Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಮನೋಲ್ಲಾಸ ನೀಡಿದ ಸುಶ್ಮಿತಾಳ ಸುಲಲಿತ ನೃತ್ಯಲಹರಿ
    Article

    ನೃತ್ಯ ವಿಮರ್ಶೆ | ಮನೋಲ್ಲಾಸ ನೀಡಿದ ಸುಶ್ಮಿತಾಳ ಸುಲಲಿತ ನೃತ್ಯಲಹರಿ

    July 6, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅದೊಂದು ಸಂಭ್ರಮದ ದೃಶ್ಯ. ಕಿವಿ ತುಂಬುವ ಚಂಡೆಯ ಸುನಾದ. ಹೆಜ್ಜೆ ಕುಣಿಸುವ ಕಂಚಿನ ತಾಳಕಂಠದ ಮಾರ್ಮೊಳಗು, ದೀಪಧಾರಿಣಿ ಲಲನೆಯರ ಮೆರವಣಿಗೆಯ ಸಾಲಿನಲ್ಲಿ ವಿಘ್ನ ವಿನಾಯಕ ಮೂರ್ತಿಯನ್ನು ಹೊತ್ತ ನೃತ್ಯಗುರುಗಳು, ರಂಗಪ್ರವೇಶಕ್ಕೆ ಸಜ್ಜಾದ ಉತುಕ್ಸ ಕಲಾವಿದೆ -ಹಿಂದೆ ಕಲಾಭಿಮಾನಿಗಳ ಆಮೋದದ ರಂಗು ಮನದಂಗಳದಲ್ಲಿ ಸ್ಥಾವರವಾಯಿತು.

    ಇದು ಬೆಂಗಳೂರಿನ ‘ಲೀಲಾ ನಾಟ್ಯ ಕಲಾವೃಂದ’ದ ನೃತ್ಯಗುರು ಉದಯ ಕೃಷ್ಣ ಉಪಾಧ್ಯಾಯರ ಶಿಷ್ಯೆ ಡಾ. ಸುಶ್ಮಿತಾ ಎನ್. ಶೆಟ್ಟಿಯ ವಿದ್ಯುಕ್ತ ರಂಗ ಪಾದಾರ್ಪಣೆಯ ಶುಭ ಸಂದರ್ಭ. ಕನ್ನಡ ಪ್ರೀತಿಯ ಗುರು ಉದಯಕೃಷ್ಣರ ಪ್ರಯೋಗಾತ್ಮಕ ಕೃತಿಗಳ ಆಯ್ಕೆ, ನೃತ್ಯ ಸಂಯೋಜನೆಯ ಬಗೆ ನೋಡುಗರಿಗೆ ಹೊಸ ಅನುಭೂತಿ ನೀಡಿತು. ಅಂದು ಸುಶ್ಮಿತಾ ಪ್ರದರ್ಶಿಸಿದ ನೃತ್ಯಗಳ ಲೀಲಾಜಾಲ ಆತ್ಮವಿಶ್ವಾಸದ ಪರಿ, ಅಂಗಶುದ್ಧ ಅಡವುಗಳ ಖಾಚಿತ್ಯ, ಹಸ್ತಮುದ್ರೆಗಳ ಸ್ಫುಟತೆ, ನಿರಾಯಾಸ ಆಂಗಿಕ ಚಲನೆಯ ಮೋಡಿ, ಪ್ರಬುದ್ಧ ಅಭಿನಯದ ರಸಾನುಭವ ನೇರವಾಗಿ ಕಲಾರಸಿಕರ ಹೃದಯವನ್ನು ಸ್ಪರ್ಶಿಸಿತು.

    ಪ್ರಥಮ ನೋಟದಲ್ಲಿ ಎತ್ತರದ ನಿಲುವಿನಿಂದ ಆಕರ್ಷಿಸಿದ ಕಲಾವಿದೆ ನಗುಮೊಗದಿಂದ ಮೊದಲು ಅರ್ಪಿಸಿದ್ದು ಭಕ್ತಿಪೂರ್ವಕ ‘ಪುಷ್ಪಾಂಜಲಿ’. ವಿಘ್ನೇಶ್ವರ, ಸರಸ್ವತಿ ಮುಂತಾದ ಎಲ್ಲ ದೇವಾನುದೇವತೆಗಳಿಗೆ ನೃತ್ತಾರ್ಚನೆ ಸಲ್ಲಿಸಿ, ‘ಜತಿಸ್ವರ’ಗಳ ಸುಂದರ ಮಾಲೆಯಿಂದ ಅಲಂಕರಿಸಿದಳು. ಜತಿಗಳ ರಮ್ಯ ಹೆಣಿಗೆ, ನವಿರಾದ ನಿರೂಪಣೆ, ನೃತ್ಯ ವ್ಯಾಕರಣದ ವಿವಿಧ ಚಾರಿಗಳ ಬಳಕೆ, ಮುಕ್ತಾಯಗಳ ಸೊಗಸಾದ ಪ್ರದರ್ಶನದೊಂದಿಗೆ ದೃಷ್ಟಿ-ಗ್ರೀವ-ಶಿರೋ ಭೇದಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದಳು.

    ವರಪ್ರದೆಯಾದ ವಿದ್ಯಾದಾಯಿನಿಯನ್ನು ‘ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ’ ಎಂದು ಶುದ್ಧ ಕನ್ನಡ ಕಸ್ತೂರಿ ದೇವರನಾಮದಲ್ಲಿ ಕಲಾವಿದೆ, ತನ್ನ ನಾನಾ ಮನೋಜ್ಞ ಭಂಗಿಗಳ ಮೂಲಕ ಸರಸ್ವತಿಯ ಮಹತ್ವವನ್ನು ಎತ್ತಿಹಿಡಿದು ಶ್ರುತಿ-ಮತಿಯನ್ನು ನೀಡೆಂದು ಭಾವಪೂರ್ಣ ಅಭಿನಯದ ಮೂಲಕ ಶರಣಾಗಿ ಭಕ್ತಿ ಸಮರ್ಪಣೆ ಮಾಡಿದಳು.

    ಭರತನಾಟ್ಯ ಪ್ರಸ್ತುತಿಯ ಹೃದಯ ಭಾಗ ಅಷ್ಟೇ ಹೃದ್ಯವೂ ಆದ ‘ಪದವರ್ಣ’ ಸುಮನೋಹರ ನೃತ್ತ-ಸಂಚಾರಿ-ಸಾಹಿತ್ಯದಿಂದ ಮಿಳಿತವಾಗಿತ್ತು. ಆಭೇರಿ ರಾಗದ ಮಾಧುರ್ಯ, ಸುಂದರೇಶ್ವರನ ಕಥಾ ವಿಸ್ತಾರ, ಅದ್ಭುತ ಜತಿಗಳ ಝೇಂಕಾರದೊಂದಿಗೆ ಸಾಕ್ಷಾತ್ ಪಾರ್ವತೀ ರೂಪಿಯಾದ ಮೀನಾಕ್ಷೀ ದೇವಿಯು ‘ಸುಂದರೇಶ್ವರನು ಬಾರನೇಕೆ?’ (ರಚನೆ-ಮಹೇಶಸ್ವಾಮಿ) ಎಂದು ಮಹಾನಟ ನಟರಾಜನಲ್ಲಿ ತನ್ನ ಪ್ರೇಮವನ್ನು ನಿವೇದಿಸುವ ರಸಕ್ಷಣಗಳನ್ನು ಸುಶ್ಮಿತಾ ಭಾವಪ್ರದವಾಗಿ ಸಾಕ್ಷಾತ್ಕರಿಸಿದಳು. ಸಂಚಾರಿ ಕಥಾನಕದಲ್ಲಿ ಆನಂದ ತಾಂಡವದ ಮನೋಹರತೆಯನ್ನು ಬಿಂಬಿಸುವ ಈ ವಿಹಂಗಮ ಕೃತಿಯಲ್ಲಿ ನಾಯಕಿ ತನ್ನ ಆತ್ಮವನ್ನೇ ದೌತ್ಯವಾಗಿಸಿಕೊಂಡು ತನಗೆ ತಾನೇ ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ತನ್ನ ವಿರಹವೇದನೆಯನ್ನು ಅಭಿವ್ಯಕ್ತಿಸುತ್ತಾಳೆ. ಕಲಾವಿದೆ ತನ್ನ ಭಾವಾವೇಶವನ್ನು ಮಿಂಚಿನ ಸಂಚಾರದ ವಿಶಿಷ್ಟ ವಿನ್ಯಾಸದ ನೃತ್ತಗಳು, ಆಕಾಶಚಾರಿ, ಮಂಡಿ ಅಡವುಗಳ ಮೋಹಕಾಭಿನಯದ ಮೂಲಕ ನಮ್ಮ ಭಾವಕೋಶವನ್ನು ಆವರಿಸಿಕೊಳ್ಳುಸುತ್ತಾಳೆ.

    ನಾಯಕಿಯ ಆರ್ತ ಕೊರಳಿಗೆ ದನಿಯಾದ ಅಭಿಷೇಕರ ಭಾವಪೂರ್ಣ ಗಾಯನ, ಗುರು ಉದಯಕೃಷ್ಣ ಹಾಗೂ ಪುತ್ರಿ ಧೃತಿ ಉಪಾಧ್ಯಾಯರ ಜೋಡಿ ನಟುವಾಂಗದ ಬನಿ ಕಲಾವಿದೆಗೆ ಸ್ಫೂರ್ತಿ ನೀಡಿತು. ಉಯ್ಯಾಲೆಯ ಮೇಲೆ ಕುಳಿತು ಶೃಂಗಾರ ಲಹರಿಯಲ್ಲಿದ್ದ ಸ್ತ್ರೀಕುಲ ಶಕ್ತಿದೇವತೆ ಕೊಲ್ಲಾಪುರ ಮಹಾಲಕ್ಷ್ಮಿಯ ಕೃಪೆಗಾಗಿ ಸ್ತುತಿಸುವ ನೀಲಾಂಬರಿ ರಾಗದ ಕೃತಿಯನ್ನು ಕಲಾವಿದೆ ಮನೋಲ್ಲಾಸ ಭರಿತವಾಗಿ ನಿರೂಪಿಸಿದಳು. ಮೃದು ಹಸಿತವದನೆಯ ದೇವಿಯ ಪ್ರಫುಲ್ಲ ರೂಪದೊಡನೆ ರಕ್ಕಸನೊಡನೆ ಭೀಕರವಾಗಿ ಕಾದುವ ಉಗ್ರರೂಪ ದರ್ಶನವನ್ನೂ ಸುಶ್ಮಿತಾ, ನಾಟಕೀಯ ಆಯಾಮದಲ್ಲಿ ಪ್ರದರ್ಶಿಸಿದ್ದು ಬೆರಗುಗೊಳಿಸಿತ್ತು.

    ಮುಂದೆ- ‘ಇದೇನೇ ಸಖಿ ಕಾಂತನು ಮುನಿದಿರ್ಪ?’’ ಎಂದು ವಿರಹತಪ್ತ ನಾಯಕಿ (ಜಾವಳಿ ರಚನೆ- ವೆಂಕಟಾದ್ರಿ ಶ್ಯಾಮರಾಯ) ತನ್ನ ದುಗುಡ-ದುಮ್ಮಾನಗಳ ಅಳಲನ್ನು ಪಂಜರದಲ್ಲಿದ್ದ ಗಿಣಿಯೊಡನೆ ಆಪ್ತವಾಗಿ ಸಂಭಾಷಿಸುತ್ತ, ಸಖಿಗೆ ಕೊರಳಹಾರದ ಆಮಿಷವೊಡ್ಡಿ ಪ್ರಿಯಕರನಲ್ಲಿ ದೂತೆಯಾಗಿ ಕಳುಹಿಸಿಕೊಡುವ ನವಿರಾದ ಮೇಳೈಸುವಿಕೆಯ ಸನ್ನಿವೇಶ ಮನಮುಟ್ಟಿತು. ಕೊನೆಯಲ್ಲಿ ಗಿಣಿಯ ‘ಅಸ್ತು’ ಎಂಬಂತಿದ್ದ ಶುಭದನಿ ಮಾರ್ಮಿಕವಾಗಿತ್ತು.

    ಪ್ರಸ್ತುತಿಯ ಬಹು ಆಕರ್ಷಕ ಘಟ್ಟ- ಕಣ್ಮನ ಸೆಳೆದ ‘ತುಳು ಭಾವಗೀತೆ’ (ರಚನೆ-ಕೆ. ಸುಧಾಕರ ಶೆಟ್ಟಿ)ಯ ಸಾಕಾರದಲ್ಲಿ ಸುಶ್ಮಿತಾ ಹೂವುಮಾರುವ ಹುಡುಗಿಯಾಗಿ ಲಂಗ-ದಾವಣಿ, ತಲೆಗೆ ಅಡಿಕೆ ಹಾಳೆಯ ‘ಕೊಪ್ಪಿ’, ಕೈಯಲ್ಲಿ ಬಿದಿರಿನ ಬುಟ್ಟಿ ಹಿಡಿದು ಅದರ ತುಂಬಾ ಮಂಗಳೂರು ಮಲ್ಲಿಗೆ, ಪಿಂಗಾರ ತೆನೆ- ಹೂವುಗಳನ್ನು ತುಂಬಿಕೊಂಡು ಕಲಾರಸಿಕರ ನಡುವೆ ಕುಣಿದು ಬರುತ್ತಾ, ಹೂವನ್ನು ನೀಡುವ ರಮ್ಯನೋಟ, ನಗುಮುಖದ ಭಾವ –ಹಾಡಿಗೆ ಜಾನಪದ ಧಾಟಿಯಲ್ಲಿ ಸುಂದರವಾಗಿ ಹೆಜ್ಜೆಗಳನ್ನು ಹೆಣೆದು ಅಭಿನಯಿಸಿದ ಪರಿ ನಿಜಕ್ಕೂ ಖುಷಿ ನೀಡಿತು. ಇಡೀ ಕರ್ನಾಟಕದ ವೈಶಿಷ್ಟ್ಯಗಳಿಗೆ ಪ್ರಭಾವಳಿಯಾಗಿ ತುಳುನಾಡಿನ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಭಾವಗೀತೆ ಜಾನಪದ ಸೊಗಡಿನಿಂದ ಮನರಂಜಿಸಿತು. ಅಂತ್ಯದಲ್ಲಿ ಆಕರ್ಷಕವಾಗಿದ್ದ ‘ತಿಲ್ಲಾನ’ದ ನಂತರ ಗುರು ಉದಯಕೃಷ್ಣರೊಡನೆ ‘ಮಂಗಳ’ಕರವಾಗಿ ಮುದದಿಂದ ನರ್ತಿಸಿದ್ದು ಅಚ್ಚರಿದಾಯಕವಾಗಿತ್ತು.

    – ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ‘ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡ’ದ ಅಧ್ಯಕ್ಷೆ.

    Share. Facebook Twitter Pinterest LinkedIn Tumblr WhatsApp Email
    Previous Articleಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣದ ಉದ್ಘಾಟನೆ
    Next Article ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜುಲೈ 20
    roovari

    Add Comment Cancel Reply


    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.