ಲತೆಯಂಥ ಸಪೂರ ಮಾಟದ ದೇಹಶ್ರೀ ಹೊಂದಿದ ನೃತ್ಯಚತುರೆ ಧೃತಿ ಶೆಟ್ಟಿ, ಬಿಲ್ಲಿನಂತೆ ಹೇಗೆಂದರೆ ಹಾಗೇ ಬಾಗುವ ಚೈತನ್ಯದ ಸೊಬಗಿನಿಂದ ತನ್ನ ರಂಗಪ್ರವೇಶದಲ್ಲಿ ಪ್ರದರ್ಶಿಸಿದ ಸುಮನೋಹರ ನೃತ್ಯ-ಯೋಗದ ಭಂಗಿಗಳು ಬೆರಗು ಹುಟ್ಟಿಸಿದವು. ದಿನಾಂಕ 08 ಸೆಪ್ಟೆಂಬರ್ 2024ರಂದು ಬಸವೇಶ್ವರ ನಗರದ ಕೆ.ಇ.ಎ. ರಂಗಮಂದಿರದಲ್ಲಿ ‘ಸಾಧನ ಸಂಗಮ’ ನೃತ್ಯಶಾಲೆಯ ಹಿರಿಯಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಶ್ರೀ ಗುರುದ್ವಯರ ಶಿಷ್ಯೆ ಉದಯೋನ್ಮುಖ ಕಲಾವಿದೆ ಧೃತಿ, ಬಹು ಆತ್ಮವಿಶ್ವಾಸ ಹಾಗೂ ಲವಲವಿಕೆಯಿಂದ ತನ್ನ ಭರತನಾಟ್ಯ ನೃತ್ಯ ಪ್ರದರ್ಶಿಸಿದಳು. ಸಾಂಪ್ರದಾಯಕ ‘ಪುಷ್ಪಾಂಜಲಿ’ಯ ನೃತ್ತಾರ್ಪಣೆಯಿಂದ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದ ನಂತರ ಮುಂದಿನ ‘ಗಣೇಶ ಸ್ತುತಿ’ ವಿಶೇಷವಾಗಿತ್ತು. ಸಾಮಾನ್ಯ ನಿರೂಪಣೆಯ ಗಣಪತಿಯ ವಿಶಿಷ್ಟ ರೂಪ-ಗುಣಗಳನ್ನಷ್ಟೇ ಚಿತ್ರಿಸದೆ, ಮೃದಂಗ ವಿದ್ವಾನ್ ಗುರುಮೂರ್ತಿ ಮತ್ತು ಗಾಯಕ ಬಾಲಸುಬ್ರಮಣ್ಯ ಶರ್ಮ ವಿಶೇಷವಾಗಿ ರಚಿಸಿರುವ ಗಣಪತಿ ಕುರಿತ ಹೊಸ ಪರಿಕಲ್ಪನೆಯ ಸ್ತುತಿಯ ಅರ್ಥ ಸ್ಫುರಿಸುವಂತೆ, ನೀಲಕಂಠನ ವೈಶಿಷ್ಟ್ಯವನ್ನೂ ಸಾಕಾರಗೊಳಿಸಿ, ಧೃತಿ ಚೈತನ್ಯಪೂರ್ಣವಾಗಿ ನರ್ತಿಸಿದಳು.
ಗಣಪತಿಯ ಧ್ವನಿ, ಮೋಡಗಳ ಘರ್ಜನೆಯಂತಿದ್ದು, ತನ್ಮೂಲಕ ಅದು ನವಿಲುಗಳ ನರ್ತನಕ್ಕೆ ಅದಮ್ಯ ಸ್ಫೂರ್ತಿ ನೀಡುವಂತೆ ತನ್ನ ನೃತ್ಯಕ್ಕೆ ಗಣೇಶನ ಪ್ರೋತ್ಸಾಹ ಒದಗಲೆಂದು ಪ್ರಾರ್ಥಿಸಿ ಕಲಾವಿದೆ ನೃತ್ಯನೈವೇದ್ಯ ಅರ್ಪಿಸಿದಳು. ಮೇಘದ ಆರ್ಭಟಕ್ಕೆ ಸಮವಾಯಿಯಾದ ಆಕಾಶಚಾರಿಗಳು, ಅರೆಮಂಡಿಯ ಭಂಗಿಗಳು, ಗರಿಬಿಚ್ಚಿದ ನವಿಲಿನ ಆಮೋದದ ನರ್ತನ, ಮಿಂಚಿನ ಸಂಚಾರದ ಹರಿತ ನೃತ್ತಗಳು, ಮಂಡಿ ಅಡವು- ಭ್ರಮರಿಯ ವೈಖರಿಯ ಸೊಗಸು ಧೃತಿಯ ಕಲಾಪ್ರಪೂರ್ಣ ನೃತ್ಯವಿಲಾಸಕ್ಕೆ ಸಾಕ್ಷಿಯಾದವು. ಸ್ವರಗಳಿಗೆ ಜತಿ ಜೋಡಣೆ ಮಾಡಿದ ‘ಜತಿಸ್ವರ’-ನೃತ್ತಭಾಗ, ಸಾಹಿತ್ಯಭಾಗವಿಲ್ಲದಿದ್ದರೂ, ತಾಳ ಲಯಬದ್ಧ ಕ್ಲಿಷ್ಟ ನಡೆಭೇದಗಳು, ವಿಶಿಷ್ಟ ಪಾದಭೇದಗಳಿಂದ ಕೂಡಿದ್ದು, ಅಡವುಗಳ ಮೂಲಕ ರಸಾನುಭವ ನೀಡಿದವು. ಕಲಾವಿದೆಯ ಅಂಗಶುದ್ಧ, ನಿರಾಯಾಸ ನರ್ತನ ಭಾವಪ್ರದ ಮುಖಾಭಿವ್ಯಕ್ತಿ- ಮಿನುಗುವ ಕಣ್ಣೋಟಗಳಿಂದ ಗಮನಾರ್ಹವಾಯಿತು.
ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ ವಿರಚಿತ ಸುಮನೇಶ ರಂಜಿನಿ ರಾಗದ ‘ಶ್ರೀ ಸರಸ್ವತಿ ಆಶ್ರಯಾಮಿ ಸತತಂ..’ ಕೃತಿಯಲ್ಲಿ- ಲಲಿತ ಸುಂದರಿಯ ಕಾಳಿ, ತ್ರಿಪುರ ಸುಂದರಿ ಮತ್ತು ಭುವನೇಶ್ವರಿಯರ ಮೂರು ಅವತಾರಗಳನ್ನು ಧೃತಿ, ವಿಭಿನ್ನ ಆಯಾಮದ ಹೊಳಪಿನ ಅಭಿನಯದಲ್ಲಿ ಸಾಕ್ಷಾತ್ಕರಿಸಿದಳು. ಅವಳು ಪ್ರದರ್ಶಿಸಿದ ಒಂದೊಂದು ದಿವ್ಯ- ಭವ್ಯ ದೈವೀಕ ಭಂಗಿಗಳೂ ಅನುಪಮವಾಗಿದ್ದವು. ಅವಳ ಮೃದು-ಮಧುರ ಚಲನೆಯ ಹಂಸಭಂಗಿ – ಸುಮನೋಹರ ನವಿಲನಡೆ, ನವಿರಾದ ದ್ರವೀಕೃತ ಆಂಗಿಕಾಭಿನಯ ಕಣ್ಣಿಗೆ ಹಬ್ಬವಾಗಿತ್ತು. ಗಂಧರ್ವರು ಸೋಮರಸವನ್ನು ಕದ್ದು ತಮ್ಮ ಲೋಕಕ್ಕೆ ಕೊಂಡೊಯ್ದ ಹಾಗೂ ಗಾಯತ್ರೀ ಮಾತೆಯು ಎರಡು ಬೃಹತ್ ರೆಕ್ಕೆಯನ್ನು ಪಡೆದುಕೊಂಡು, ಗಂಧರ್ವಲೋಕಕ್ಕೆ ಹಾರಿಹೋಗಿ, ತನ್ನ ಸಂಚಿತ ಶಕ್ತಿಯಿಂದ ಅಮೃತವನ್ನು ಹಿಂಪಡೆದ ವಿಸ್ತೃತ ಸಂಚಾರಿ ಕಥೆಯನ್ನು ಸೊಗಸಾಗಿ ಚಿತ್ರಿಸಿದಳು ಧೃತಿ. ಸರಸ್ವತಿಯ ಮಹಿಮೆಯನ್ನು ತನ್ನ ಶಕ್ತಿಶಾಲಿಯಾದ ಅಭಿನಯದ ಮೂಲಕ ಪ್ರದರ್ಶಿಸಿದ ಕಲಾವಿದೆಯ ರೋಮಾಂಚಕ ಪ್ರಸ್ತುತಿಯನ್ನು ಪರಿಣಾಮಕಾರಿಯಾಗಿಸಿದ ಬಾಲಸುಬ್ರಹ್ಮಣ್ಯ ಶರ್ಮರ ಭಾವಪೂರ್ಣ, ಚೇತೋಹಾರಿ ಗಾಯನ ಹೃದಯಸ್ಪರ್ಶಿಯಾಗಿತ್ತು.
ಮಾರ್ಗಂ ಸಂಪ್ರದಾಯದಲ್ಲಿ ‘ಪದವರ್ಣ’ – ಸರ್ವಾಂಗೀಣ ಸುಂದರವಾದ ಕ್ಲಿಷ್ಟ ನೃತ್ಯಬಂಧ. ಈ ದೀರ್ಘ ನೃತ್ಯಬಂಧವನ್ನು ನಿರೂಪಿಸಲು ಕಲಾವಿದರಿಗೆ ಮಾನಸಿಕ ಏಕಾಗ್ರತೆ, ದೈಹಿಕ ಶಕ್ತಿ, ನೆನಪಿನ ಶಕ್ತಿಯ ಉತ್ಕೃಷ್ಟತೆ, ನೃತ್ತ ಮತ್ತು ಅಭಿನಯದ ಮೇಲೆ ಸಮಾನ ಪ್ರಭುತ್ವ, ತಾಳ-ಲಯದ ಮೇಲೆ ಹಿಡಿತ ಅತ್ಯಗತ್ಯ. ಅಂದು- ಧೃತಿ, ಪ್ರಸ್ತುತಪಡಿಸಿದ ದ್ವಾರಕೀ ಕೃಷ್ಣಸ್ವಾಮಿ ರಚಿಸಿದ ‘ವರ್ಣ’ದ ವಿರಹೋತ್ಖಂಠಿತ ನಾಯಕಿ, ‘ಭುವನ ಸುಂದರನ ಕರೆತಾರೆ ನೀರೆ’ ಎಂದು ಶ್ರೀಕೃಷ್ಣನನ್ನು ಕರೆದುಕೊಂಡು ಬಾರೆಂದು ತನ್ನ ಸಖಿಯಲ್ಲಿ ಪರಿಪರಿಯಾಗಿ ನಿವೇದಿಸುವ ಭಾವಗುಚ್ಚ ಹೃದಯಂಗಮವಾಗಿತ್ತು. ಆತನ ಬರುವಿಕೆಗೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಕಾಯುತ್ತಿದ್ದಾಳೆ. ಮಾರನ ಬಾಣಗಳಿಂದ ವಿರಹದ ವೇದನೆಯನ್ನು ಭರಿಸಲಾರದೆ, ಪರಿತಪಿಸುವ ದುಃಖತಪ್ತ ನಾಯಕಿಯ ಅದಮ್ಯ ಭಾವನೆಗಳನ್ನು ಮನಮುಟ್ಟುವಂತೆ ಅಭಿನಯಿಸಿದಳು ಧೃತಿ. ಅವನೊಡನೆ ಕಳೆದ ರಸಕ್ಷಣಗಳನ್ನು ನೆನೆಯುತ್ತ, ಸುಮ್ಮಾನದ ನೆನಪುಗಳಲ್ಲಿ ಮೀಯುತ್ತ ಪುಳಕಗೊಳ್ಳುವ ನಾಯಕಿಯಾಗಿ ಧೃತಿ ಆಪ್ತ ಅನುಭವಗಳನ್ನು ಹರಳುಗೊಳಿಸುತ್ತಾಳೆ.
ಪ್ರಿಯಕರನ ಅಗಲಿಕೆಯ ನೋವಿನ ಅಭಿವ್ಯಕ್ತಿಯಾಗಿ, ಕಲಾವಿದೆ ನಡುನಡುವೆ ಚೆಲ್ಲುತ್ತ ಸಾಗಿದ ನೃತ್ತ ನಡುಮುಡಿಯ ಮಲ್ಲಿಗೆಯ ಘಮಲು ವೃದ್ಧಿಸುವಂತೆ ಗುರು ಸಾಧನಶ್ರೀ ಹರಿಸಿದ ನಟುವಾಂಗದ ನಾದಾತ್ಮಕ ಝೇಂಕಾರ ಸನ್ನಿವೇಶದ ಗಾಢತೆಯನ್ನು ಮತ್ತಷ್ಟು ಘನೀಕರಿಸಿತು. ಗೋಪಾಲ ವೆಂಕಟರಮಣರ ಹೃದಯ ಮೀಟುವ ವೀಣಾನಿನಾದ, ಗುರುಮೂರ್ತಿಗಳ ಮೃದಂಗ ಧ್ವನಿಸಾಂಗತ್ಯ, ಜಯರಾಮರ ವೇಣುಗಾನ ಹೃದಯ ಕಲಕಿದರೆ, ಪ್ರಸನ್ನರ ಪೂರಕ ಧ್ವನಿತರಂಗಗಳು ಸಮಗ್ರ ಪರಿಣಾಮಕ್ಕೆ ಕೊಡುಗೆಯನ್ನು ನೀಡಿದವು. ಪ್ರಸ್ತುತಿಯ ಉತ್ತರಾರ್ಧದಲ್ಲಿ – ಶ್ರೀ ಪದ್ಮಚರಣ್ ಪೂರ್ವೀ ಕಲ್ಯಾಣಿ ರಾಗದಲ್ಲಿ ರಚಿಸಿರುವ ‘ಪ್ರದೋಷ ಸಮಯದಿ ಪರಶಿವ ತಾಂಡವ’ ಕೃತಿಯನ್ನು ದೃಶ್ಯವತ್ತಾಗಿ ಕಣ್ಮುಂದೆ ಅನಾವರಣಗೊಳಿಸಿದ ಕಲಾವಿದೆ ನಟರಾಜನ ದಿವ್ಯ ನರ್ತನದ ಮೂಲಕ ಕೈಲಾಸವನ್ನೇ ಭುವಿಗೆ ತಂದಂತೆ ರೋಮಾಂಚಕರ ಅನುಭವವನ್ನು ಸಿಂಚನಗೊಳಿಸಿದಳು. ಕಣ್ಮನಗಳನ್ನು ತುಂಬಿದ ಪರಮೇಶ್ವರನ ದೈವೀಕ ಶಕ್ತಿಶಾಲಿ ಹೆಜ್ಜೆಗಳು- ಹೃದ್ಯ ಯೋಗಭಂಗಿಗಳು, ಮಂಡಿ ಅಡವುಗಳು ವಿಶಿಷ್ಟ ಆನಂದವನ್ನು ಧಾರೆಯೆರೆದವು. ಮೊಳಗಿದ ಮದ್ದಳೆ- ಢಮರುಗದ ಧ್ವನಿತರಂಗಗಳ ಝೇಂಕಾರ ಮೈ ನವಿರೇಳಿಸಿದವು.
ಸಮಾಜದ ವಿಡಂಬನೆಗಳಿಗೆ-ಆಷಾಢಭೂತಿತನ- ಕೃತ್ರಿಮತೆಗೆ ಕನ್ನಡಿ ಹಿಡಿದ ಶ್ರೀ ಪ್ರಸನ್ನ ತೀರ್ಥರ ‘ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ’ – ಮಾರ್ಮಿಕ ಕೃತಿಯ ಒಳಗನ್ನು ಬಯಲಾಗಿಸಿದ ಕಲಾವಿದೆಯ ಸಹಜಾಭಿನಯ ಕಲಾರಸಿಕರ ಹೃದಯವನ್ನು ಮುಟ್ಟಿತು. ಪ್ರಸ್ತುತ ಬದುಕಿಗೆ ಅನ್ವರ್ಥಕವಾಗಿರುವ, ಸಮಾಜದ ಡೋಂಗಿತನಗಳ ನಿಜ ಆಯಾಮವನ್ನು ತೆರೆದಿಡುವ ಕೃತಿಯ ಆಯ್ಕೆ ಮುದನೀಡಿತು. ಮಾರ್ಗಂ ಸಂಪ್ರದಾಯದಂತೆ ಅಂತ್ಯದ ಕೃತಿ ‘ತಿಲ್ಲಾನ’- ರಸ ರೋಮಾಂಚಕಾರಿಯಾಗಿ ಧೃತಿಯ ಪ್ರತಿಭಾಪೂರ್ಣ ನೃತ್ತ-ನೃತ್ಯ ಸಾಮರ್ಥ್ಯದ ನೃತ್ತಾಮೋದ ಮನವರಳಿಸಿತು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.