ಬೆಂಗಳೂರಿನಲ್ಲಿ ನೃತ್ಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಕೇವಲ ವೇದಿಕೆಯ ಮೇಲೆ ನೃತ್ಯ ಪ್ರದರ್ಶನವೊಂದೇ ನೃತ್ಯಕಲಾವಿದರ ಗುರಿಯಾಗಿರಬಾರದು. ನೃತ್ಯ ಮಾಡಲು ತಕ್ಕ ಅಂಗಸೌಷ್ಟವ, ಪ್ರದರ್ಶನಕ್ಕೆ ಅಗತ್ಯವಾದ ಉತ್ತಮ ಶಿಕ್ಷಣ -ಅಭ್ಯಾಸವಷ್ಟೇ ಆಗದೇ, ಸಮಗ್ರ ಬೆಳವಣಿಗೆಯ ಕಡೆ ಆದ್ಯ ಗಮನ ನೀಡಬೇಕಾದ್ದು ಅವಶ್ಯ ಎಂಬುದನ್ನು ಮನಗಾಣಿಸಿದ್ದು, ಇತ್ತೀಚೆಗೆ ನಡೆದ ‘ಸಾಧನ ಸಂಗಮ ಡಾನ್ಸ್ ಸೆಂಟರ್’ ಇದರ ‘ಮುಕುಲ ನೃತ್ಯೋತ್ಸವ’.
ಕಾಲ ಕಾಲಕ್ಕೆ ಹೊಸ ಚಿಂತನೆಗಳು, ಪ್ರಯೋಗ-ಪ್ರಯತ್ನಗಳಿಂದ ನೂತನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವ ಬಸವೇಶ್ವರ ನಗರದ ಖ್ಯಾತ ನೃತ್ಯ ಸಂಸ್ಥೆ ‘ಸಾಧನ ಸಂಗಮ’ದ ಹಿಂದಿನ ಧೀ ಶಕ್ತಿ, ಅನುಭವ ಭಂಡಾರ ಖ್ಯಾತ ನೃತ್ಯಜ್ಞೆ ವಿ. ಜ್ಯೋತಿ ಪಟ್ಟಾಭಿರಾಮ್. ಅವರದು ಸಮಗ್ರ ದೃಷ್ಟಿ. ಅಂತಸ್ಸತ್ವ ಬೆಳೆಸುವ ಸುತ್ಯಾರ್ಹ ಪ್ರಯತ್ನ- ಸಾಧನ ಸಂಗಮದ ‘ಮುಕುಲ ನೃತ್ಯೋತ್ಸವ’ ಇದಕ್ಕೆ ಸಾಕ್ಷಿ. ಉದಯೋನ್ಮುಖ ಕಲಾವಿದರಾಗಿದ್ದಾಗಲೇ ಅವರನ್ನು ಸಂಪೂರ್ಣ ಜ್ಞಾನಾರ್ಜನೆಯಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಪ್ರತಿ ವರ್ಷ ಅನೇಕ ವಿಧವಾದ ಚಿಂತನೆಗಳಿಂದ ಹೂರಣಗೊಂಡ ನೃತ್ಯ ಕಾರ್ಯಕ್ರಮವನ್ನು ಕಳೆದ 23 ವರ್ಷಗಳಿಂದ ವಿಶಿಷ್ಟ ‘ಮುಕುಲ ನೃತ್ಯೋತ್ಸವ’ವನ್ನು ನಡೆಸಿಕೊಂಡು ಬರುತ್ತಿದೆ.
ಕಣ್ಮನ ತುಂಬುವ ನೃತ್ಯ ವೈಭವದೊಡನೆ ಜ್ಞಾನಾರ್ಜನೆಯ ಕೆಲವು ಚಟುವಟಿಕೆಗಳು ಕಲಾವಿದರೊಡನೆ ಪ್ರೇಕ್ಷಕರನ್ನೂ ಸೆಳೆದಿತ್ತು. ಬಸವೇಶ್ವರನಗರದಲ್ಲಿರುವ ನೃತ್ಯ ಕೇಂದ್ರದ ‘ರಂಗೋಪನಿಷತ್’ ನೃತ್ಯಾಂಗಣದಲ್ಲಿ ಎಳೆಯ ಚಿಗರೆಮರಿಗಳಂಥ ಉತ್ಸಾಹೀ ನರ್ತಕರು ಭಾಗವಹಿಸಿ ಮುದಗೊಂಡರಲ್ಲದೇ ಬಹಳಷ್ಟು ಹೊಸ ವಿಷಯಗಳನ್ನು ಅರಿತುಕೊಂಡದ್ದು ಈ ಕಾರ್ಯಕ್ರಮದ ಧನಾತ್ಮಕ ಅಂಶ. ಇದರಲ್ಲಿ ಒಟ್ಟು ಮೂರು ನೃತ್ಯ ತಂಡಗಳು ಭಾಗವಹಿಸಿದ್ದವು. ಮನೋಹರ ನೃತ್ಯ ಕಾರ್ಯಕ್ರಮಗಳು ಹಾಗೂ ಬುದ್ಧಿಮತ್ತೆಗೆ ಕಸರತ್ತು ನೀಡುವ ನೃತ್ಯ-ಯೋಗ ಮತ್ತು ಸಾಮಾನ್ಯ ಜ್ಞಾನದ ‘ರಸಪ್ರಶ್ನೆ’ ಕಾರ್ಯಕ್ರಮ ಬಹು ಸ್ವಾರಸ್ಯಕರವಾಗಿದ್ದವು. ಇದಕ್ಕಾಗಿ ಡಾ. ಸಾಧನಾಶ್ರೀಯೊಂದಿಗೆ ಹಲವು ಹಿರಿಯ ಶಿಷ್ಯೆಯರು ಸುಮಾರು ಒಂದು ತಿಂಗಳು ಪರಿಶ್ರಮಪಟ್ಟು ಮಕ್ಕಳ ಮನೋವಿಕಾಸಕ್ಕಾಗಿ ಅನೇಕ ಬಗೆಯ ಪದಬಂಧ, ರಾಮಾಯಣ- ಮಹಾಭಾರತಕ್ಕೆ ಸಂಬಂಧಿಸಿದ ಪ್ರಶ್ನೆಗಳು, ರ್ಯಾಪಿಡ್ ಫೈರ್ ಮತ್ತು ನೃತ್ಯಜ್ಞಾನ ಪರೀಕ್ಷೆಯ ವಿವಿಧ ಬಗೆಗಳ ಅನ್ವೇಷಕ ವಿಧಾನಗಳನ್ನು ರೂಪಿಸಿ ಸ್ಪರ್ಧೆ ಏರ್ಪಡಿಸಿದ್ದರು. ಪರೀಕ್ಷೆಯ ವಿನ್ಯಾಸ ಪ್ರತಿವರ್ಷ ಬದಲಾಗುತ್ತ ಹೋಗುವುದು ಇದರ ವೈಶಿಷ್ಟ್ಯ.
ಶುಭಾರಂಭಕ್ಕೆ ‘ಸಾಧನ ಸಂಗಮ’ದ ಕಿರಿಯ ವಿದ್ಯಾರ್ಥಿಗಳಿಂದ ಸ್ವಾಗತಾರ್ಥವಾಗಿ ನಡೆದ ನೃತ್ಯಾವಳಿ ಮನಮೋಹಕವಾಗಿತ್ತು. ಅನಂತರ ‘ಶಂಕರ ಫೌಂಡೆಶನ್’ನ ನೃತ್ಯಗುರು ವಿದುಷಿ ಸುಪ್ರಿಯಾ ಅವರ ಶಿಷ್ಯರು ಮೊದಲಿಗೆ ತಮ್ಮ ಅಂಗಶುದ್ಧ ನರ್ತನದಿಂದ ತಿಶ್ರಗತಿ ಏಕತಾಳದ ‘ಗಣಪತಿ ಕೌತ್ವಂ’ನಲ್ಲಿ ಗಣಪತಿಯ ಮಹಿಮೆ- ವೈಶಿಷ್ಟ್ಯಗಳನ್ನು ಸೊಗಸಾಗಿ ಕಂಡರಿಸಿದರು. ಮುಂದೆ-ರಾಗಮಾಲಿಕೆಯಲ್ಲಿ ಆದಿಶಂಕರರ ‘ಶಿವಪಂಚಾಕ್ಷರಿ’ ಕೃತಿಯನ್ನು ಮತ್ತು ಬೃಂದಾವನಿ ರಾಗದ ತಿಲ್ಲಾನವನ್ನು ನಯನ ಮನೋಹರವಾಗಿ ಪ್ರಸ್ತುತಪಡಿಸಿದರು.
‘ಕಲಾಧ್ಯಾನ ಇನ್ಸ್ಟಿಟ್ಯೂಟ್ ಫರ್ ಆರ್ಟ್ಸ್’ ಇದರ ನೃತ್ಯಗುರು ವಿದುಷಿ ಎಸ್. ರಂಜನಾ ಇವರ ಶಿಷ್ಯರು ಶ್ರೀ ವಿದ್ಯಾಭೂಷಣರ ಉಗಾಭೋಗದಿಂದ ಆರಂಭಿಸಿ, ದಂಡಾಯುಧಪಾಣಿ ಪಿಳ್ಳೈ ಅವರು ರಚಿಸಿರುವ (ಹಂಸಾನಂದಿ ರಾಗ ರೂಪಕ ತಾಳ) ಜತಿಸ್ವರವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಕಣ್ಮನ ತುಂಬಿದರು. ಆಮೇಲೆ ಅಣ್ಣಮಾಚಾರ್ಯರ ರಚನೆಯ ತೋಡಯ ಮಂಗಳದೊಂದಿಗೆ ಪ್ರಸ್ತುತಿಯನ್ನು ರಮ್ಯವಾಗಿ ಸಂಪನ್ನಗೊಳಿಸಿದರು. ಅನಂತರ ‘ನೃತ್ಯಸುಧೆ’ಯ ನೃತ್ಯಗುರು ವಿ. ರಚನಾ ರಮೇಶ್ ಅವರ ಶಿಷ್ಯರು ಚಕ್ರವಾಕ ರಾಗದ ಪುಷ್ಪಾಂಜಲಿ, ತಿಶ್ರ ನಡೆಯ ಅಲರಿಪು ಮತ್ತು ಬಿಲಹರಿ ರಾಗದ ‘ಶ್ರೀ ಚಾಮುಂಡೇಶ್ವರಿ’ ಕೃತಿಯನ್ನು ಚೆಂದದ ಅಭಿನಯ – ನೃತ್ತ ಸೌಂದರ್ಯದಿಂದ ನರ್ತಿಸಿ ತಮ್ಮ ಸುಮನೋಹರ ನೃತ್ಯಗಳಿಂದ ರಂಜಿಸಿದರು. ಮೂವರು ಗುರುಗಳೂ ತಮ್ಮ ಸೃಜನಾತ್ಮಕ ಪ್ರತಿಭೆಯಿಂದ ಎಲ್ಲ ಕೃತಿಗಳನ್ನೂ ಸಮೂಹ ನೃತ್ಯದಲ್ಲಿ ಸೊಗಯಿಸುವಂತೆ ಆಕರ್ಷಕವಾಗಿ ಸಂಯೋಜಿಸಿದ್ದು ಗಮನಾರ್ಹವಾಗಿತ್ತು.
ಮುಕುಲ ನೃತ್ಯೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ‘ಕಲಾಧ್ಯಾನ ಇನ್ಸ್ಟಿಟ್ಯೂಟ್ ಫರ್ ಆರ್ಟ್ಸ್’ ನೃತ್ಯಗುರು ವಿದುಷಿ ಎಸ್. ರಂಜನಾ ಇವರ ಶಿಷ್ಯರು ‘ಮುಕುಲ ಬಾಲ ತಂಡ ಪ್ರಶಸ್ತಿ’ಯನ್ನು ಗಳಿಸಿ ಜಯಶಾಲಿಗಳಾದರು. ಪ್ರತಿವರ್ಷವೂ ಹೊಸ ನೃತ್ಯ ತಂಡಗಳಿಗೆ ಅವಕಾಶ ಮತ್ತು ಹೊಸ ಆಯಾಮದ ಜ್ಞಾನಾರ್ಜನೆಯ ಪ್ರಶ್ನೆ – ಪರೀಕ್ಷೆಗಳನ್ನು ತಯಾರು ಮಾಡುವ ‘ಸಾಧನ ಸಂಗಮ’ದ ಪರಿಶ್ರಮ ಸ್ತುತ್ಯಾರ್ಹ.
ವಿಮರ್ಶಕಿ : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.