ಭರತನಾಟ್ಯದ ಪರಂಪರೆಯಂತೆ ರಂಗಪ್ರವೇಶ/ಅರಗೇಟ್ರಂ ಗುರುಕುಲ ಪದ್ದತಿಯಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿರುವ ಶಿಷ್ಯ/ಶಿಷ್ಯೆ ಕಡ್ಡಾಯವಾಗಿ ಮಾಡಲೇಬೇಕಾದ ಒಂದು ಧಾರ್ಮಿಕ ವಿಧಿ ಹಾಗೂ ಗುರುವಂದನೆ. ಇಂತಹ ಒಂದು ರಂಗಪ್ರವೇಶವು ಸನಾತನ ನಾಟ್ಯಾಲಯ (ರಿ.) ಮಂಗಳೂರು ಇದರ ಗುರುಗಳಾದ ವಿದುಷಿ ಶಾರದಾ ಮಣಿಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ರವರ ಶಿಷ್ಯೆ ವಿದುಷಿ ಅಮೃತಾ ವಾಸುದೇವ್‌ರವರು ಹೆತ್ತವರ ಬೆಂಬಲದೊಂದಿಗೆ, ಸಂಪ್ರದಾಯಬದ್ದವಾಗಿ ಸುಮಾರು ಎರಡು ಗಂಟೆಗಳ ಕಾಲ ನೃತ್ಯ ಪ್ರದರ್ಶಿಸಿ, ರಸಿಕರ ಮೆಚ್ಚುಗೆ ಪಡೆದರು.

ಕಲಾ ಹಿನ್ನೆಲೆಯಿಂದ ಬಂದ ಅಮೃತಾ ಕಂಪ್ಯೂಟರ್ ಎಂಜಿನಿಯರ್, ಕರ್ನಾಟಕ ಸಂಗೀತ, ಸಿತಾರ್ ವಾದನ ಹಾಗೂ ನೃತ್ಯ ಕಲಿಕೆಯ ಪ್ರತಿಭಾನ್ವಿತ ನೃತ್ಯಾಂಗನೆ. ಈ ಕಾರ್ಯಕ್ರಮವು ಭರತನಾಟ್ಯ ಕಾರ್ಯಕ್ರಮದಲ್ಲಿರಲೇಬೇಕಾದ ಬಂಧಗಳನ್ನು ಒಳಗೊಂಡಿದ್ದವು. ಆರಂಭವು ಗಾಯಕ ಕಾರ್ತಿಕ ಹೆಬ್ಬಾರ್‌ರವರ ಸುಶ್ರಾವ್ಯವಾದ ಪುಟ್ಟ ‘ಓಂ ಪ್ರಣವಾಕಾರ’ ಶ್ಲೋಕದಿಂದ ಮೊದಲ್ಗೊಂಡು ಹೇಮಾವತಿ ರಾಗ ಆದಿತಾಳದ ಕೆ. ಮುರಲೀಧರ ಉಡುಪಿ ವಿರಚಿತ ಪುಷ್ಪಾಂಜಲಿ ಹಾಗೂ ಗಣಪತಿ ಸ್ತುತಿಯಾಗಿ ಪುರಂದರದಾಸರ ಪಿಳ್ಳಾರಿ ಗೀತೆ ‘ಶ್ರೀ ಗಣನಾಥ’ ಪದವು ಚಿಕ್ಕ ಹಾಗೂ ಚೊಕ್ಕ ಸಂಚಾರಿ ಮತ್ತು ಸ್ವರಗಳ ಸಹಿತ ಹೊಸತನದಲ್ಲಿ ಪ್ರದರ್ಶಿಸಲ್ಪಟ್ಟಿತು. ತಂಜಾವೂರ್ ಸಹೋದರರು ರಚಿಸಿದ ಶ್ರೀರಾಗ ಖಂಡಛಾಪು ತಾಳದ ಜತಿ ಸ್ವರವು ಚಿಕ್ಕಜತಿಗಳು, ಮೈಯಡವು ಶೊಲ್ಲುಕಟ್ಟು ಸ್ವರಗಳಿಂದ ಅಮೃತಾಳ ನೃತ್ತದ ಅಂದದ ಅರಿವನ್ನು ಮೂಡಿಸಿತು. ಇಲ್ಲಿ ಜತಿಗಳನ್ನು ಬಾಯಲ್ಲಿ ನಟ್ಟುವಾಂಗದೊಡನೆ ಹೇಳುವುದು ಇತ್ತೀಚೆಗಿನ ಬೆಳವಣಿಗೆಯೋ ಏನೋ? ಮುಂದೆ ಅಪರೂಪದ ‘ಕಾಳಿಕೌತುವಂ’ ಕಾಳಿಯ ರೂಪದ ಭೀಕರತೆಯ ವರ್ಣನೆ, ಅವಳ ರೌದ್ರನರ್ತನ, ಶಿವನ ಊರ್ಧ್ವ ತಾಂಡವದ ಝಲಕ್ ಗಳು ಗಟ್ಟಿಯಾದ ಹಿಮ್ಮೇಳದ ನೆರವಿನಿಂದ ವೀರರಸವನ್ನು ಪ್ರತಿಪಾದಿಸಿದ್ದಲ್ಲದೆ, ಸುಂದರ ಭಂಗಿಗಳು, ಉತ್‌ಪ್ಲವನಗಳಿಗೆ ಎಡೆ ಮಾಡಿಕೊಟ್ಟಿತು.


ಈ ಕಾರ್ಯಕ್ರಮದ ಅತ್ಯಂತ ಕ್ಲಿಷ್ಟಕರವಾದ ನೃತ್ಯ ಬಂಧವೇ ಪದ ವರ್ಣ. ದೀರ್ಘವಾದ ಈ ವರ್ಣವು ನೃತ್ಯದ ಅನೇಕ ಕಷ್ಟಕರ ಜತಿಗಳು, ಅರುಧಿಗಳು, ಸ್ವರ ಪ್ರಸ್ತಾರಕ್ಕೆ ತಕ್ಕುದಾದ ಅಡವುಗಳ ವೈವಿಧ್ಯತೆ, ಇದರೊಂದಿಗೆ ಭಾವಾಭಿನಯವನ್ನು ಭಾವ, ರಸಗಳ ಮಿಲನದಿಂದ ಪ್ರದರ್ಶಿಸಿ ರಸಿಕರ ಮನಮುಟ್ಟುವಂತೆ ಮಾಡುವ ಸವಾಲು ನೃತ್ಯಾಂಗನೆಗಿದ್ದು ಅದನ್ನು ಮೇಲ್ಮಟ್ಟದಲ್ಲಿ ನಿರ್ವಹಿಸುವ ಅವಳ ತಾಕತ್ತನ್ನು ಪರೀಕ್ಷಿಸುವುದಾಗಿದೆ. ಭೈರವಿ ರಾಗದ, ಆದಿತಾಳದ ಈ ವರ್ಣವನ್ನು ಕಲಾವಿದೆ ಚೆನ್ನಾಗಿ ನಿರ್ವಹಿಸಿ, ಸೈ ಎನಿಸಿಕೊಂಡಳು. ಎರಹೋತ್ಕಂಠಿತಾ ನಾಯಕಿಯ ವಸ್ತುವಿನ ಇದನ್ನು ನಾಯಕಿಯ ಶೃಂಗಾರ, ವಿರಹ, ಭಕ್ತಿಯ ಭಾವಗಳ ಮೂಸೆಯಲ್ಲಿ ಹದವಾದ ಪಾಕ ಮಾಡಿ ಉಣಬಡಿಸಿದಳು. ಹರ್ಷ ಸಾಮಗ ಅವರ ಖಚಿತ ಮೃದಂಗದ ನುಡಿಸಾಣಿಕೆ, ಮುರಳೀಧರ್ ಅವರ ವೇಣುವಾದನ ಹಿನ್ನೆಲೆಯ ಹಾಗೂ ಶಾರದಾಮಣಿಯವರ ನಟ್ಟುವಾಂಗದ ವೈಖರಿ ಈ ವರ್ಣದ ಸೊಗಸಿನ ಪ್ರಸ್ತುತಿಗೆ ಕಾರಣ ಖಂಡಿತ.


ಅಷ್ಟನಾಯಿಕಾ ಅವಸ್ಥೆಗಳು ಎಂಬ ಭರತನಾಟ್ಯ ಅಭಿನಯದಲ್ಲಿ ಬರುವ ಎಂಟು ನಾಯಿಕೆಯರ ಭಾವಸ್ಪುರಣವನ್ನು ಪ್ರತಿಬಿಂಬಿಸುವ ಈ ಕೃತಿ. ರಾಗಮಾಲಿಕೆ, ಆದಿತಾಳದ ಮಧುರೈ ಮುರಲೀಧರನ್ ರವರ ಕೃತಿ ನಾಯಕಿಯ ಸಂಮಿಶ್ರ ಭಾವಗಳನ್ನು ಪ್ರಕಟಪಡಿಸುವ ಅಭಿನಯಪ್ರಧಾನವಾಗಿದ್ದು ಇದನ್ನು ಸಮತೋಲನಗೊಳಿಸಲು, ಚಿಟ್ಟೆಸ್ವರಗಳ ಜೋಡಣೆಯ ನೃತ್ತಭಾಗ ಕೃತಿಯ ಏಕತಾನತೆಯನ್ನು ದೂರೀಕರಿಸಿತು. ಯಮನ್ ರಾಗಮಿಶ್ರ ಛಾಪು ತಾಳದ ಕೃಷ್ಣ ನೀ ಬೇಗನೆ ದಾಸರ ಪದ ವಿದುಷಿ ಶುಭಮಣಿ ಶೇಖರ್ ರವರ ನಿರ್ದೇಶನದಲ್ಲಿ ರಾಧೆ ಹಾಗೂ ಯಶೋದೆಯವರ ಭಾವುಕ ನೆಲೆಯಲ್ಲಿ ಪ್ರತ್ಯೇಕವಾಗಿ ಅಭಿನಯಿಸಲ್ಪಟ್ಟು ನಾವೀನ್ಯವನ್ನು ಮೆರೆಯಿತು. ಕಾರ್ಯಕ್ರಮದ ಕೊನೆಯು ದೇಶ್ ರಾಗದ ಲಾಲ್ ಗುಡಿಯವರ ತಿಲ್ಲಾನವಾಗಿದ್ದು ಇದು ಶೊಲ್ಲುಕಟ್ಟುಗಳು, ಮುಕ್ತಾಯಗಳು, ಅರುಧಿಗಳು ಹಾಗೂ ಸಾಹಿತ್ಯದ ಪುಟ್ಟ ಸಂಚಾರಿ ಅಭಿನಯದೊಂದಿಗೆ ಕೊನೆಗೊಂಡಿತು. ಮಂಗಲ ಪದವಾಗಿ ಭದ್ರಾಚಲ ರಾಮದಾಸರ ‘ರಾಮಚಂದ್ರಾಯ’ದೊಂದಿಗೆ ಈ ಪ್ರದರ್ಶನವು ಸಂಪನ್ನಗೊಡಿತು.


ಹೀಗೆ ಒಂದು ಅಚ್ಚುಕಟ್ಟಾದ, ಭರತನಾಟ್ಯದ ಮೆರುಗನ್ನು ಪ್ರಕಾಶಿಸಿದ. ತನ್ನ ಗುರುಹಿರಿಯರ, ಹಿಮ್ಮೇಳದವರ ಮತ್ತು ಕಲಾರಸಿಕರ ಮನಗೆದ್ದು ಅಮೃತವಾಹಿನಿಯಂತೆ ಈ ಸುಂದರ ಏಕವ್ಯಕ್ತಿ ಪ್ರದರ್ಶನ ನೀಡಿದ ಅಮೃತಾಳೂ, ಉಳಿದ ಸಹವರ್ತಿಗಳೆಲ್ಲರೂ ಅಭಿನಂದನಾರ್ಹರು. ಇನ್ನು ಪ್ರಸಾದನ, ಆಹಾರ್ಯ, ಬೆಳಕು, ಧ್ವನಿ ವ್ಯವಸ್ಥೆಗಳು ಅಮೃತಾಳ ನೃತ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಿದವು.

ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಮಲ್ಪೆ
