Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಕೂಚಿಪುಡಿ ನೃತ್ಯಶೈಲಿಯಲ್ಲಿ ‘ಭವನುತ’ ಆಧ್ಯಾತ್ಮಿಕ ರಾಮಾಯಣ
    Kuchipudi

    ನೃತ್ಯ ವಿಮರ್ಶೆ | ಕೂಚಿಪುಡಿ ನೃತ್ಯಶೈಲಿಯಲ್ಲಿ ‘ಭವನುತ’ ಆಧ್ಯಾತ್ಮಿಕ ರಾಮಾಯಣ

    November 8, 2023No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿವಿಧ ನಾಟ್ಯರೂಪಗಳಲ್ಲಿ ಹಲವಾರು ರಾಮಾಯಣದ ನೃತ್ಯರೂಪಕಗಳು ಇದುವರೆಗೂ ಪ್ರಸ್ತುತವಾಗಿದ್ದರೂ ಬಹುಶಃ ಕೂಚಿಪುಡಿ ನೃತ್ಯಶೈಲಿಯಲ್ಲಿ ಸಂಪೂರ್ಣ ಆಧ್ಯಾತ್ಮ ರಾಮಾಯಣದ ನೃತ್ಯರೂಪಕ ವೇದಿಕೆಯ ಮೇಲೆ ಪ್ರದರ್ಶನಗೊಂಡದ್ದು ಇದೇ ಮೊದಲೆನ್ನಬಹುದು. ದಿನಾಂಕ 28-10-2023ರಂದು ‘ಕೂಚಿಪುಡಿ ಪರಂಪರಾ ಫೌಂಡೇಶನ್’ ನೃತ್ಯ ಸಂಸ್ಥೆಯು ತನ್ನ ‘ನಾಟ್ಯ ಪರಂಪರ ದಶಮಾನೋತ್ಸವ’ದ ಸಂಭ್ರಮಾಚರಣೆಯನ್ನು ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಅಚರಿಸಿತು. ಈ ಸಂದರ್ಭದಲ್ಲಿ ‘ಭವನುತ’ ಎಂಬ ನೃತ್ಯರೂಪಕವನ್ನು ವರ್ಣರಂಜಿತವಾಗಿ ಪ್ರದರ್ಶಿಸಿ ಕಲಾರಸಿಕರ ಮನಸ್ಸನ್ನು ಸೆಳೆಯಿತು. ಲಾಸ್ಯ-ಲಾಲಿತ್ಯತೆಗೆ ಹೆಸರಾದ ಕೂಚಿಪುಡಿ ನಾಟ್ಯಶೈಲಿ ಭರತನಾಟ್ಯಕ್ಕಿಂತ ಕೊಂಚ ಭಿನ್ನವಾಗಿದ್ದು ವೇಷಭೂಷಣ-ವಸ್ತ್ರವೈವಿಧ್ಯ, ನೃತ್ಯದ ಧಾಟಿಯಲ್ಲೂ ಸ್ವಲ್ಪ ಬೇರೆಯಾಗಿದ್ದು, ಕಥಾ ನಿರೂಪಣೆ-ಅಭಿನಯ ಪ್ರಸ್ತುತಿಯಲ್ಲಿ ವೇಗಗತಿಯಲ್ಲಿ ಸಾಗುತ್ತ, ಲಾಸ್ಯ ಭಾವ-ಭಂಗಿ, ನಡೆಯಲ್ಲಿ ಚುರುಕಾಗಿ ಪ್ರವಹಿಸುತ್ತದೆ. ಅಂತೆ ನಡೆದ ‘ಭವನುತ’ ಅರ್ಥಪೂರ್ಣ ಶೀರ್ಷಿಕೆಯ ಮೋಹಕ ನೃತ್ಯರೂಪಕ ಪರಿಣಾಮಯುತವಾಗಿ ಪ್ರದರ್ಶಿತಗೊಂಡಿತು.

    ನಾಲ್ಕುದಶಕಗಳಿಂದ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಶಿಷ್ಯೆ, ತಮ್ಮ ಅಸಂಖ್ಯ ನೃತ್ಯ ಪ್ರದರ್ಶನಗಳಿಂದ ಖ್ಯಾತರಾದವರು. ತಮ್ಮ ‘ಕೂಚಿಪುಡಿ ಪರಂಪರಾ ಫೌಂಡೇಶನ್’ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾದ ದೀಪಾ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ ಇಪ್ಪತ್ತೈದು ವರುಷಗಳು ನಾಟ್ಯ ಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಇವರದು. ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ ಮತ್ತು ನೃತ್ಯ ಸಂಯೋಜಕಿಯಾದ ಇವರು, ‘ಕೂಚಿಪುಡಿ ಪರಂಪರ ಫೌಂಡೇಶನ್ ಟ್ರಸ್ಟ್’ನ ಲೈಫ್ ಟ್ರಸ್ಟಿಯಾಗಿ ವರ್ಷಪೂರ್ತಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ಕಾರ್ಯನಿರತರು.

    ಹದಿನೇಳನೆಯ ಶತಮಾನದ ಖ್ಯಾತ ಕವಿ ಶ್ರೀ ಮುನೆಪಲ್ಲಿ ಸುಬ್ರಮಣ್ಯ ಕವಿ ವಿರಚಿತ ‘ಭವ ನುತ’- ಸಂಪೂರ್ಣ ಆಧ್ಯಾತ್ಮ ರಾಮಾಯಣದ 6 ಕಾಂಡಗಳ ಕಥೆಯಲ್ಲಿ 104 ಕೀರ್ತನೆಗಳನ್ನು ಸಮರ್ಥವಾಗಿ ಬಳಸಿಕೊಂಡು ರಾಮಾಯಣ ಕಥೆಯ ಅದ್ಭುತ ನೃತ್ಯರೂಪಕವನ್ನು ಹೆಣೆಯಲಾಗಿತ್ತು. ಈ ವಿಶಿಷ್ಟ ನೃತ್ಯರೂಪಕದ ಪರಿಕಲ್ಪನೆ-ನಿರ್ಮಾಣ ಮತ್ತು ನೃತ್ಯ ಸಂಯೋಜನೆ ಕೂಚಿಪುಡಿ ನಿಪುಣೆ ಆಚಾರ್ಯ ದೀಪಾ ನಾರಾಯಣನ್ ಸಶೀಂದ್ರನ್ ಅವರದಾಗಿತ್ತು. ಸಂಗೀತ ಸಂಯೋಜನೆ- ಮೃದಂಗ ವಿದ್ವಾನ್ ಜಿ. ಗುರುಮೂರ್ತಿ, ಸಾಹಿತ್ಯ- ರಜನಿ ಮಲ್ಲಾಡಿ, ಗಾಯನ ದೀಪ್ತಿ ಶ್ರೀನಾಥ್, ಕೊಳಲು ಕಿಕ್ಕೇರಿ ಜಯರಾಂ ಮುಂತಾದವರಿದ್ದ ವಾದ್ಯಗೋಷ್ಠಿಯೊಂದಿಗೆ ನೃತ್ಯರೂಪಕವನ್ನು ಪ್ರಸ್ತುತಪಡಿಸಿದವರು ‘ಕೂಚಿಪುಡಿ ಪರಂಪರಾ ಫೌಂಡೇಶನ್’ ಸಂಸ್ಥೆಯ ನೃತ್ಯಕಲಾವಿದೆಯರು.

    ಕೂಚಿಪುಡಿ ನೃತ್ಯಶೈಲಿಯಲ್ಲಿ ಪ್ರಥಮ ಬಾರಿಗೆ ಪ್ರಯೋಗವಾದ ಒಂದೂವರೆ ಗಂಟೆಯ ‘ಭವ ನುತ’ – ನೃತ್ಯರೂಪಕ ನಾಟಕೀಯ ದೃಶ್ಯಗಳಿಂದೊಡಗೂಡಿ ಕಲಾರಸಿಕರ ಮನಸ್ಸನ್ನು ಆವರಿಸಿತು. ಶಿವ ಮತ್ತು ಪಾರ್ವತಿ ದೇವಿಯ ನಡುವೆ ನಡೆಯುವ ಸಂವಾದ, ಪ್ರಶ್ನೋತ್ತರ ತಂತ್ರದ ಮೂಲಕ, ಇಡೀ ರಾಮಾಯಣದ ಕಥೆಯನ್ನು ಆಸಕ್ತಿಕರವಾಗಿ ದೃಶ್ಯವತ್ತಾಗಿ ಹೇಳುವ ಪ್ರಯತ್ನ ಇದಾಗಿತ್ತು. ಹಿನ್ನಲೆಯ ವೇದಿಕೆಯಲ್ಲಿ ಪ್ರಕೃತಿ-ಪುರುಷರ ಸಂವಾದ-ಮುನ್ನಲೆಯಲ್ಲಿ ರಾಮಾಯಣದ ಕಥೆಯ ಮುಖ್ಯ ಘಟನೆಗಳ ಚಿತ್ರಗಳು ಪದರ ಪದರವಾಗಿ ಬಿಚ್ಚಿಕೊಳ್ಳುತ್ತಾ ಸಾಗಿತು.

    ಸಾಂಪ್ರದಾಯಕ ಕಥೆಯೇ ಆದರೂ ನಿರೂಪಣೆಯಲ್ಲಿ ನವೀನತೆಯನ್ನು ದಕ್ಕಿಸಿಕೊಂಡ ಈ ‘ಗೀತಗಬ್ಬ’ವು ಶ್ರೀರಾಮ ಜನನದಿಂದ ಆರಂಭವಾಗಿ, ಸೀತಾ ಸ್ವಯಂವರ, ಕೈಕೇಯಿ ಬೇಡಿಕೆಯ ನಿಮಿತ್ತವಾಗಿ ಅರಣ್ಯವಾಸ, ಚಿನ್ನದ ಜಿಂಕೆಯ ಪ್ರಕರಣ, ಸೀತಾಪಹರಣ, ಆಂಜನೇಯನ ಭೇಟಿ, ಅಶೋಕವನದಲ್ಲಿ ಸೀತಾಮಾತೆಯ ದರ್ಶನ-ಮುದ್ರಾ ಉಂಗುರ ಮತ್ತು ಚೂಡಾಮಣಿ ವಿನಿಮಯ ಮುಂತಾದ ಘಟನೆಗಳಿಂದ ರಾಮ-ರಾವಣರ ಯುದ್ಧ, ಅಂತ್ಯದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಹೃನ್ಮನ ತಣಿಸುವ ದೃಶ್ಯದೊಂದಿಗೆ ನೃತ್ಯರೂಪಕ ಸಂಪನ್ನವಾಯಿತು.

    ಮೂಲಕಥೆ ಮುಕ್ಕಾಗದಂತೆ ಸಾಗಿದ ನಿರೂಪಣೆಯ ದೃಶ್ಯಾವಳಿಗಳ ಸಂಯೋಜನೆಯಲ್ಲಿ ಹಲವಾರು ಸೂಕ್ಷ್ಮಸ್ಪಂದನೆಗಳು ಆಸಕ್ತಿಕರವಾಗಿದ್ದವು. ಅರಣ್ಯದಲ್ಲಿ ಅವರೇ ಪರ್ಣಕುಟೀರಗಳನ್ನು ನಿರ್ಮಿಸಿಕೊಳ್ಳುವುದು, ನವದಂಪತಿಗಳಾದ ರಾಮ-ಸೀತೆಯರ ನಡುವಣ ನವಿರಾದ ಸರಸ-ವಿಹಾರಗಳ ದೃಶ್ಯ ಮುದ ನೀಡಿತು. ಅಶೋಕವನದಲ್ಲಿ ಸೀತೆ ಮತ್ತು ಆಂಜನೇಯರ ನಡುವಣ ಸಂವಹನ, ಕುತೂಹಲಕಾರಿಯಾಗಿದ್ದಷ್ಟೇ ಅಲ್ಲದೆ ಭಾವಪೂರ್ಣವೂ ಆಗಿತ್ತು. ಶಿವ-ಪಾರ್ವತಿಯರ ತಾಂಡವ-ಲಾಸ್ಯದ ಹೆಜ್ಜೆಗಳ ಝೇಂಕಾರ, ಜಟಾಯು ಪ್ರತಿಭಟನೆ, ಶ್ರೀರಾಮನ ಧನುಛೇಧನ, ಶೂರ್ಪನಖಿಯ ಅಭೀಪ್ಸೆ ಮುಂತಾದ ಘಟ್ಟಗಳಲ್ಲಿ ಪಾತ್ರಗಳ ಮನಮುಟ್ಟುವ ಅಭಿನಯ, ನಯನ ಮನೋಹರ ವೇಷಭೂಷಣ, ಬಳಸಿದ ಸಾಂದರ್ಭಿಕ ಪರಿಕರಗಳು, ಕಲಾವಿದೆಯರ ಲವಲವಿಕೆಯ ನೃತ್ಯ ಲಹರಿ, ಚುರುಕಾದ ಕಥಾ ನಿರೂಪಣೆ ರೂಪಕದ ಯಶಸ್ಸಿಗೆ ಪೂರಕವಾಗಿತ್ತು.

    ಆಚಾರ್ಯ ದೀಪಾ ನಾರಾಯಣನ್ ಅವರ ಮಹತ್ವಾಕಾಂಕ್ಷೆಯ ಕನಸಾದ ಈ ನೃತ್ಯರೂಪಕವು ಸಮರ್ಥವಾಗಿ ಮೂಡಿಬಂದಿದ್ದು, ಕೂಚಿಪುಡಿ ನೃತ್ಯ ಇತಿಹಾಸದಲ್ಲೊಂದು ಮೈಲಿಗಲ್ಲು ಸೃಷ್ಟಿಸಿತು ಎಂದರೆ ಅತಿಶಯೋಕ್ತಿಯಲ್ಲ.

    – ವೈ.ಕೆ. ಸಂಧ್ಯಾ ಶರ್ಮ
    ಕನ್ನಡದ ಖ್ಯಾತ ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ‘ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡ’ದ ಅಧ್ಯಕ್ಷೆ.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ‘ಜಾಂಬವತಿ ಪರಿಣಯ’
    Next Article ಬೆಟ್ಟಂಪಾಡಿಯಲ್ಲಿ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟನೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ‘ಕೇಳು ಪಾಪಕ್ಕ’

    May 23, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    ಪುಸ್ತಕ ವಿಮರ್ಶೆ | ವಿಜಯಲಕ್ಷ್ಮಿ ಶಾನುಭೋಗ್ ಇವರ ‘ವ್ಯೂಹ’ (ಕಥಾಸಂಕಲನ)

    May 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.