ನಮ್ಮ ಭಾರತೀಯ ಪರಂಪರೆಯ ಅಸ್ಮಿತೆಯಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ನಮ್ಮ ಸಾಂಸ್ಕೃತಿಕ ಜಗತ್ತಿನ ಒಂದು ಅವಿಭಾಜ್ಯ ಅಂಗವಾಗಿ ಹಾಸುಹೊಕ್ಕಾಗಿದೆ. ಸಂಗೀತ-ನೃತ್ಯ-ನಾಟಕ ಯಾವುದೇ ಕಲಾಪ್ರಕಾರದ ಹೂರಣ ಈ ಮಹಾಕಾವ್ಯಗಳನ್ನು ಬಿಟ್ಟು ಬೇರಿಲ್ಲ. ಎಲ್ಲ ಕಥೆಗಳ ಆಗರ ಅವು. ಎಲ್ಲಕ್ಕೂ ಸ್ಫೂರ್ತಿ-ಪ್ರೇರಣೆ. ಅದರಲ್ಲೂ ನೃತ್ಯಗಳಲ್ಲಿ ಇವು ಬಹು ಬಳಕೆಯಲ್ಲಿದ್ದು ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ. ರಾಮಾಯಣ – ಮಹಾಭಾರತದ ಕಥಾವಸ್ತುಗಳನ್ನು ಕಾಲಾನುಕಾಲದಿಂದ ಯಶಸ್ವಿಯಾಗಿ ನೃತ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಜನಜನಿತ ಕಥೆಯಾಗಿದ್ದು, ಇವು ಅನೇಕ ತಿರುವುಗಳನ್ನು, ಸ್ವಾರಸ್ಯವಾದ ಕಥಾ ಓಟವನ್ನು ಉಳ್ಳದ್ದಾದ್ದರಿಂದ ಇವುಗಳು ಬಹು ಜನಪ್ರಿಯ ಕೂಡ. ಅದರಂತೆ ದಿನಾಂಕ 05 ಜನವರಿ 2025ರಂದು ಜಯನಗರದ ವಿವೇಕ ಸಭಾಂಗಣದಲ್ಲಿ ಸಾಧನ ನೃತ್ಯ ಶಾಲೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಪ್ರದರ್ಶಿತವಾದ ‘ರಾಮಾಯಣ’ ನೃತ್ಯರೂಪಕ ಸೊಗಸಾಗಿ ಮೂಡಿಬಂದು, ನೋಡುಗರನ್ನು ಆಕರ್ಷಿಸಿತು.
ತೆರೆ ಸರಿದೊಡನೆ ಸರ್ವರ ಪ್ರಥಮ ದೃಷ್ಟಿಯನ್ನು ಆಕರ್ಷಿಸಿದ್ದು ಶ್ರೀರಾಮ-ಲಕ್ಷ್ಮಣ-ಸೀತಾ ಸಮೇತನಾದ ಆಂಜನೇಯ ಮೂರ್ತಿ. ಆಲಂಕೃತ ಪ್ರಭಾವಳಿಯ ಏಕಚ್ಛತ್ರದಡಿ ದಿವ್ಯಮೂರ್ತಿಗಳು ಅನಾವರಣಗೊಂಡ ಹೃನ್ಮನ ತಣಿಸುವ ದೃಶ್ಯ ಆಕರ್ಷಿಸಿತು. ಇಡೀ ರಾಮಾಯಣದ ಕಥೆ, ಘಟನೆಗಳಲ್ಲಿ ಅರಳುತ್ತ, ಸಂಚಾರಿ ಕಥಾನಕಗಳಲ್ಲಿ, ಸುಂದರ ದೃಶ್ಯಗಳಲ್ಲಿ ಸಾಗುತ್ತ ದಶರಥ ಮಹಾರಾಜನ ಪುತ್ರಕಾಮೇಷ್ಟಿ ಯಾಗದಿಂದ ನೃತ್ಯರೂಪಕ ಪ್ರಾರಂಭವಾಯಿತು. ಪಾಯಸಪ್ರಾಪ್ತಿ, ಶ್ರೀರಾಮಾದಿಗಳ ಜನನ, ಯಾಗರಕ್ಷಣೆಗಾಗಿ ವಿಶ್ವಾಮಿತ್ರರು ರಾಮ-ಲಕ್ಷ್ಮಣರನ್ನು ತಮ್ಮೊಡನೆ ಕರೆದೊಯ್ಯುವುದು, ಯಜ್ಞಕ್ಕೆ ಅಡ್ಡಿ ಉಂಟುಮಾಡಿದ ರಕ್ಕಸರ ಸಂಹಾರ, ಅಹಲ್ಯಾ ಶಾಪ ವಿಮೋಚನಾ, ಸೀತಾ ಸ್ವಯಂವರದವರೆಗೂ ಎಲ್ಲ ಸನ್ನಿವೇಶಗಳೂ ನಾಟಕೀಯ ಆಯಾಮದಲ್ಲಿ ಕುತೂಹಲಭರಿತವಾಗಿ ಸಾಗಿದವು. ಸ್ವಯಂವರಕ್ಕೆ ಬಂದ ವಿವಿಧ ರಾಜರು ಶಿವಧನಸ್ಸನ್ನು ಎತ್ತಲು ವಿಫಲರಾದ ದೃಶ್ಯ ಮತ್ತು ಶ್ರೀರಾಮನು ಪಣವನ್ನು ಗೆದ್ದು ಸುಂದರಿ ಸೀತೆಯನ್ನು ವರಿಸಿದ ದೃಶ್ಯಗಳು ಸುಂದರವಾಗಿ ಮೂಡಿಬಂದವು.
ಸಂಕ್ಷಿಪ್ತ ಗತಿಯಲ್ಲಿ ಚುರುಕಾಗಿ ಸಾಗಿದ ಕಥಾನಕ, ಎಲ್ಲೂ ಯಾಂತ್ರಿಕವೆನಿಸದೆ, ಕೈಕೇಯಿಯ ಬಯಕೆಯಂತೆ ನವ ವಿವಾಹಿತ ರಾಮ, ಲಕ್ಷ್ಮಣ ಮತ್ತು ಸೀತೆಯೊಡನೆ ವನವಾಸಕ್ಕೆ ತೆರಳುವುದು, ಗುಹನ ಸಹಾಯದಿಂದ ಸರಯೂ ನದಿ ದಾಟಿ, ಅರಣ್ಯ ಜೀವನದಲ್ಲಿ ದಿನಗಳನ್ನು ಕಳೆಯುವುದು, ಶೂರ್ಪನಖಾ ಪ್ರಸಂಗ, ಮಾಯಾಜಿಂಕೆಯನ್ನು ಬಯಸಿ, ಸೀತೆ ರಾವಣನಿಂದ ಅಪಹರಿಸಲ್ಪಟ್ಟು ಲಂಕೆ ಸೇರಿ, ಆಂಜನೇಯನ ಭೇಟಿಯಿಂದ ಧೈರ್ಯ ಪಡೆದು, ಕಡೆಗೆ ರಾಮ-ರಾವಣರ ಯುದ್ಧ, ಅಗ್ನಿಪ್ರವೇಶ ಕೊನೆಯಲ್ಲಿ ಶ್ರೀರಾಮ ಪಟ್ಟಾಭಿಷೇಕದ ಸುಖಾಂತ್ಯ ಮಂಗಳಕರ ಸನ್ನಿವೇಶದೊಂದಿಗೆ ಸುಸಂಪನ್ನಗೊಂಡಿತು.
ಸಾಂಪ್ರದಾಯಿಕ ಕಥೆಗೆ ಎಲ್ಲೂ ಭಂಗ ಬಾರದಂತೆ, ಅದರ ಕೆಲವು ಆಯ್ದ ಭಾಗಗಳನ್ನು ಕೇಂದ್ರೀಕರಿಸಿ ಹೆಣೆದ ಸುಮಾರು ಒಂದು ಘಂಟೆಯ ಕಾಲಾವಧಿಯ ನೃತ್ಯರೂಪಕ ಮನಸೆಳೆಯಿತು. ಸಾಧನಾ ಶಾಲೆಯ ವಿದ್ಯಾರ್ಥಿಗಳು ಸಮಯೋಚಿತ ಹದವಾದ ಅಭಿನಯದಿಂದ ಗಮನ ಸೆಳೆದರು. ಇಡೀ ಕಥೆಯನ್ನು ನಿರೂಪಿಸುವ ಹಿನ್ನಲೆ ಗಾಯನಕ್ಕೆ ಅನುಗುಣವಾಗಿ ಪಾತ್ರಗಳು-ನರ್ತಕರು ಎಲ್ಲೂ ಅರಕೆ ತೋರದಂತೆ ಪರಿಣಾಮಕಾರಿಯಾಗಿ ತಮ್ಮ ರಮ್ಯಾಭಿನಯದಿಂದ ಸಮಗ್ರ ರಾಮಾಯಣದ ಕಥೆಯನ್ನು ಹರಿತವಾಗಿ ಕಟ್ಟಿಕೊಟ್ಟರು. ಪೂರಕ ಧ್ವನಿ ಪರಿಣಾಮಗಳು ಹದವಾಗಿದ್ದವು. ಸೀತೆಯ ಪಾತ್ರವನ್ನು ಸುಮನೋಹರವಾಗಿ ನಿರ್ವಹಿಸಿ, ತಮ್ಮ ಪರಿಕಲ್ಪನೆಯ ಎರಕದಲ್ಲಿ ರೂಪಕವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಸಾಗಿದ ಗುರು ಭಾವನಾ ಅವರ ಕಲಾತ್ಮಕ ನಿರ್ದೇಶನದ ಆಯಾಮ ದೃಗ್ಗೋಚರವಾಗಿತ್ತು.
ನೃತ್ಯರೂಪಕದ ಆಕರ್ಷಣೆಯಾಗಿದ್ದ ಕಣ್ಸೆಳೆದ ಸುಂದರ ವೇಷಭೂಷಣ, ಪ್ರಸಾದನ, ರಮ್ಯ ಆಂಗಿಕಾಭಿನಯ, ಚಲನೆ- ಮುಖಾಭಿವ್ಯಕ್ತಿಗಳು ಸೂಕ್ತವಾಗಿದ್ದವು. ಹಾಗೇ ಪಾತ್ರಗಳಿಗೆ ನರ್ತಕರ ಸೂಕ್ತ ಆಯ್ಕೆ, ಮಾರ್ಗದರ್ಶನ ಚೆನ್ನಿದ್ದು, ಪ್ರಯೋಗ ಸಫಲವಾಗಿತ್ತು. ಇದಕ್ಕಾಗಿ ಸಾಧನಾ ಡ್ಯಾನ್ಸ್ ಸೆಂಟರಿನ ಎಲ್ಲಾ ಶಿಷ್ಯರಿಗೆ ಮತ್ತು ಇದನ್ನು ಅಪಾರ ಶ್ರದ್ಧೆ- ಬದ್ಧತೆ -ಪರಿಶ್ರಮದಿಂದ ಸೊಗಸಾಗಿ ರಂಗಕ್ಕೆ ತಂದ ಗುರು ಭಾವನಾ ಅವರಿಗೆ ಅಭಿನಂದನೆಗಳು.
ವಿಮರ್ಶಕರು : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.