ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ದಿನಾಂಕ 18 ಫೆಬ್ರವರಿ 2025ರಂದು ಹಂಪಿ ಕನ್ನಡ ವಿ.ವಿ.ಯ ಸಹಭಾಗಿತ್ವದೊಂದಿಗೆ ಭಾಷಾಂತರ ಪ್ರಕ್ರಿಯೆಯ ಕುರಿತಾದ ವಿಚಾರ ಸಂಕಿರಣದ ಸಂದರ್ಭದಲ್ಲಿ ಸಂಜೆಯ ಹೊತ್ತು ಮಂಗಳೂರಿನ ‘ಸೌರಭ ಸಂಗೀತ ನೃತ್ಯ ಶಾಲೆ’ಯ ನೃತ್ಯ ವಿದುಷಿ ಡಾ. ಶ್ರೀವಿದ್ಯಾ ಇವರ ನೇತೃತ್ವದಲ್ಲಿ ಡಾ. ಮೋಹನ ಕುಂಟಾರ್ ರವರ ‘ಲೋಕಾಂತದ ಕಾವು’ ಎಂಬ ಕವನ ಸಂಕಲನದಿಂದ ಆಯ್ದ ಕವಿತೆಗಳನ್ನಾಧರಿಸಿದ ನೃತ್ಯ ಪ್ರದರ್ಶನವಿತ್ತು. ಒಂದು ಗಂಟೆಯ ಕಾಲ ನಡೆದ ಈ ಕಾರ್ಯಕ್ರಮವು ತುಂಬಾ ರಂಜನೀಯವಾಗಿತ್ತು, ಮಾತ್ರವಲ್ಲದೆ ಪ್ರೇಕ್ಷಕರ ಅರಿವಿನ ವ್ಯಾಪ್ತಿಯನ್ನು ವಿಸ್ತರಿಸುವಂತೆಯೂ ಇತ್ತು.
ಎರಡು ಆರಂಭಿಕ ಭಾವಗೀತೆಗಳ ನಂತರ ತಂಡವು ಪ್ರಸ್ತುತ ಪಡಿಸಿದ ‘ಮಹಾಬಲಿ’ ಮತ್ತು ‘ಕೋಟಿ ಪುಣ್ಯ’ ಎಂಬ ರೂಪಕಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಜನಮನದಲ್ಲಿ ಉಳಿಯುವಂತಿದ್ದವು. ‘ಮಹಾಬಲಿ’ ರೂಪಕದಲ್ಲಿ ಮೊದಲಿಗೆ ಮಹಾಬಲಿಯು ಓಣಂ ಹಬ್ಬದ ಕಾಲದ ಕಥೆಯ ಪ್ರಕಾರ ತನ್ನ ಪ್ರಜೆಗಳೆಲ್ಲ ಹೇಗಿದ್ದಾರೆ ಎಂದು ನೋಡಲು ನಾಡಿಗೆ ಬರುತ್ತಾನೆ. ಆದರೆ ಬಂದು ನೋಡಿದಾಗ ಅಲ್ಲೇನಿದೆ? ಬರೇ ಅವ್ಯವಸ್ಥೆಯ ರಾಶಿ. ಹಣಕ್ಕಾಗಿ ಬಾಯಿ ಬಿಡುವ ಮನುಷ್ಯರು, ಕಾಡು ಕಡಿದು ನಾಡಿಗೆ ಸದಾ ಅಪಾಯ ತಂದೊಡ್ಡುವ ಕ್ರೂರ ನಿರ್ಭಾವುಕ ಮಂದಿ, ಕುಡಿದು ತೂರಾಡುವವರು, ಜೂಜಾಟದಲ್ಲಿ ಮುಳುಗಿದವರು, ತಮ್ಮ ತಮ್ಮಲ್ಲೇ ಜಗಳವಾಡಿ ಹೊಡೆದಾಡುವವರು, ಸ್ವಚ್ಚಂದವಾಗಿ ಹರಿಯುವ ನದಿಗಳಿಗೆ ಅಣೆಕಟ್ಟು ಕಟ್ಟಿ ಪ್ರಾಕೃತಿಕ ದುರಂತಗಳನು ಆಹ್ವಾನಿಸಿ ಹೊಲಗಳಲ್ಲಿ ಬೆಳೆದದ್ದನ್ನೆಲ್ಲ ಹಾಳು ಮಾಡಿಕೊಳ್ಳುವ ಮೂರ್ಖರು- ಹೀಗೆ. ಈ ಎಲ್ಲ ವಿಚಾರಗಳನ್ನೂ ನೃತ್ಯಗಾತಿಯರು ಮನಮುಟ್ಟುವಂತೆ ಅಭಿನಯಿಸಿ ತೋರಿಸಿದರು.
ಎರಡನೇ ರೂಪಕ ‘ಕೋಟಿ ಪುಣ್ಯ’ ಒಂದು ಹೊಸ ಪರಿಕಲ್ಪನೆ. ಪುಣ್ಯ ಕೋಟಿಯ ಹಾಗೆ ಇಲ್ಲಿಯೂ ಪಾತ್ರಗಳಾಗಿರುವುದು ಗೊಲ್ಲನಿಗಿಂತ ಭಿನ್ನವಾಗಿ ಹಸಿವಿನಿಂದ ಅಳುತ್ತಿರುವ ಒಂದು ಮಗುವಿನ ತಾಯಿ, ದನ ಕರುಗಳು ಮತ್ತು ಹುಲಿ. ಹುಲಿಯ ಮರಿಯ ಕಲ್ಪನೆ ಮಾತ್ರ ಹೊಸದು. ಪುಣ್ಯ ಕೋಟಿಯಲ್ಲಿರುವ ಹಾಲು-ಹುಲ್ಲುಗಳ ಸಮೃದ್ದಿ ಇಲ್ಲಿಲ್ಲ. ಮಳೆ-ಬೆಳೆಗಳಿಲ್ಲದೆ ಎಲ್ಲೆಡೆ ಬಡತನದ ತಾಂಡವ. ಮಗುವಿಗೆ ಕುಡಿಸಲು ಹಾಲಿಲ್ಲ. ಮೇಯಲು ಹುಲ್ಲಿಲ್ಲದ ತಾಯಿ ದನವು ಮನುಷ್ಯರಿಗೆ ಹಾಲು ಕೊಡಲಾಗದೆ, ಕರುವಿಗೆ ಹಾಲುಣ್ಣಿಸಲಾಗದೆ ದನವು ದೂರ ಹೋಗಿ ಹುಲ್ಲು ಮೇದು ಬರುತ್ತೇನೆಂದು ಹೊರಡುತ್ತದೆ. ಅಲ್ಲಿ ಹುಲಿಯೂ ಅದರ ಮರಿಯೂ ಹಸಿವಿನಿಂದ ಕಂಗೆಟ್ಟ ಸ್ಥಿತಿಯಲ್ಲಿವೆ. ಆದರೆ ದನವು ತನ್ನ ಮರಿಗಾಗಿ ದೈನ್ಯದಿಂದ ಬೇಡಿಕೊಂಡಾಗ ಹುಲಿಯ ಮನಸ್ಸು ಕರಗುತ್ತದೆ. ಅದು ಬಂಡೆಯಿಂದ ಕೆಳಗೆ ಹಾರಿ ಸಾಯುತ್ತದೆ. ದನವು ಹುಲಿಯ ಮರಿಯನ್ನು ತನ್ನ ಜತೆಗೆ ಕರೆದುಕೊಂಡು ಬಂದು ತನ್ನ ಕರುವಿನ ಜತೆಗೆ ಬಿಡುತ್ತದೆ. ಇದು ಬಲವಾನರೂ ಬಲಹೀನರೂ ಆದ ಸಕಲ ಜೀವಜಂತುಗಳೂ ಸಮಾಜದಲ್ಲಿ ಸೌಹಾರ್ದದಿಂದ ಜತೆಯಾಗಿ ಬದುಕುವ ಒಂದು ಆಶಯವನ್ನು ಸೂಚ್ಯವಾಗಿ ವ್ಯಕ್ತಪಡಿಸುತ್ತದೆ. ಹುಲಿಯಲ್ಲಾದ ಪರಿವರ್ತನೆ ತುಸು ಕ್ಷಿಪ್ರವಾದ ಹಾಗೆ ಅನ್ನಿಸಿತು. ಕವಿತೆಯಲ್ಲಿ ಇನ್ನೂ ಸ್ವಲ್ಪ ಹೆಚ್ಚು ವಿವರಗಳಿದ್ದರೆ ಅಭಿನಯಿಸಿ ತೋರಿಸಬಹುದಿತ್ತು.
ಭಾಗವಹಿಸಿದ ಎಲ್ಲ ನೃತ್ಯಗಾತಿಯರು ಸಂದರ್ಭೋಚಿತ ಅಭಿವ್ಯಕ್ತಿ, ಅಭಿನಯ, ಹಾವಭಾವ, ತಾಳ-ಲಯಗಳ ಹೆಜ್ಜೆಗತಿ ಮತ್ತು ಆವರ್ತವಾಗುವ ಅನೇಕ ಸಂಗತಿಗಳೊಂದಿಗೆ ಕಾವ್ಯಕ್ಕೆ ದೃಶ್ಯದ ಮೆರುಗನ್ನಿತ್ತರು. ಮಹಾಬಲಿ, ಹುಲಿ, ತಾಯಿ, ದನಗಳ ಪಾತ್ರಗಳ ನಟನೆ ಅದ್ಭುತವಾಗಿ ಮೂಡಿ ಬಂತು. ಸಂಯೋಜನೆ ಮಾಡಿದ ನಿರ್ದೇಶಕರ ಜಾಣ್ಮೆ ಉದ್ದಕ್ಕೂ ಕಾಣುತ್ತಿತ್ತು. ಹಿಮ್ಮೇಳದಲ್ಲಿ ಪವಿತ್ರಾ ವಿನಯ್ ಮಯ್ಯ ಇವರ ಹಾಡುಗಾರಿಕೆಗೆ ವಿಶೇಷ ಮನ್ನಣೆ ಸಲ್ಲಬೇಕು. ಡಾ. ಶ್ರೀವಿದ್ಯಾರವರ ನಟುವಾಂಗ, ಕೃಷ್ಣ ಗೋಪಾಲ್ ಇವರ ಮೃದಂಗ ಮತ್ತು ಮನೋಹರ ರಾವ್ ಇವರ ಕೊಳಲುಗಳು ಪ್ರದರ್ಶನದ ವಾತಾವರಣವನ್ನು ಸಮರ್ಥವಾಗಿ ಹಿಡಿದಿಟ್ಟ ಅಂಶಗಳು. ಮೊದಲ ಪ್ರದರ್ಶನ, ಅದೂ ಹಗಲು ಬೆಳಕಿನಲ್ಲಿ, ತಾಂತ್ರಿಕ ತೊಂದರೆಗಳ ಮಧ್ಯೆ ನಡೆದದ್ದು ಅನ್ನುವ ಕೆಲವು ದೋಷಗಳನ್ನು ಮುಂದಿನ ಪ್ರದರ್ಶನಗಳಲ್ಲಿ ಸರಿಪಡಿಸಲು ಸಾಧ್ಯವಿದೆ. ಕಾವ್ಯಭಾಷೆಯಿಂದ ದೃಶ್ಯ ಭಾಷೆಗೆ ಭಾಷಾಂತರ ಅನ್ನುವ ಅರ್ಥದಲ್ಲಿ ಇದನ್ನು ಭಾಷಾಂತರ ಕುರಿತಾದ ವಿಚಾರಸಂಕಿರಣದ ಸಂದರ್ಭದಲ್ಲಿ ಹಮ್ಮಿಕೊಂಡದ್ದು ಅರ್ಥ ಪೂರ್ಣವೆನ್ನಿಸಿತು. ಮಿತಿಗಳ ನಡುವೆಯೂ ಒಂದು ಉತ್ತಮ ಪ್ರದರ್ಶನವನ್ನಿತ್ತ ಸೌರಭ ಸಂಗೀತ ನೃತ್ಯ ಶಾಲೆಯ ಎಲ್ಲ ಕಲಾವಿದೆಯರಿಗೆ ಅಭಿನಂದನೆಗಳು.
ವಿಮರ್ಶಕಿ ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು