ಅದೊಂದು ‘ರಂಗಪ್ರವೇಶ’ ಎನ್ನುವಂತೆಯೇ ಇರಲಿಲ್ಲ. ನಗುಮೊಗದ ನೃತ್ಯಕಲಾವಿದೆ ಲಿಖಿತಾ ನಾರಾಯಣ ಪಳಗಿದ ನರ್ತಕಿಯಂತೆ ರಂಗದ ಮೇಲೆ ಆತ್ಮವಿಶ್ವಾಸದಿಂದ ಚೈತನ್ಯಪೂರ್ಣವಾಗಿ ನರ್ತಿಸಿದಳು. ‘ಸಾಧನ ನೃತ್ಯಶಾಲೆ’ಯ ಪರಿಣತ ನೃತ್ಯಗುರು ಭಾವನಾ ವೆಂಕಟೇಶ್ವರ ಅವರ ಶಿಸ್ತುಬದ್ಧ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ಲಿಖಿತಾ ಇತ್ತೀಚೆಗೆ ಜೆ.ಎಸ್.ಎಸ್. ರಂಗ ಮಂದಿರದಲ್ಲಿ ವಿಧ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು. ಷೋಡಶ ತರುಣಿ, ನೃತ್ಯಕ್ಕೆ ಹೇಳಿ ಮಾಡಿಸಿದ ಮಾಟವಾದ ಸಪೂರ ಮೈಕಟ್ಟು ಹೊಂದಿದ್ದು, ಕಣ್ಮನ ತುಂಬುವಂತೆ ಅನೇಕ ದೈವೀಕ ಕೃತಿಗಳನ್ನು ರಮ್ಯವಾಗಿ ಸಾಕ್ಷಾತ್ಕರಿಸಿದ್ದು ಕಲಾರಸಿಕರಿಗೆ ಆನಂದ ತಂದಿತು.
ಲಿಖಿತಾ, ಹಕ್ಕಿ ಹಗುರಿನ ಹೆಜ್ಜೆಗಳಲ್ಲಿ ರಂಗದ ತುಂಬಾ ನಲಿವಿನ ಗೆಜ್ಜೆಕಾಲ್ಗಳನ್ನು ಝಣಿಸುತ್ತ ಗುರುಗಳ ಹಾಗೂ ವಾದ್ಯಗಾರರ ಪಾದಗಳಿಗೆರಗುತ್ತ ವಿನಯದ ನಮನ ಸಲ್ಲಿಸಿ ‘ಪುಷ್ಪಾಂಜಲಿ’ಯ ಮೂಲಕ ದೇವಾನುದೇವತೆಗಳಿಗೆ ನೃತ್ತನೈವೇದ್ಯ ಸಲ್ಲಿಸಿ ನೃತ್ಯಾರಾಧನೆಗೆ ತೊಡಗಿದ್ದು ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆಯನ್ನು ಪಡೆಯಿತು.
‘ಕಮಲಾಕುಚ ಚೂಚುಕ ಕುಂಕುಮತೋ..’ ಎಂಬ ಶ್ರೀವೆಂಕಟೇಶ ಸುಪ್ರಭಾತದ ಸ್ತುತಿ, ವೆಂಕಟೇಶ್ವರನಿಗೆ ಸಂದ ಪ್ರಥಮ ನೃತ್ಯ ಪೂಜಾರ್ಪಣೆ. ನೃತ್ಯದ ಅಚ್ಚುಕಟ್ಟುತನ ಮನಕ್ಕೆ ಮುದತಂದಿತು. ಗುರು ಭಾವನಾ ನೃತ್ಯ ಸಂಯೋಜನೆಯ ಸಾಂಪ್ರದಾಯಿಕ ‘ಅಲಾರಿಪು’ನಲ್ಲಿ ಖಚಿತ ಹಸ್ತ-ಅಡವುಗಳ ವೈವಿಧ್ಯ, ಅರೆಮಂಡಿಯ ನಿರೂಪಣೆ ಸೊಗಸಾಗಿ ಮೂಡಿಬಂತು. ಸುಗ್ಗನಹಳ್ಳಿ ಷಡಕ್ಷರಿ ರಚನೆಯ ‘ತ್ರಿಮಾತಾ ಕೌತ್ವಂ’ ದೈವೀಕ ಆಯಾಮದಲ್ಲಿ ಅನಾವರಣಗೊಂಡಿತು. ತ್ರಿದೇವಿಯರ ಅತಿಶಯವಾದ ವ್ಯಕ್ತಿತ್ವವನ್ನು ಕಲಾವಿದೆ ವಿಶಿಷ್ಟ ಭಂಗಿಗಳ ಪ್ರದರ್ಶನದ ಮೂಲಕ, ತನ್ನ ಅಭಿನಯದ ಮೆರುಗಿನಿಂದ ಮನಸೂರೆಗೊಂಡಳು.
‘ಮಾರ್ಗಂ’ ಸಂಪ್ರದಾಯದ ಪ್ರಮುಖ ಹಂತ ವರ್ಣದ ಪ್ರಸ್ತುತಿ. ಲಿಖಿತಾ ನಿರ್ವಹಿಸಿದ ಭಕ್ತಿಪ್ರಧಾನ ವರ್ಣದಲ್ಲಿ ಭಕ್ತನೊಬ್ಬ ‘ಚಲ್ಲಮೇಲ ಚೇಸೆವಯ್ಯ’ ಎಂದು ಪರಮಾತ್ಮನಲ್ಲಿ ದೈನ್ಯವಾಗಿ ಬೇಡಿಕೊಳ್ಳುತ್ತಾ, ಶರಣ್ಯಭಾವದ ತನ್ಮಯತೆಯಲ್ಲಿ ಕರಗಿಹೋಗುವ ಅನನ್ಯವಾದ ಕೃತಿ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಕಲಾವಿದೆ ಬಗೆಬಗೆಯಲ್ಲಿ ದೇವನ ಅನುಗ್ರಹ ಬೇಡುವ ಪರಿ ಹೃದಯಂಗಮವಾಗಿತ್ತು. ನಡುನಡುವೆ ಗುರು ಭಾವನಾ ಸ್ಫುಟವಾಗಿ ಕಂಚಿನಕಂಠದಿಂದ ನುಡಿದ ನಟುವಾಂಗದ ಝೇಂಕಾರಕ್ಕನುಗುಣವಾಗಿ ಕಲಾವಿದೆ, ತಾಳ-ಲಯಬದ್ಧವಾಗಿ ತನ್ನ ನೃತ್ತ ಸಾಮರ್ಥ್ಯವನ್ನು, ಅರೆಮಂಡಿ-ಆಕಾಶಚಾರಿ-ರಂಗಾಕ್ರಮಣದ ಚಲನೆಗಳ, ಸಂಕೀರ್ಣ ಪಾದಭೇದಗಳ ಸೊಗಸನ್ನು ಚೇತೋಹಾರಿಯಾಗಿ ಅಭಿವ್ಯಕ್ತ ಪಡಿಸಿದಳು. ಗಜೇಂದ್ರ ಮೋಕ್ಷ, ದ್ರೌಪದಿಗೆ ಅಕ್ಷಯವಸ್ತ್ರ ನೀಡುವ ಮೂಲಕ ಉದ್ಧರಿಸಿದ ‘ಶ್ರೀಹರಿಯೇ ನನ್ನ ಮೇಲೇನು ಆಗ್ರಹ ಅನುಗ್ರಹ ತೋರು’ ಎಂದು ಭಕ್ತ, ವಿನೀತವಾಗಿ ಬೇಡುವ ಸಂದರ್ಭದಲ್ಲಿ ಮೂಡಿಬಂದ ಹಿತವಾದ ಸಂಚಾರಿಗಳ ಅಭಿವ್ಯಕ್ತಿಯಲ್ಲಿ ಲಿಖಿತಳ ಅಭಿನಯ ಅನನ್ಯವಾಗಿತ್ತು.
ಮುಂದೆ-‘ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ..’ -ಎಂಬ ಪುರಂದರದಾಸರ ದೇವರನಾಮವನ್ನು ಲಿಖಿತಾ ಭಕ್ತಿಪೂರ್ವಕವಾಗಿ ಅಭಿನಯಿಸಿದಳು. ಗಂಗಾಧರನ ಮಹತ್ವವನ್ನು ಸಾರುವ ಭಕ್ತ ಮಾರ್ಕಂಡೇಯನ ಕಥೆ, ಜಗದುಪಕಾರಕ್ಕೆ ನೀಲಕಂಠನಾದ ಸಂಚಾರಿ ಕಥೆಯನ್ನು ಕಲಾವಿದೆ ಅನುಪಮವಾಗಿ ನಿರೂಪಿಸುತ್ತ ಶಿವಶಂಕರನ ವಿವಿಧ ಧೀರೋದಾತ್ತ ಭಂಗಿಗಳನ್ನು ಮನಮೋಹಕವಾಗಿ ಪ್ರದರ್ಶಿಸಿದಳು.
ಮುಂದೆ- ಧರ್ಮಪುರಿ ಸುಬ್ಬರಾಯ ಅಯ್ಯರ್ ವಿರಚಿತ ‘ಜಾವಳಿ’ಯಲ್ಲಿ ‘ ಪ್ರಾಣನಾಯಕ, ಪರುಲನ್ನ ಮಾಟ ನಂಬವದ್ದು…’– ಎಂಬ ವಿರಹೋತ್ಕಂಟಿತ ನಾಯಕಿಯ ಅಳಲು, ಪ್ರಿಯಕರನ ಅನ್ಯಸ್ತ್ರೀ ಸಂಗದ ನೋವು-ವಿರಹ-ಸಂಕಟಗಳನ್ನು ಲಿಖಿತಾ ಸೂಕ್ಷ್ಮಜ್ಞತೆಯಿಂದ ಅಭಿವ್ಯಕ್ತಿಸಿದಳು.
ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಲಿಖಿತಾ ಅದೇ ಹುಮ್ಮಸ್ಸು- ಲವಲವಿಕೆಯನ್ನು ಕಾಪಾಡಿಕೊಂಡದ್ದು ವಿಶೇಷವಾಗಿತ್ತು. ಅಂತ್ಯ ಕೃತಿ ‘ತಿಲ್ಲಾನ’ದಲ್ಲಿ ಲಿಖಿತ ತನ್ನ ಮಿಂಚಿನ ಸಂಚಾರದ ನೃತ್ತಗಳ ಗೊಂಚಲಿನಿಂದ, ಪಾದರಸದ ಚಲನೆಗಳ ಸೌಂದರ್ಯದಿಂದ ವಿಸ್ಮಯಗೊಳಿಸಿದಳು.
- ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.