ಶ್ರೀಕೃಷ್ಣನ ವರ್ಣರಂಜಿತ ಬದುಕಿನ ಪುಟಗಳು ಕಲ್ಪನೆಗೂ ನಿಲುಕದ ವರ್ಣನಾತೀತ ದೃಶ್ಯಕಾವ್ಯ. ಎಲ್ಲ ಕವಿಗಳ ಭಾವಕೋಶವನ್ನು ಆವರಿಸಿಕೊಂಡ ಹೃದ್ಯವ್ಯಕ್ತಿತ್ವ ಅವನದು. ದೈವಸ್ವರೂಪಿಯಾದ ಅವನ ಬದುಕಿನ ಬಣ್ಣದ ಪದರಗಳು ಒಂದೊಂದೂ ರಮ್ಯ-ಚೇತೋಹಾರಿ. ಹೀಗಾಗಿ ಕೃಷ್ಣನ ಬಗ್ಗೆ ಚಿತ್ರಿಸದ ಕೃತಿಕಾರ, ಶಿಲ್ಪಿ ಅಥವಾ ಚಿತ್ರಕಾರರಿಲ್ಲ. ಅಂಥ ವರ್ಣರಂಜಿತ ಕೃಷ್ಣಕಥೆ ಎಂದೆಂದೂ ಬತ್ತದ ಬತ್ತಳಿಕೆ, ಮುಗಿಯದ ಅಕ್ಷಯ ಕಣಜ. ಅಷ್ಟೇ ನವ ನವೋನ್ಮೇಷಶಾಲಿನಿ ಕೂಡ. ಇಂಥ ಒಂದು ಅದ್ಭುತ ವ್ಯಕ್ತಿತ್ವದ ಕೃಷ್ಣನ ಸುತ್ತ ನೃತ್ಯರೂಪಕವನ್ನು ಹೆಣೆದು, ಅಷ್ಟೇ ರಸವತ್ತಾಗಿ ಪ್ರಸ್ತುತಿಪಡಿಸಿದವರು ಅಂತರರಾಷ್ಟ್ರೀಯ ಖ್ಯಾತಿಯ ಒಡಿಸ್ಸಿ ನೃತ್ಯ ಕಲಾವಿದೆ ‘ನೃತ್ಯಾಂತರ’ ಸಂಸ್ಥೆಯ ಗುರು ಮಧುಲಿತಾ ಮಹಾಪಾತ್ರ.
ದಿನಾಂಕ 27-09-2023ರಂದು ನಗರದ ಎ.ಡಿ.ಎ. ರಂಗಮಂದಿರದಲ್ಲಿ ತುಂಬಿದ ಸಭಾಗೃಹದ ಪ್ರೇಕ್ಷಕರೆದುರು ‘ಕಲರ್ಸ್ ಆಫ್ ಕೃಷ್ಣ’ -ನೃತ್ಯರೂಪಕ ಸುಮನೋಹರವಾಗಿ ಅನಾವರಣಗೊಂಡಿತು. ‘ನೃತ್ಯಾಂತರ ಎನ್ಸೆಮ್ಬಲ್’ ಪ್ರದರ್ಶಿಸಿದ ‘ನಮನ್-2023’ – ಕಣ್ಮನ ತುಂಬಿದ ಕೃಷ್ಣನ ಲೀಲಾವಿನೋದಗಳ ಅನೇಕ ರಸಪೂರ್ಣ ಅಂಕಗಳ ನೃತ್ಯಗುಚ್ಚವಾಗಿತ್ತು. ಕೋಮಲ ಚಲನೆಗಳ, ಮೃದುವಾದ ಆಂಗಿಕಾಭಿನಯದ ಅಸ್ಮಿತೆಯುಳ್ಳ ಒಡಿಸ್ಸಿ ನೃತ್ಯ ಶೈಲಿಯೇ ನಯನ ಮನೋಹರ. ಕಲಾವಿದೆಯರ ವಿಶಿಷ್ಟ ವೇಷಭೂಷಣ-ಅಲಂಕಾರ, ಕೇಶವಿನ್ಯಾಸ, ಉಳಿದ ಶಾಸ್ತ್ರೀಯ ನೃತ್ಯಗಳ ಭೂಷಣ, ಆಹಾರ್ಯಕ್ಕಿಂತ ಭಿನ್ನವಾದುದು. ತುರುಬಿನ ಸುತ್ತಲೂ ಪ್ರಭಾವಳಿಯಂತೆ ಕಂಗೊಳಿಸುವ ಬೆಂಡಿನ ಮಲ್ಲಿಗೆಯ ಕಿರೀಟ ಮಾಲೆ, ಕುಸುರಿಗೆಲಸದ ಬೆಳ್ಳಿಯ ಆಭರಣಗಳು, ಹೊಸವಿನ್ಯಾಸದ ಲಂಗ-ಚೋಲಿ, ಪಾರದರ್ಶಕ ಮೇಲುದೆ ವಸ್ತ್ರ ಎಲ್ಲವೂ ಕಣ್ಮನ ತುಂಬುವಂತಿತ್ತು.
ಹಿತವಾದ ಸಂಗೀತದಲೆಯ ಹಿನ್ನಲೆಯಲ್ಲಿ ರಂಗದ ಮೇಲೆ ಸುಮ್ಮಾನದಿಂದ ನರ್ತಿಸುವ ದೀಪಧಾರಿಣಿಯರು, ಗೋಪಿಕೆಯರು, ಯಶೋದೆಯ ಪ್ರೀತಿಯ ಕಂದ ಬಾಲಕೃಷ್ಣನನ್ನು ಅಕ್ಕರೆಯಿಂದ ಮುದ್ದಾಡುವ ದೃಶ್ಯ- ಪುಟಾಣಿ ಕೃಷ್ಣನ ತಪ್ಪುಹೆಜ್ಜೆಗಳ ಲಾಸ್ಯದಿಂದ ಸುಂದರ ನೃತ್ಯನಾಟಕ ಆರಂಭ ಕಂಡಿತು. ಅಲೆಯಂತೆ ರಂಗವಿಡೀ ಪ್ರವಹಿಸುವ ಲಲನೆಯರು, ತೆಳುಹೆಜ್ಜೆಗಳಿಂದ ಬಾಗಿ ಬಳುಕುತ್ತ ಕೃಷ್ಣನೊಡನೆ ಆಡುವುದೇನು.. ಬೆಣ್ಣೆ ತಿನ್ನಿಸುವುದೇನು.. ಅವನ ಸಾಂಗತ್ಯದಲ್ಲಿ ಆನಂದಪಡುವುದೇನು ?… ಬಾಲನ ನಲಿವಿನ ಸಮ್ಮೇಳದಲ್ಲಿ ಎಲ್ಲ ಗೋಪಿಕೆಯರೂ ಮಕ್ಕಳಾಗಿ ಕುಣಿಯುತ್ತಾರೆ. ದಣಿವರಿಯದೆ ಆಡುತ್ತ ನಲಿಯುತ್ತ, ಅವರು ನೋಡು ನೋಡುತ್ತಿದ್ದಂತೆ ಆ ಬಾಲಗೋಪಾಲ ತನ್ನ ತುಂಟ ಚೇಷ್ಟೆಗಳಿಂದ ಅವರನ್ನು ಛೇಡಿಸಿ ಕಾಡುವನು.
ಬೆಣ್ಣೆಪ್ರಿಯ ಕಿಟ್ಟಣ್ಣ, ತನ್ನ ಗೆಳೆಯರ ಗುಂಪನ್ನು ಸೇರಿಸಿಕೊಂಡು ಅಮ್ಮ, ಬದುವಿನ ಮೇಲೆ ಅಡಗಿಸಿಟ್ಟ ಬೆಣ್ಣೆಯ ಗಡಿಗೆಯನ್ನು ಇಳಿಸಿಕೊಂಡು ಅವರಿಗೂ ಕೊಟ್ಟು ತಾನೂ ಸವಿಯುವ ಘಟನೆ, ಹಾದಿಯಲ್ಲಿ ಸಾಗುವ ಗೋಪಿಕೆಯರ ತಲೆಯ ಮೇಲಿನ ಹಾಲು ಮೊಸರುಗಳ ಮಡಕೆಗೆ ಕಲ್ಲು ಹೊಡೆದು ಅವರನ್ನು ಗೋಳಾಡಿಸುವ ಪರಿ ಒಂದೇ-ಎರಡೇ? ಮನೆಯ ತುಂಬಾ ಹರಡಿಬಿದ್ದ ಗಡಿಗೆಯ ಚೂರುಗಳನ್ನು ಕಂಡು ಕುಪಿತಳಾಗುವ ಯಶೋದೆ, ಶಿಕ್ಷಿಸ ಹೊರಟವಳಿಗೆ ಬೆಣ್ಣೆ ಮೆದ್ದ ಗೊಲ್ಲ ಬಾಯ್ತೆರೆದು ಮೂಜಗವ ತೋರಿದ ದೈವೀಕ- ವಿಸ್ಮಯ ದೃಶ್ಯ ಮನನೀಯ.
ಮುಂದೆ ಗೆಳೆಯರೊಡನೆ ಚೆಂಡಿನಾಟವಾಡುತ್ತ ನಂದಗೋಪಾಲ ನದಿಗಿಳಿಯುವನು. ಜನರಿಗೆ ಕಂಟಕವಾಗಿದ್ದ ದುಷ್ಟ ಕಾಳಿಂಗನನ್ನು ಮಣಿಸಿ, ಮರ್ಧಿಸಿ ಅದರ ಬಾಲ ಹಿಡಿದೆತ್ತಿ ನೆತ್ತಿಯ ಮೇಲೆ ನಲಿದು ನರ್ತಿಸುವ ದಿಟ್ಟ ಕೃಷ್ಣ (ಕಲಾವಿದೆ -ಮಧುಲಿತಾ)ನ ಸಾಹಸಕರ ದೃಶ್ಯ ಮೈ ಜುಮ್ಮೆನಿಸಿದರೆ, ಐದು ಹೆಡೆಗಳ ಕಾಳಿಂಗ ರೊಚ್ಚಿನಿಂದ ವೇದಿಕೆಯ ಉದ್ದಗಲಕ್ಕೂ ಮಂಡಿ ಅಡವಿನಲ್ಲಿ ಹರಿದಾಡುವ, ಎತ್ತರಕ್ಕೆ ಹೊರಳಾಡುವ, ಹೆಡೆ ಬಿಚ್ಚಿ, ಉರಿಗಣ್ಣು-ಉರಿನಾಲಗೆಯನ್ನು ಝಳಪಿಸುವ ವಿನ್ಯಾಸವನ್ನು ಐವರು ಕಲಾವಿದೆಯರು ಅಮೋಘವಾಗಿ ಅಭಿನಯಿಸಿದರು.
ಯುವಕೃಷ್ಣನ ತುಂಟಾಟ-ರಸಿಕತೆಗಳನ್ನು ಅನಾವರಣಗೊಳಿಸಿದ ರಾಧಾ-ಕೃಷ್ಣರ ರಮ್ಯ ಶೃಂಗಾರ ಪ್ರಸಂಗ, ಸುಮ್ಮಾನದ ಭೋಗ ಭಂಗಿಗಳು, ಸುಮನೋಹರ ನರ್ತನ, ಪ್ರಿಯೆ ಚಾರುಶೀಲೆಯನ್ನು ಮರುಳುಗೊಳಿಸುವ ಮುರಳೀ ಮಾಧವನ ಸುಶ್ರಾವ್ಯ ವೇಣುಗಾನ, ಪ್ರೇಮಿಗಳ ಪ್ರಣಯದಾಟಗಳ ನಡುವೆ ಆಶೆ-ನಿರಾಶೆ, ಹುಸಿ ಮುನಿಸು-ವಿರಹಗಳ ಪರಿಣಾಮಕಾರಿ ಅಭಿವ್ಯಕ್ತಿಯ ರಸ-ರೋಮಾಂಚದ ನೋಟ ನೋಡುಗರ ಮನಮುಟ್ಟಿತು.
ಕಂಸನ ಆಸ್ಥಾನದಲ್ಲಿ ಚಾಣೂರ ಮಲ್ಲನ ವಧೆ, ಕಂಸ ಸಂಹಾರದ ನಾಟಕೀಯ ದೃಶ್ಯಗಳು ಕಣ್ಮನ ಸೆಳೆದವು. ಯುದ್ಧ ಭೂಮಿಯಲ್ಲಿ, ಅರ್ಜುನನನ್ನು ರಥದಲ್ಲಿ ಕೂರಿಸಿಕೊಂಡು ಬರುವ ಪಾರ್ಥಸಾರಥಿಯ ಸ್ಥಿತಪ್ರಜ್ಞತೆ ಹಾಗೂ ರಣರಂಗದಲ್ಲಿ ಬಂಧು-ಬಾಂಧವರನ್ನು ಕಂಡು ತಲ್ಲಣಗೊಂಡು ಕಾದಲು ಹಿಂಜರಿವ ಪಾರ್ಥನ ಮನಸ್ಸಿಗೆ ಧೈರ್ಯ ತುಂಬುತ್ತ, ಗೀತೋಪದೇಶ ಮಾಡುವ ಹೃದಯಂಗಮ ದೃಶ್ಯದೊಡನೆ ರೂಪಕದ ವಿಹಂಗಮ ನೋಟ ಮನಸ್ಸಿನಾಳಕ್ಕಿಳಿಯಿತು. ಪ್ರತಿಯೊಬ್ಬ ನರ್ತಕಿಯರ ಸೂಕ್ಷ್ಮಾಭಿನಯದ ಮೆರುಗು, ಕಣ್ಮನ ಸೆಳೆವ ಆಂಗಿಕಾಭಿನಯ, ದ್ರವೀಕೃತ ಚಲನೆಗಳು ಮನಸ್ಸಿಗೆ ಮುದನೀಡಿದವು.
– ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.