ವಯಸ್ಸಿಗೂ ಮೀರಿದ ಬಾಲಪ್ರತಿಭೆ ಇಷಿತಾ ಭಾರಧ್ವಾಜ್, ಸೇವಾಸದನದ ವೇದಿಕೆಯ ಮೇಲೆ ಪಾದರಸದಂತೆ ಚುರುಕಿನ ಹೆಜ್ಜೆಗಳಿಂದ ರಂಗವನ್ನು ಪ್ರವೇಶಿಸಿ, ಮೃದಂಗದ ಕೊನ್ನಕೋಲುಗಳಿಗೆ ಕರಾರುವಾಕ್ಕಾಗಿ ಜತಿಗಳನ್ನು ಅಡವುಗಳಲ್ಲಿ ಎರಕ ಹುಯ್ದದ್ದು ನಿಜಕ್ಕೂ ಅದ್ಭುತವಾಗಿತ್ತು. ಹೊಸಬಗೆಯ ‘ಪುಷ್ಪಾಂಜಲಿ’ ಪುಳಕ ತಂದಿತ್ತು. ನಾಟ್ಯಗುರು ಅಭಿನಯ ನಟರಾಜನ್ ಪ್ರಯೋಗಾತ್ಮಕ ನೃತ್ಯಸಂಯೋಜನೆ ಇಷಿತಳ ರಂಗಪ್ರವೇಶದುದ್ದಕ್ಕೂ ದೃಗ್ಗೋಚರವಾಗಿತ್ತು.
‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯ ಸಂಸ್ಥೆಯ ನಾಟ್ಯಗುರು ಮತ್ತು ನೃತ್ಯ ಕಲಾವಿದೆ ಶ್ರೀಮತಿ ಅಭಿನಯ ನಟರಾಜನ್ ಅವರ ಶಿಷ್ಯೆ ಕು. ಇಷಿತಾ ಭಾರಧ್ವಾಜ್ ತನ್ನ ಮನೋಜ್ಞ ನೃತ್ಯವಲ್ಲರಿಯಿಂದ ನುರಿತ ನೃತ್ಯ ಕಲಾವಿದೆಯಂತೆ ಲೀಲಾಜಾಲವಾಗಿ ಬಹು ಸುಮನೋಹರವಾಗಿ ನೆರೆದ ಕಲಾರಸಿಕರ ಕಣ್ಮನ ಸೂರೆಗೊಂಡಳು. ಅವಳ ಹಸನ್ಮುಖದ, ಅಂಗಶುದ್ಧ ನರ್ತನ, ಅನುಪಮ ಭಂಗಿಗಳು, ಆತ್ಮವಿಶ್ವಾಸದ ಹೆಜ್ಜೆ-ಗೆಜ್ಜೆಗಳು ಝೇಂಕಾರಗೈದವು. ಮನೋಲ್ಲಾಸದಿಂದ ಕೂಡಿದ ನರ್ತನದಲ್ಲಿ ಮಿಂಚಿದ ದೈವೀಕ ಪ್ರಭೆ ಪರಿಣಾಮಕಾರಿಯಾಗಿದ್ದವು. ಗುರು ಅಭಿನಯ ನಟರಾಜನ್ ಸಶಕ್ತ ನಟುವಾಂಗದ ಜತಿಗಳಿಗೆ ಇಷಿತಾ, ಲಯಾತ್ಮಕವಾಗಿ ತಾಳಬದ್ಧ ಹೆಜ್ಜೆಗಳನ್ನು ಹಾಕಿದ್ದು ನೋಡಲು ಆನಂದದಾಯಕವಾಗಿತ್ತು.
ಗಣಪತಿಯ ವಂದನೆಯ ನಂತರ ಪ್ರಸ್ತುತವಾದ ‘ಅಲರಿಪು’ ಎಂದಿನ ಸಾಂಪ್ರದಾಯಕತೆಯ ಚೌಕಟ್ಟಿನಲ್ಲಿರದೆ, ವಿಭಿನ್ನ ಆಂಗಿಕಾಭಿನಯದಿಂದ ಹೊಸವೈಖರಿಯಲ್ಲಿ, ಪ್ರಾಯೋಗಿಕ ನೆಲೆಯಲ್ಲಿ ಪ್ರಸ್ತುತಗೊಂಡು ವೈವಿಧ್ಯಪೂರ್ಣವಾಗಿದ್ದು, ಕಲಾವಿದೆಯ ಅಸೀಮ ಚೈತನ್ಯ, ನೃತ್ತಲಾಸ್ಯ ಎದ್ದುಕಂಡಿತು. ಮುಂದೆ ರಾಗಮಾಲಿಕೆ- ಮಿಶ್ರಚಾಪು ತಾಳದ ‘ಜತಿಸ್ವರ’ದಲ್ಲಿ ಯಾಂತ್ರಿಕ ಜತಿಗಳಿಲ್ಲದೆ, ಹೊಸ ಮಿನುಗಿನ ಆಕರ್ಷಕತೆ ಇತ್ತು. ಇಷಿತಳ, ಬೊಗಸೆ ಕಣ್ಣುಗಳ ಚಲನಶೀಲತೆ, ಲವಲವಿಕೆಯ ಪ್ರಸ್ತುತಿ, ವರ್ಚಸ್ಸಿನಿಂದ ಕೂಡಿತ್ತು.
ಅನಂತರ ‘ಶರವಣಭವ ಮುರುಗನ್’- ವಲ್ಲಿನಾಯಕ-ದೇವಸೇನೆಯರ ಪತಿ ‘ಮುರುಗ’ನ ಕುರಿತ ಜ್ಞಾನ-ಮಹಿಮೆ ವಿಶೇಷತೆಗಳನ್ನು ನಿರೂಪಿಸಿದ ‘ಷಡಕ್ಷರ ಕೌತ್ವಂ’ – (ರಚನೆ- ಆರ್. ಮಧುರೈ ಮುರಳೀಧರನ್- ರೂಪಕತಾಳ) ಸುಂದರ ಕೃತಿಯಲ್ಲಿ ಕಲಾವಿದೆ ತನ್ನ ಮೋಹಕಾಭಿನಯದಿಂದ ಷಣ್ಮುಖನ ಪ್ರಭಾವಿಶಾಲಿ ವ್ಯಕ್ತಿತ್ವವನ್ನು ಸೆರೆಹಿಡಿದಳು. ಗುರು ಅಭಿನಯರ ನಟುವಾಂಗದ ಝೇಂಕಾರಕ್ಕೆ ಅನುಗುಣವಾಗಿ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರ ಕಂಚಿನ ಕಂಠದ ಗಾಯನಕ್ಕೆ ಕಲಾವಿದೆ, ಮಿಂಚಿನ ಸಂಚಾರದ ಹೆಜ್ಜೆ-ಗೆಜ್ಜೆಗಳಲ್ಲಿ, ಶಕ್ತಿಶಾಲಿ ಅಭಿನಯದ ಸೊಗಡಿನಲ್ಲಿ ಮುರುಗನ ಮಹಿಮೆಗೆ ಮಯೂರ ಮುದ್ರೆಗಳಲ್ಲಿ, ನಡಿಗೆಯ ಲಾಸ್ಯದಲ್ಲಿ ತನ್ನ ಕಲಾತ್ಮಕ ನರ್ತನದಿಂದ ಸಾಣೆ ಹಿಡಿದಳು. ಮುರುಗನ ಮನೋಹರ ಭಂಗಿಗಳು ಅನುಪಮವಾಗಿದ್ದವು.
ಮುಂದೆ ನೃತ್ಯೋಪಹಾರಂ ‘ವರ್ಣ’ (ಶಿವರಂಜಿನಿ ರಾಗ-ಆದಿತಾಳ) ಮೀನಾಕ್ಷಿ ಅಮ್ಮನವರ ಮಹಾಭಕ್ತ ಶಿವರಾಮಿ ಭಟ್ಟರ್ ಎಂದೇ ಜನಜನಿತರಾದ ಸುಬ್ರಹ್ಮಣ್ಯಂ ಅಯ್ಯರ್ ಪವಾಡದ ಕಥೆಯನ್ನು ಕಟ್ಟಿಕೊಟ್ಟ ಭಕ್ತಿಪ್ರಧಾನ ವರ್ಣ ಚೇತೋಹಾರಿಯಾಗಿತ್ತು. ‘ಮಹಾ ತ್ರಿಪುರಸುಂದರಿ…ಮಧುರೈ ಮೀನಾಕ್ಷಿ’ಯ ಆರಾಧನೆಯ ಭಕ್ತಿ ತಾದಾತ್ಮ್ಯತೆಯಲ್ಲಿ ಮೈಮರೆತಿದ್ದ ಶಿವರಾಮಿ ಭಟ್ಟರ್ ಅಲ್ಲಿನ ಮಹಾರಾಜನ ಆಗಮನವನ್ನು ಗಮನಿಸದ ಕಾರಣ, ಅವರ ಕೋಪಕ್ಕೆ ತುತ್ತಾದ. ‘ಇಂದು ಯಾವ ದಿನ’ ಎಂಬ ಮಹಾರಾಜನ ಪ್ರಶ್ನೆಗೆ, ಭಕ್ತ, ಮೀನಾಕ್ಷಿಯ ಹೊಳೆಯುವ ಕಿವಿಯೋಲೆಯನ್ನು ದಿಟ್ಟಿಸುತ್ತಿದ್ದವನು, ‘ಹುಣ್ಣಿಮೆ’ ಎಂದು ಬಿಟ್ಟ. ಇಂದು ಹುಣ್ಣಿಮೆ ಎಂಬ ತನ್ನ ಮಾತನ್ನು ಅವನು ಸಾಬೀತುಪಡಿಸದೆ ಹೋದರೆ ಸಾವಿನ ಶಿಕ್ಷೆ ಕೊಡಲಾಯಿತು. ಆಗ ಮೀನಾಕ್ಷಿದೇವಿ ಭಕ್ತನ ರಕ್ಷಣೆಗೆ, ಆ ಸಂಜೆ ತನ್ನ ಕಿವಿಯೋಲೆಯನ್ನು ಆಕಾಶಕ್ಕೆ ಎಸೆದಾಗ, ಅದು ಹುಣ್ಣಿಮೆಯ ಚಂದಿರನಂತೆ ಕಂಡು ಬಂದು, ಅವನಿಗೆ ಜೀವದಾನ ನೀಡಿದ ಪವಾಡದ ಕಥೆಯನ್ನು ಕಲಾವಿದೆ, ಕಣ್ಣಮುಂದೆ ಸನ್ನಿವೇಶ ನಡೆದಂತೆ ಸೊಗಸಾದ ಸಂಚಾರಿ ಕಥಾನಕವನ್ನು ಅಭಿನಯಿಸಿ ನೋಡುಗರ ಮೆಚ್ಚುಗೆ ಪಡೆದಳು. ಸಂಕೀರ್ಣ ನೃತ್ತಮಾಲೆ, ಪರಿಣಾಮಕಾರಿ ಅಭಿನಯದಿಂದ ಮನಾಕರ್ಷಿಸಿ, ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು.
ಮುಂದೆ- ‘ನಟನ ಮನೋಹರ ನಾಗಾಭರಣ’ ನ ತಾಂಡವ ಝೇಂಕಾರವನ್ನು ‘ಶಿವಪದಂ’ ಕೃತಿಯಲ್ಲಿ ಕಲಾವಿದೆ ಚಿತ್ರಿಸಿದ ರೀತಿ ಅಮೋಘವಾಗಿತ್ತು. ಹಾವಿನನಡೆ, ನಿರಂತರ ಭ್ರಮರಿಯಲ್ಲಿ ಡಮರು ಹಿಡಿದು ಕುಣಿದ ಒಂದೊಂದು ಭಂಗಿಗಳೂ ಅನುಪಮವಾಗಿದ್ದವು. ನಂತರ- ಶ್ರೀ ಚಕ್ರೇಶ್ವರಿಯನ್ನು ಅವಾಹಿಸಿಕೊಂಡು ಆರಾಧಿಸಿದ, ಮೈ ಜುಮ್ಮೆನಿಸಿದ ಅಭಿನಯ ಸೊಗಸಾಗಿತ್ತು. ಕೊನೆಯಲ್ಲಿ ಬಾಲ ಮುರಳೀಕೃಷ್ಣ ರಚಿತ ಕದನ ಕುತೂಹಲ ರಾಗದ ‘ತಿಲ್ಲಾನ’ವನ್ನು ಆನಂದದಿಂದ ಮೈದುಂಬಿ ನರ್ತಿಸಿದಳು ಇಷಿತಾ. ಗುರು ಅಭಿನಯ ನಟುವಾಂಗದ ಕೊನ್ನಕೋಲುಗಳಿಗೆ, ಮೃದಂಗದ ಜತಿಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನಲಿದದ್ದು, ಕೃಷ್ಣನ ಕುರಿತ ನವಿರಾದ ಅಭಿನಯ ಸಾಕ್ಷಾತ್ಕಾರಕ್ಕೆ, ಭೂಮಿತಾಯಿ ಕುರಿತ ಮಂಗಳದ ಮನನೀಯ ಸಾಕಾರಕ್ಕೆ ಕಲಾರಸಿಕರ ಮೆಚ್ಚುಗೆ ಹರಿದುಬಂದಿತ್ತು. ಇಷಿತಳ ನೃತ್ಯಕ್ಕೆ ಸುಂದರ ಪ್ರಭಾವಳಿ ರೂಪಿಸಿದ್ದು- ಗಾಯನ- ಬಾಲಸುಬ್ರಹ್ಮಣ್ಯ ಶರ್ಮ, ಪಿಟೀಲು- ಹೇಮಂತ್ ಕುಮಾರ್, ಕೊಳಲು- ವೇಣುಗೋಪಾಲ್, ಮೃದಂಗ- ಭಾನುಪ್ರಕಾಶ್ ಮತ್ತು ರಿದಂಪ್ಯಾಡ್ ಪ್ರಸನ್ನ ಕುಮಾರ್ ಅವರ ಸಹಕಾರ ಸ್ಮರಣೀಯ.
ವಿಮರ್ಶಕರು : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.