪ್ರಸ್ತುತಿಯ ಪ್ರಾರಂಭದಿಂದ ಅಂತ್ಯದವರೆಗೂ ರಂಗದ ಮೇಲೆ ಲೀಲಾಜಾಲವಾಗಿ, ಮನಮೋಹಕವಾಗಿ ನಾಟ್ಯವಾಡುತ್ತ ಕಲಾರಸಿಕರನ್ನು ಮೋಡಿ ಮಾಡಿದ ಬಾಲ ಗಂಧರ್ವೆಯಂತೆ ಶೋಭಿಸಿದ ಪುಟಾಣಿ ‘ಆದ್ಯ’ ನಿಜಕ್ಕೂ ಚೋದ್ಯವೆನಿಸಿದಳು. ಹತ್ತು ವರ್ಷದ ಬಾಲಪ್ರತಿಭೆಗೆ ಇದ್ದ ಅದಮ್ಯ ಆತ್ಮವಿಶ್ವಾಸ, ಹದವರಿತ ಹೆಜ್ಜೆಗಳ ಮೇಲಿನ ಹತೋಟಿ, ಸೊಗಸಾದ ಅಭಿನಯ ಕೌಶಲ್ಯ ಮತ್ತು ರಂಗಪ್ರಜ್ಞೆ ನೋಡುಗರ ಮೇಲೆ ಉಂಟುಮಾಡಿದ ಪರಿಣಾಮ ನಿಜಕ್ಕೂ ಸ್ಮರಣೀಯ. ಇಷ್ಟು ಚಿಕ್ಕವಯಸ್ಸಿಗೆ ನೃತ್ಯದ ವಿವಿಧ ಆಯಾಮಗಳನ್ನು ಅರಿತು ಅಷ್ಟೇ ಸುಲಲಿತವಾಗಿ ನಿರೂಪಿಸಿದ ಉದಯೋನ್ಮುಖ ನೃತ್ಯಕಲಾವಿದೆ ‘ಆದ್ಯ’ಳ ಮೊದಲ ಹೆಜ್ಜೆಯ ವಿದ್ಯುಕ್ತ ‘ಆದ್ಯೋತ್ಸವ’ ಯಶಸ್ವಿಯಾಗಿ ನೆರವೇರಿತು. ‘ನಾಟ್ಯ ಸಿಂಚನ ಮ್ಯುಸಿಕ್ ಮತ್ತು ಡ್ಯಾನ್ಸ್ ಸ್ಕೂಲ್’ ನ ನೃತ್ಯಗುರು ವಿದುಷಿ. ಮಂಜುಶ್ರೀ ಸಂತೋಷ್ ಶಿಷ್ಯೆ ಹಾಗೂ ಪುತ್ರಿಯಾದ ಆದ್ಯ ಸಂತೋಷ್ ಬದ್ಧತೆಯಿಂದ ನೃತ್ಯ ಕಲಿತು, ಪರಿಶ್ರಮದಿಂದ ಅಭ್ಯಾಸ ಮಾಡಿ ಸಭಾಸದನರ ಸಮ್ಮುಖ ಅರ್ಪಿಸಿದ ‘ದೈವೀಕ ನರ್ತನ’ ಹೃದಯಂಗಮವಾಗಿ, ಸಂತೋಷವನ್ನು ಸಿಂಚನಗೊಳಿಸಿತು.

    ದೈವದತ್ತ ಪ್ರತಿಭೆ ಇದ್ದರೂ ಅದನ್ನು ಪೋಷಿಸಿ ಬೆಳೆಸುವ ವಿದ್ವನ್ಮಣಿ ನೃತ್ಯ ಮಾರ್ಗದರ್ಶಕರು ಅತ್ಯಗತ್ಯ. ಈ ನಿಟ್ಟಿನಲ್ಲಿ ‘ಆದ್ಯ’ ತುಂಬಾ ಅದೃಷ್ಟವಂತೆ. ನೃತ್ಯಕ್ಷೇತ್ರದಲ್ಲಿ ತಮ್ಮ ಸೃಜನಶೀಲ ನೃತ್ಯ ಸಂಯೋಜನೆಗೆ ಮತ್ತು ಪ್ರಯೋಗಶೀಲತೆಗೆ ಹೆಸರಾಗಿರುವ ವಿದುಷಿ. ಮಂಜುಶ್ರೀ ‘ಆದ್ಯೋತ್ಸವ’ದಲ್ಲಿ ಆಯ್ಕೆ ಮಾಡಿದ ಕೃತಿಗಳೆಲ್ಲವೂ ಆದ್ಯಳ ಪ್ರತಿಭೆಯನ್ನು ಶೋಭೆಗೊಳಿಸಿ ನಿಕಷಕ್ಕೆ ಒಡ್ಡಿದ್ದವು. ಬಾಲಪ್ರತಿಭೆಯಲ್ಲಿ ಹುದುಗಿರುವ ಚೈತನ್ಯ-ನೈಪುಣ್ಯಕ್ಕೆ ಅವಳ ಉತ್ಕೃಷ್ಟ ನಾಟ್ಯಶಿಕ್ಷಣ ಇದಕ್ಕೆ ಕನ್ನಡಿ ಹಿಡಿದಿತ್ತು. ‘ಮಾರ್ಗಂ’ ಸಂಪ್ರದಾಯದಲ್ಲಿ ಕೃತಿಗಳ ಅನುಕ್ರಮಣಿಕೆ ಇದ್ದು ಒಂದೊಂದು ನೃತ್ಯವೈಖರಿಯೂ ವಿಭಿನ್ನವಾಗಿತ್ತು.

    ಶುಭಾರಂಭದ ‘ಪುಷ್ಪಾಂಜಲಿ’ಯಲ್ಲಿನ ದೃಢವಾದ ಖಚಿತ ಹೆಜ್ಜೆಗಳ ಸೊಗಡು, ರಮ್ಯ ಆಂಗಿಕಾಭಿನಯದ ನಿಖರತೆ, ಅಂಗಶುದ್ಧ ನರ್ತನ ಗಮನ ಸೆಳೆಯಿತು. ಮುಂದಿನ ಗಣೇಶ ಸ್ತುತಿಯ ಅರ್ಪಣೆಯಲ್ಲಿ ಕಂಡ ವಿನೂತನ ಭಂಗಿಗಳು, ‘ಪಾಲಿನಿ’- ಕೃತಿಯಲ್ಲಿ ‘ಕಪಾಲಿನಿ ದಯಾನಿಧಿ ಉಮಾಪತಿ’ಯ ದೈವೀಕ ಸ್ತುತಿಯಲ್ಲಿ ಅಮೃತಮಂಥನದ ವಿಸ್ತೃತ ಮೋಹಕ ಸಂಚಾರಿ ಕಥಾನಕ, ನೀಲಕಂಠನ ಚಿತ್ರಣಗಳ ವಿವರಗಳಲ್ಲಿ ವಾಸ್ತವತೆಯ ದಟ್ಟತೆ, ಭಾವಸಾಂದ್ರತೆ ಮಿನುಗಿತು. ಕುಂಭದ ಮೇಲೆ ನಿಂತು ಅಂಗೈ ಅಗಲದ ಜಾಗದಲ್ಲೇ ಎಲ್ಲ ಆಯಾಮಗಳ ನೃತ್ತ ಝೇಂಕಾರ ಮಿನುಗಿಸಿ, ಭಾವಪ್ರದ ಅಭಿನಯ – ವಿವಿಧ ಯೋಗಭಂಗಿಗಳಲ್ಲಿ ಸಮತೋಲನ ಕಾಪಾಡಿಕೊಂಡು ಬಂದ ನೈಪುಣ್ಯದಲ್ಲಿ, ಆದ್ಯ, ‘ಪೇರಿಣಿ’ ವಿಶಿಷ್ಟ ನೃತ್ಯದಲ್ಲಿ ‘ರಾಜ ರಾಜೇಶ್ವರಿ’ ಅಷ್ಟಕವನ್ನು ನಿರೂಪಿಸಿದ್ದು ಮನಾಪಹಾರಿಯಾಗಿತ್ತು. ಮುಂದೆ- ಬಹು ಅಚ್ಚುಕಟ್ಟಾಗಿ ಸಾಗಿದ ಆದ್ಯಳ ನರ್ತನ ಸಂಚಾರ ಪ್ರಮುಖ ಘಟ್ಟ ‘ವರ್ಣ’ದ ಮೇರುತ್ವದಲ್ಲಿ ಹೃದಯಸ್ಪರ್ಶಿ ಅನುಭವ ನೀಡಿತು.

    ನಡುನಡುವೆ ಮೂಡಿಬಂದ ಗುರು ಮಂಜುಶ್ರೀಯ ಸ್ಫುಟವಾದ, ಸುಸಂಗತ ನಿನಾದದ ನಟುವಾಂಗ ಶಕ್ತಿಯುತವಾಗಿತ್ತು. ಭರತನಾಟ್ಯದ ಪ್ರಮುಖ ಲಕ್ಷಣಗಳಾದ ಚತುರ್ವಿಧ ಅಭಿನಯದ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕವೆಂಬ ನಾಲ್ಕು ರೀತಿಯ ಅಭಿನಯದಲ್ಲಿ, ನರ್ತಕರು ವೇದಿಕೆಯ ಮೇಲೆ ಮೂರು ರೀತಿಯ ಅಂಶಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ದೇಹದ ಅಂಗಾಂಗಳಿಂದ ಆಂಗಿಕಾಭಿನಯವನ್ನು, ವೇಷಭೂಷಣಗಳ ಸಹಾಯದಿಂದ ಆಹಾರ್ಯಾಭಿನಯವನ್ನು ಮತ್ತು ಆಂತರ್ಯದ ಭಾವ, ರಸಗಳಿಂದ ಕೃತಿಗಳನ್ವಯ ಸಾತ್ವಿಕಾಭಿನಯವನ್ನು ಪ್ರದರ್ಶಿಸುತ್ತಾರೆ. ಆದರೆ ವಾಚಿಕಾಭಿನಯವನ್ನು ಮಾತ್ರ ನರ್ತಕರು, ಸಂಗೀತ ವಾದ್ಯಗೋಷ್ಠಿಯ ಸಹಕಾರದಿಂದ ತಮ್ಮ ನೃತ್ಯವನ್ನು ಗಾನಮಾಧುರ್ಯದ ಸಾಂಗತ್ಯದಿಂದ ಸಾಕಾರಗೊಳಿಸುತ್ತಾರೆ. ಇಂದು ಆದ್ಯ ಅಭಿನಯಿಸಿದ ‘ವರ್ಣ’- ಕನ್ನಡ ಭಾಷೆಯದು ಎಂಬುದೂ ಕೂಡ ಅತ್ಯಂತ ವಿಶೇಷ ಸಂಗತಿ. ವಿದ್ವಾನ್ ಮಂಜುನಾಥ ಪುತ್ತೂರು ರಚಿಸಿದ ‘ಪಾಂಚಾಲಿಯ ಶಪಥ’ವನ್ನು ಕಲಾವಿದೆ ಅತ್ಯಂತ ಸಮರ್ಥವಾಗಿ ಸಾಕ್ಷಾತ್ಕರಿಸಿದ ಬಗೆ ಶ್ಲಾಘನೀಯ.

    ಕುರುಕ್ಷೇತ್ರದ ಯುದ್ಧಕ್ಕೆ ನಾಂದಿಯಾದ ನಾಟಕೀಯ ಪ್ರಸಂಗದಲ್ಲಿ ಸುಸ್ಪಷ್ಟ, ಏರಿಳಿತದ ಕಂಠದಲ್ಲಿ ಮೂಡಿಬಂದ ಅವಳ ಸಂಭಾಷಣೆಗಳು ಅದ್ಭುತವಾಗಿದ್ದವು. ಸಿಡಿದೆದ್ದ ಸ್ತ್ರೀಹೃದಯದ ಅಭಿವ್ಯಕ್ತಿ ಎಲ್ಲ ರಸಿಕರ ಮೆಚ್ಚುಗೆಯ ಉದ್ಗಾರ ಪಡೆದಿತ್ತು. ಇದು ರಂಗಪ್ರವೇಶದ ‘ಹೈಲೈಟ್’ ಆಗಿತ್ತು ಎಂದರೂ ಅತಿಶಯೋಕ್ತಿಯಲ್ಲ ಹಾಗೂ ಗುರು ಮಂಜುಶ್ರೀ ಅವರ ಕನ್ನಡಾಭಿಮಾನಕ್ಕೂ ಉತ್ತಮ ದ್ಯೋತಕವಾಗಿತ್ತು. ನೃತ್ತ ಮತ್ತು ಅಭಿನಯ ಎರಡರಲ್ಲೂ ಸಮಾನ ನೈಪುಣ್ಯ ಮೆರೆದ ಆದ್ಯ ಮುಂದೆ ಭರವಸೆಯ ನರ್ತಕಿಯಾಗುವ ಎಲ್ಲ ಲಕ್ಷಣಗಳನ್ನೂ ತೋರಿದಳು. ಮುಂದೆ ‘ಆಂಜನೇಯನ ಮನದಲಿ ನೆನೆದರೆ ಸಾಲದೇ?’ ಎಂಬ ಕನ್ನಡ ದೇವರನಾಮದಲ್ಲಿ ಆಂಜನೇಯನ ಹಿರಿಮೆಯನ್ನು ಸಾರುವ ಕೃತಿಯ ಸಾಕಾರದಲ್ಲಿ ಆದ್ಯ, ತನ್ನ ತನು-ಮನದಲ್ಲಿ ಹನುಮಂತನನ್ನು ಆವಾಹಿಸಿಕೊಂಡು ಕುಣಿದ ಪರಿ, ಅಭಿವ್ಯಕ್ತಿಸಿದ ಭಕ್ತಿಪಾರಮ್ಯದ ಬನಿ ರಸಾನುಭವದ ಗಣಿಯಾಗಿತ್ತು.

    ಅನಂತರ- ಪ್ರೇಕ್ಷಕರ ನಡುವಿನಿಂದ ಎದ್ದುಬಂದ ಪುಟ್ಟ ಕೊರವಂಜಿ ‘ಕಣಿಯಮ್ಮ ಕಣಿ’ ಎಂದು ಎಲ್ಲರ ಕೈಹಿಡಿದು ಭವಿಷ್ಯ ಹೇಳಿ ಪುಳಕಗೊಳಿಸಿದರೆ, ವೇದಿಕೆಯ ಮೇಲೆ ಜಾನಪದ ಧಾಟಿಯಲ್ಲಿ ಹೆಜ್ಜೆಹಾಕಿದ ಚೆಂದದ, ವರ್ಣರಂಜಿತ ನಾಟ್ಯವಿನೋದಕ್ಕೆ ಅವಳೇ ಸಾಟಿ. ಅಂತ್ಯದ ಲಯಪ್ರಧಾನ ‘ತಿಲ್ಲಾನ’ದಲ್ಲಿ ಕಲಾವಿದೆಯ ಪಾದರಸದ ಚಲನೆಯ ಪಾದಭೇದ- ವಿವಿಧ ವಿನ್ಯಾಸದ ವಿಶಿಷ್ಟ ಭಂಗಿಗಳು ರಸಾಸ್ವಾದನೆಯ ಶೃಂಗ ತಲುಪಿಸಿತ್ತು.

    ಆದ್ಯಳ ಕಲಾಪ್ರಪೂರ್ಣ ನೃತ್ಯರಸೋತ್ಕರ್ಷಕ್ಕೆ ಬೆಂಬಲ ನೀಡಿದವರು ಗಾಯಕ- ವಿದ್ವಾನ್ ಡಿ.ಎಸ್. ಶ್ರೀವತ್ಸ, ಮೃದಂಗ- ವಿದ್ವಾನ್ ಎಸ್.ವಿ. ಗಿರಿಧರ್, ಕೊಳಲು- ವಿದ್ವಾನ್ ಕಾರ್ತೀಕ್ ಸಾಥವಳ್ಳಿ, ವೀಣೆ- ವಿದ್ವಾನ್ ಶಂಕರರಾಮನ್, ರಿದಂಪ್ಯಾಡ್- ವಿದ್ವಾನ್ ಕಾರ್ತೀಕ್ ವೈಧಾತ್ರಿ ಮತ್ತು ನಟುವಾಂಗ- ಗುರು ಮಂಜುಶ್ರೀ ಸಂತೋಷ್.

    ನೃತ್ಯ ವಿಮರ್ಶೆ | ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    article baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ಇದರ ಮಹಿಳಾ ಘಟಕದ ವಾರ್ಷಿಕೋತ್ಸವ
    Next Article ‘ಜಾನಪದ ಲೋಕ ಪ್ರಶಸ್ತಿ’ ಪುರಸ್ಕೃತರ ಪಟ್ಟಿ ಪ್ರಕಟ
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೆ ಪುಸ್ತಕ ಆಯ್ಕೆ

    February 6, 2026

    ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ’ ತಾಳಮದ್ದಳೆ

    February 6, 2026

    ನೇಸರು ಜಾಗತಿಕ ಕವನ, ಕಥೆ ಮತ್ತು ನಾಟಕ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ

    February 6, 2026

    ‘ಜಾನಪದ ಲೋಕ ಪ್ರಶಸ್ತಿ’ ಪುರಸ್ಕೃತರ ಪಟ್ಟಿ ಪ್ರಕಟ

    February 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.