ನೃತ್ಯ ಕಲಾವಿದ/ ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತ ಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು. ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕ್ರಿಯಾತ್ಮಕ ಕಲಾವಿದ/ಕಲಾವಿದೆಯರು ನಮ್ಮ ನಡುವೆ ಹಲವರಿದ್ದಾರೆ.
ಮುಖ್ಯವಾಗಿ ನನ್ನ ತವರೂರು ಕರಾವಳಿ ಕರ್ನಾಟಕದ ಬಗ್ಗೆ ಅವಲೋಕಿಸುವುದಾದರೆ, ನೃತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಹಲವಾರು ವಿಭಿನ್ನ ಸಾಧನೆಯನ್ನು ಮಾಡುತ್ತಾ ಬರುತ್ತಿದೆ. ಮಹಾಗುರುಗಳಾದ ಶಾಂತಲಾ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಶ್ರೀ ಉಳ್ಳಾಲ ಮೋಹನ ಕುಮಾರ್ ಇವರು ಭರತನಾಟ್ಯ ಕಲೆಯನ್ನು ಕರಾವಳಿಯಲ್ಲಿ ಸೃಷ್ಟಿಸಿ ನೃತ್ಯವನ್ನು ಹಲವರಿಗೆ ಧಾರೆ ಎರೆದ ಮಹಾನುಭಾವರು. ಅವರಂತೆಯೇ ಪುತ್ತೂರಿನಲ್ಲಿ ನೃತ್ಯ ಕ್ಷೇತ್ರವನ್ನು ಗಟ್ಟಿಯಾಗಿ ಬೆಳೆಸಿ, ಅನೇಕ ನೃತ್ಯ ಕಲಾವಿದ/ಕಲಾವಿದೆಯರನ್ನು ರೂಪಿಸಿದ ಗರಿಮೆ ಕೀರ್ತಿಶೇಷ ಕರ್ನಾಟಕ ಕಲಾತಿಲಕ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ ಮತ್ತು ಅವರ ಧರ್ಮಪತ್ನಿ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈಯವರಿಗೆ ಸಲ್ಲುತ್ತದೆ. ನೃತ್ಯ ಕ್ಷೇತ್ರವನ್ನೇ ಉಸಿರಾಗಿಸಿಕೊಂಡಿರುವ ಇವರ ಅನೇಕ ಶಿಷ್ಯರು, ನೃತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ, ಪೀಳಿಗೆಯಿಂದ ಪೀಳಿಗೆಗೆ ಈ ದೈವಿಕ ಕಲೆಯನ್ನು ನಿರಂತರವಾಗಿ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತಿದ್ದಾರೆ.
ಮಹಾಗುರುಗಳ ಶಿಷ್ಯವರ್ಗದಲ್ಲಿ ಅಗ್ರಪಂಕ್ತಿಯ ಸ್ಥಾನದಲ್ಲಿರುವ ಓರ್ವ ಸಾಧಕ ಶಿಷ್ಯೆ ಗುರು ವಿದುಷಿ ವಿದ್ಯಾ ಮನೋಜ್. ಇವರು 2001ರಲ್ಲಿ ಕರಾವಳಿಯ ಬೆಳ್ತಂಗಡಿಯಲ್ಲಿ ‘ಕಲಾ ನಿಕೇತನ’ ಎಂಬ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಪುಟ್ಟ ಸಸಿಯಾಗಿದ್ದ ಆ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು, ಅನೇಕರಿಗೆ ಆಶ್ರಯವನ್ನು ನೀಡುತ್ತಿದೆ. ‘ಕಲಾ ನಿಕೇತನ’ ಸಂಸ್ಥೆಯು ಇದೇ ನವೆಂಬರ್ ತಿಂಗಳಲ್ಲಿ 24 ವರ್ಷಗಳನ್ನು ಪೂರೈಸಿ 25ನೇ ವರ್ಷದತ್ತ ಮುನ್ನುಡಿ ಬರೆಯುತ್ತಿದೆ.
ವಿದ್ಯಾ ಮನೋಜ್ ಇವರ 24 ವರ್ಷಗಳ ನೃತ್ಯಸೇವೆ ಪರಿಣಾಮಕಾರಿಯಾಗಿ ಸಾಗುವುದಕ್ಕೆ ಸಾಕ್ಷಿಗಳೇ ಅವರ ಏಳು ಪ್ರತಿಭಾವಂತ ವಿದ್ಯಾರ್ಥಿಗಳು ಈಗಾಗಲೇ ರಂಗಪ್ರವೇಶವನ್ನು ಪೂರೈಸಿರುವುದು ಮತ್ತು ಎಂಟನೆಯ ನೃತ್ಯ ರಂಗಾಭಿವಂದನೆ ಇದೇ ಫೆಬ್ರವರಿ ತಿಂಗಳ 15ರಂದು ಕಲಾನಿಕೇತನದ ಹೆಮ್ಮೆಯ ವಿದ್ಯಾರ್ಥಿನಿ ಶಾಶ್ವತ ತಾರಾನಾಥ್ ಇವರಿಂದ ಬೆಳ್ತಂಗಡಿಯ ಆಶಾ ಸಾಲಿಯನ್ ಕಲ್ಯಾಣ ಮಂಟಪದಲ್ಲಿ ಜರುಗಿರುವುದು.
ದೀಪ ಪ್ರಜ್ವಲನ, ನಟರಾಜ ಪೂಜೆ, ಗೆಜ್ಜೆ ಪೂಜೆಯಂತಹ ಸಾಂಪ್ರದಾಯಿಕ ಕ್ರಮಗಳಿಂದ ಆರಂಭವಾದ ರಂಗಪ್ರವೇಶವು ಮಾರ್ಗ ಬಂಧಗಳ ಪ್ರದರ್ಶನಕ್ಕೆ ಅಣಿಯಾಯಿತು. ಕಾರ್ಯಕ್ರಮದ ಮೊದಲ ನೃತ್ಯ ಬಂಧ ಪುಷ್ಪಾಂಜಲಿ. ನಾನೇ ರಚಿಸಿದ ರೀತಿಗೌಳ ರಾಗ ಮತ್ತು ಆದಿ ತಾಳದ ಪುಷ್ಪಾಂಜಲಿಯನ್ನು ವಿಭಿನ್ನ ಲೆಕ್ಕಾಚಾರದೊಂದಿಗೆ ಕಲಾವಿದೆ ನರ್ತಿಸಿದರು. ಇದರಲ್ಲಿ ಅಳವಡಿಸಿದ ಅಡವುಗಳು ಲೆಕ್ಕಾಚಾರಕ್ಕೆ ಒಪ್ಪುವಂತೆ ಇದ್ದು, ನೃತ್ಯವನ್ನು ಗೆಲ್ಲಿಸಿತು.
ಎರಡನೇ ನೃತ್ಯಬಂಧವಾಗಿ ಅಲರಿಪು. ಸಾಮಾನ್ಯವಾಗಿ ತಿಶ್ರ, ಖಂಡ, ಮಿಶ್ರ ಅಲರಿಪುಗಳನ್ನೇ ಜಾಸ್ತಿಯಾಗಿ ಪ್ರದರ್ಶನದಲ್ಲಿ ನರ್ತಿಸುವುದನ್ನು ನೋಡಿದ್ದೆ. ಆದರೆ ಇತ್ತೀಚಿಗೆ ವಿಭಿನ್ನ ಸುಳಾಧಿ ತಾಳಗಳಲ್ಲಿ ವಿಶಿಷ್ಟ ಸಂಯೋಜನೆಯ ಅಲರಿಪುಗಳನ್ನೂ ಸಹ ನೋಡಿದ್ದೇನೆ. ಇದೊಂದು ಧನಾತ್ಮಕ ಬೆಳವಣಿಗೆ. ಶಾಶ್ವತ ಅವರ ರಂಗಪ್ರವೇಶದಲ್ಲಿ ಚತುರಶ್ರ ಜಾತಿ ಅಟ್ಟತಾಳದ ಅಲರಿಪು. ಸಾಹಿತ್ಯ ಬ್ರಹ್ಮ ಶ್ರೀ ಮಧುರೈ. ಆರ್. ಮುರಳೀಧರನ್ ಇವರ ರಚನೆಯ ಅಲಾರಿಪುವನ್ನು ಬಳಸಿದ್ದು, ಸಮರ್ಥವಾಗಿ ನಿರ್ವಹಿಸಿದರು. ನಾನು ಬೇರೆ ಬೇರೆ ತಾಳಗಳಲ್ಲಿ ಅಲರಿಪು ರಚಿಸಿರುವುದರಿಂದ ನನಗಿಲ್ಲಿ ಇಷ್ಟವಾದ ಕೆಲವೊಂದು ಅಂಶಗಳನ್ನು ಹಂಚಿಕೊಳ್ಳಲೇಬೇಕು -ಗುರು ವಿದ್ಯಾ ಮನೋಜ್ ಇವರ ಸಮರ್ಥ ನಟ್ಟುವಾಂಗ ನಿರ್ವಹಣೆ ಜೊತೆಗೆ ಪರಿಪೂರ್ಣ ಉಚ್ಚಾರಣೆಗಳು, ಮುಖ್ಯವಾಗಿ ಮೂರನೇ ಕಾಲದಲ್ಲಿನ ಉಚ್ಚಾರವು ಸಮದಲ್ಲಿ ಇಲ್ಲದೇ ಸಾಗಿದಾಗಲೂ ಅದನ್ನು ಅಷ್ಟೇ ಅದ್ಭುತವಾಗಿ ಉಚ್ಚರಿಸಿದ್ದು ಮತ್ತು ಕಲಾವಿದೆ ಶಾಶ್ವತ, ಗುರುಗಳು ಮಾಡಿದ್ದ ಕಷ್ಟದಾಯಕವಾದ ನೃತ್ಯ ಸಂಯೋಜನೆಯನ್ನು ಅಷ್ಟೇ ಆತ್ಮವಿಶ್ವಾಸದಿಂದ ಪ್ರಸ್ತುತ ಪಡಿಸಿದ್ದು ಗುರುಶಿಷ್ಯೆಯ ಮಧ್ಯೆ ಇದ್ದ ನೃತ್ಯ ಸಂಸ್ಕಾರವನ್ನು ತಿಳಿಸಿಕೊಟ್ಟಿತು.
ಮುಂದೆ ಮೂರನೇ ನೃತ್ಯಬಂಧವಾಗಿ ಶಬ್ದಂ. ನಮ್ಮ ಕರಾವಳಿಯ ಬಹುಮುಖ ಪ್ರತಿಭೆಯ ಕಲಾವಿದೆ ಗುರು ವಿದುಷಿ ಸುಮಂಗಲ ರತ್ನಾಕರ್ ಅವರ ರಚನೆ. ರಾಗಮಾಲಿಕೆ ಹಾಗೂ ಮಿಶ್ರಛಾಪು ತಾಳದ ಸಂಯೋಜನೆಯಲ್ಲಿ, ಗಣಪತಿಯ ಹಿರಿಮೆ ಗರಿಮೆ, ಆತನ ಜನನದಿಂದ ಪ್ರಾರಂಭವಾದ ಸಂಚಾರಿಯು ಅವನ ಮಹಿಮೆ, ಭಕ್ತರಿಗೆ ನೀಡುವ ಅಭಯ ಇತ್ಯಾದಿ ಅಂಶಗಳನ್ನು ಒಳಗೊಂಡ ಸಾಹಿತ್ಯವು ಇದರಲ್ಲಿದ್ದು, ಪದಗಳ ಸ್ಪಷ್ಟ ಜೋಡಣೆಯ ಸಾಹಿತ್ಯ ಮತ್ತು ಆಳವಾದ ಸಾಹಿತ್ಯಕ್ಕೆ ನ್ಯಾಯ ಒದಗಿಸುವಲ್ಲಿ ಕಲಾವಿದೆ ಮತ್ತು ವಿದ್ಯಾ ಮನೋಜ್ ಅವರು ಯಶಸ್ವಿಯಾದರು. ಗಣಪತಿಯ ಜನನ, ಪರಶಿವನ ಕೋಪ, ಆನೆ ಮೊಗವನ್ನು ಧರಿಸಿದ ಗಣಪ ಹೀಗೆ ಅಭಿನಯದ ಪ್ರತಿ ಹಂತದಲ್ಲಿಯೂ ಕಲಾವಿದೆ ಪರಕಾಯ ಪ್ರವೇಶಕ್ಕೆ ಇಳಿದಿದ್ದು ಕಲಾ ರಸಿಕರಿಗೆ ಕಥೆಯ ನೈಜ ಚಿತ್ರಣವನ್ನು ನೀಡಿತು.
ಮುಂದಿನ ನೃತ್ಯವಾಗಿ ಪದವರ್ಣ. ಭರತನಾಟ್ಯದಲ್ಲಿ ಅತ್ಯಂತ ಪ್ರಮುಖ ಭಾಗವೇ ಪದವರ್ಣ. ಕಲಾವಿದೆಯ ಗುಣಮಟ್ಟವನ್ನು ಪರಿಣಾಮಕಾರಿಯಾಗಿ ಎಲ್ಲರೆದುರು ತೆರೆದಿಟ್ಟು, ಉತ್ತಮ ಕಲಾವಿದೆ ಎಂಬ ಪಟ್ಟವನ್ನು ಎಲ್ಲರಿಂದಲೂ ಪಡೆದುಕೊಳ್ಳಲು ಇಲ್ಲಿ ಉತ್ತಮ ಅವಕಾಶ ಇರುತ್ತದೆ. ಕಲಾವಿದೆ ಆಯ್ದುಕೊಂಡ ಪದವರ್ಣವು ಮಿಶ್ರ ಶಿವರಂಜನಿ ರಾಗ ಮತ್ತು ಆದಿ ತಾಳದಲ್ಲಿದ್ದು, ಶ್ರೀ ಟಿ.ಆರ್. ಸುಬ್ರಮಣಿಯಂ ಇವರಿಂದ ರಚಿಸಲ್ಪಟ್ಟದ್ದಾಗಿದೆ. ಮದುರೈ ಮೀನಾಕ್ಷಿ ಅಮ್ಮನ ಗುಣಗಾನವಿರುವ ಭಕ್ತಿ ಪ್ರಧಾನವಾದ ಸಾಹಿತ್ಯ. ಮೀನಾಕ್ಷಿದೇವಿ ಮೀನಿನ ಕಣ್ಣುಳ್ಳವಳು, ಬಾಲ್ಯದಲ್ಲೇ ಯುದ್ಧ ಕಲಿತು ಪರಾಕ್ರಮಕ್ಕೆ ಹೆಸರಾದವಳು. ಅಂತಹ ಮಹಿಮೆಯುಳ್ಳ ದಾಕ್ಷಾಯಿಣಿ ತಾಯಿ ನಮ್ಮೆಲ್ಲರನ್ನೂ ಸಲಹು, ಗಣಪತಿ ಸ್ಕಂದರಿಗೆ ಮಾತೃ ವಾತ್ಸಲ್ಯ ನೀಡಿದ ನೀನು ನಮ್ಮೆಲ್ಲರ ಪೊರೆದು ಕಾಪಾಡು ಎಂಬ ಭಕ್ತಿಯ ಪರಾಕಷ್ಟೆಯನ್ನು ಸಾಹಿತ್ಯವಸ್ತುವಾಗಿ ಇರಿಸಿದ ಈ ಪದವರ್ಣದಲ್ಲಿ ನನಗೆ ಇಷ್ಟವಾದ ಅಂಶಗಳು – ಮೊದಲನೆಯದಾಗಿ ನಾಯಿಕ ಭಾವವಿಲ್ಲದೇ ಭಕ್ತಿಯ ಕಥಾವಸ್ತುವನ್ನು ವರ್ಣದಲ್ಲಿ ತರುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದರು. ವರ್ಣದಲ್ಲಿ ಅಳವಡಿಸಿದ್ದ ಐದು ಜತಿಗಳನ್ನು ಮೃದಂಗ ವಾದಕರಾದ ಶ್ರೀ ಕಾರ್ತಿಕ್ ವೈದಾತ್ರಿ ಅವರು ಸಂಯೋಜಿಸಿದ್ದು ಬಹಳ ಉತ್ತಮವಾಗಿತ್ತು. ಇದರಲ್ಲಿ ಎರಡನೇ ಜತಿಯಂತೂ ‘ವಾವ್’ ಎನ್ನುವಂತಿತ್ತು. ಗೋಪುಚ್ಚ ಯತಿಯ ಮಾದರಿಯಲ್ಲಿ ಸಾಗುವ ಶೊಲ್ಲುಕಟ್ಟುಗಳ ಲೆಕ್ಕಾಚಾರ ಮತ್ತು ಅದಕ್ಕೆ ಸರಿಸಮಾನಾದ ವಿಭಿನ್ನ ಲೆಕ್ಕಾಚಾರ ಇರುವಂತಹ ನೃತ್ಯ ಸಂಯೋಜನೆ. ಇದರ ಜೊತೆಗೆ ಜತಿಗಳನ್ನು ವಾವ್ ಎನಿಸುವಂತೆ ಉಚ್ಚರಿಸಿದ ಗುರು ವಿದ್ಯಾ ಮನೋಜ್ ಜತಿ ಮುಗಿದ ಪ್ರತಿ ಬಾರಿಯೂ ಪ್ರೇಕ್ಷಕರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ವರ್ಣದಲ್ಲಿ ನಾ ಕಂಡಂತೆ ಕಲಾವಿದೆ ಬಳಸಿಕೊಂಡ ಅಡವುಗಳು ಕ್ರಿಯಾತ್ಮಕವಾಗಿತ್ತು. ರಂಗವನ್ನು ಪೂರ್ಣವಾಗಿ ವಿಸ್ತರಿಸಲು ನೃತ್ಯ ಸಂಯೋಜನೆಯಲ್ಲಿ ಬಹಳಷ್ಟು ಅವಕಾಶ ಇತ್ತು. ಅದನ್ನು ಕಲಾವಿದೆ ಚೆನ್ನಾಗಿ ಬಳಸಿಕೊಂಡರು.
ವರ್ಣದ ನಂತರ ಸಣ್ಣದಾದ ಸಭಾ ಕಾರ್ಯಕ್ರಮವು ಗುರು ಶಿಷ್ಯ ಪರಂಪರೆಯ ಹಲವಾರು ಸಾಂಪ್ರದಾಯಿಕ ಭಾಗಗಳನ್ನು ಒಳಗೊಂಡು, ಅತಿಥಿಗಳ ಮೆಚ್ಚುಗೆಯ ನುಡಿಗಳೊಂದಿಗೆ ಸುಸಂಪನ್ನವಾಯಿತು.ಕಾರ್ಯಕ್ರಮದ ಉತ್ತರಾರ್ಧದಲ್ಲಿ ಶ್ರೀ ರಾಗದ ಖಂಡಛಾಪು ತಾಳದಲ್ಲಿ ಶ್ರೀ ಅನ್ನಮಾಚಾರ್ಯ ಅವರ ರಚನೆಯ ಕೀರ್ತನೆಯಲ್ಲಿ ತಿರುಪತಿ ಸ್ವಾಮಿ ಶ್ರೀವೆಂಕಟೇಶನ ಗುಣಗಾನ,ಆತನ ಮಹಿಮೆಗಳ ಚಿತ್ರಣವು ಕಲಾವಿದೆಯ ಅಭಿನಯದ ಚಾತುರ್ಯತೆಯನ್ನು ಎತ್ತಿ ಹಿಡಿಯಿತು.ಆಕೆಯ ಆತ್ಮವಿಶ್ವಾಸದ ಪ್ರಮಾಣವು ಇಮ್ಮಡಿಯಾಗಿದ್ದು ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
ಇದರ ಬಳಿಕ ಅಭಿನಯಕ್ಕಾಗಿಯೇ ನೃತ್ಯದಲ್ಲಿ ಬಳಸಲ್ಪಡುವ ಬಂಧ ಪದಂ ನರ್ತಿಸಲಾಯಿತು. ಕವಿ ಕುಂಜರ ಭಾರತೀ ಅವರ ರಚನೆಯ ಕಲ್ಯಾಣಿ ರಾಗದ ಈ ಪದಂ ಮಿಶ್ರಛಾಪು ತಾಳದಲ್ಲಿ ರೂಪುಗೊಂಡಿದ್ದು, ಇಲ್ಲಿ ನಾಯಿಕ ವಕ್ರೋಕ್ತಿ ಗರ್ವಿತ ಖಂಡಿತಾ. ನಾಯಕ ಸ್ಕಂದನನ್ನು ವ್ಯಂಗ್ಯ ಮಾಡುತ್ತಾ, ಆತನ ಎಲ್ಲಾ ಕ್ರಿಯೆಗಳನ್ನು ಖಂಡಿಸುವ ಪದಂನಲ್ಲಿ ಕಲಾವಿದೆ ಶಾಶ್ವತ ಅವರ ಪೂರ್ಣ ಪ್ರಮಾಣದ ಅಭಿನಯ ವ್ಯಕ್ತವಾಯಿತು. ಆಕೆಗೆ ಖಂಡಿತಾ ನಾಯಿಕೆಯ ಅಭಿನಯ ಹೇಳಿ ಮಾಡಿಸಿದಂತೆ ಕಂಡಿತು. ನಾಯಕನನ್ನು ಕೊನೆಗೂ ಒಪ್ಪಿಕೊಳ್ಳದ ನಾಯಿಕೆ ಆತನನ್ನು ತನ್ನ ವ್ಯಂಗ್ಯ ಮಾತುಗಳಿಂದ ಖಂಡಿಸಿ ಮಾತನಾಡುತ್ತ ತನ್ನ ಮನಸ್ಸಿನ ಕಠೋರತೆಯನ್ನು ತೋರಿಸಿದ ಭಾವಗಳು ನಿಜಕ್ಕೂ ಅದ್ಭುತ. ಇದರ ನೃತ್ಯ ಸಂಯೋಜನೆಯನ್ನು ಕರ್ನಾಟಕ ಕಲಾಶ್ರೀ ಶ್ರೀ ಪ್ರವೀಣ್ ಕುಮಾರ್ ಬೆಂಗಳೂರು ಅವರು ಮಾಡಿದ್ದರು. ಕಾರ್ಯಕ್ರಮದ ಕೊನೆಯ ಭಾಗ ಅಮೃತವರ್ಷಿಣಿ ರಾಗ ಆದಿ ತಾಳದ ತಿಲ್ಲಾನ. ಶ್ರೀ ಮಧುರೈ ಮುರಳೀಧರನ್ ಅವರ ರಚನೆ. ತಿಲ್ಲಾನವು ಸಾಮಾನ್ಯವಾಗಿ ತುಸು ರಭಸವಾಗಿಯೇ ಇರುತ್ತದೆ. ಇಲ್ಲಿ ಕೈ, ಕಾಲಿನ ಚಲನೆಗಳಿಗೆ ವಿವಿಧ ಬಗೆಯ ಜಾತಿ, ಅಂತೆಯೇ ಗತಿ ಲೆಕ್ಕಾಚಾರಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಗುರು ವಿದ್ಯಾ ಮನೋಜ್ ಅವರು ಮಾಡಿಕೊಂಡ ಲೆಕ್ಕಾಚಾರಗಳು ತಿಲ್ಲಾನಕ್ಕೆ ಹೇಳಿ ಮಾಡಿಸಿದಂತೆ ಇತ್ತು. ಕೋರ್ವೆಗಳು ಸರಳವಾಗಿ ಕಂಡರೂ, ಹುದುಗಿಕೊಂಡದ್ದ ಲೆಕ್ಕಾಚಾರವು ಕಲಾವಿದೆಯನ್ನು ಗೆಲ್ಲಿಸಿತು. ಮಂಗಳಂನೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ರಂಗಪ್ರವೇಶ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪ್ರಜ್ವಿತ್ ರೈ ಮತ್ತು ಯುವ ನೃತ್ಯ ಕಲಾವಿದೆ ವಿದುಷಿ ಡಾ. ಮಹಿಮಾ ಪಣಿಕ್ಕರ್ ಇವರು ಸಮರ್ಥವಾಗಿ ನಿರ್ವಹಿಸಿದರು. ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದ ಇನ್ನೊಂದು ಮುಖ್ಯ ಅಂಶವನ್ನು ಉಲ್ಲೇಖಿಸಲೇಬೇಕು. ಅದುವೇ ಸಮರ್ಥ ಹಿಮ್ಮೇಳ ಕಲಾವಿದರ ಕೈಚಳಕ ರಂಗಪ್ರವೇಶದ ಯಶಸ್ಸಿಗೆ ಸಾಕ್ಷಿಯಾಯಿತು. ಹಾಡುಗಾರಿಕೆಯಲ್ಲಿ ವಿದ್ವಾನ್ ನಂದಕುಮಾರ್ ಉನ್ನಿಕೃಷ್ಣನ್ ಬೆಂಗಳೂರು, ನಟುವಾಂಗದಲ್ಲಿ ಗುರು ಶ್ರೀಮತಿ ವಿದ್ಯಾ ಮನೋಜ್, ಮೃದಂಗದಲ್ಲಿ ಬೆಂಗಳೂರಿನ ಶ್ರೀ ಕಾರ್ತಿಕ್ ವೈದಾತ್ರಿ ಮತ್ತು ಕೊಳಲಿನಲ್ಲಿ ಶ್ರಿ ನಿತೇಶ್ ಅಮ್ಮಣ್ಣಾಯ ಹಾಗೂ ವೀಣೆಯಲ್ಲಿ ಶ್ರೀ ಪ್ರಶಾಂತ್ ರುದ್ರಪಟ್ಟಣ ಇವರುಗಳು ಕಲಾವಿದೆಯ ನೃತ್ಯ ಪ್ರಾವಿಣ್ಯತೆಗೆ ಅದ್ಭುತವಾದ ಸಾಥ್ ನೀಡಿದರು.
ಒಟ್ಟಿನಲ್ಲಿ ರಂಗಪ್ರವೇಶ ಕಾರ್ಯಕ್ರಮವು, ಕಲಾ ನಿಕೇತನ ಸಂಸ್ಥೆಗೆ ನೃತ್ಯದ ಬಗ್ಗೆ ಇರುವ ಬದ್ಧತೆ, ಶಿಸ್ತು ಮತ್ತು ಪ್ರಾಯೋಗಿಕ ಜ್ಞಾನವನ್ನು ಶಾಶ್ವತ ಅವರ ಮೂಲಕ, ಹಲವಾರು ವರುಷಗಳ ನೃತ್ಯ ಪಯಣದ ವಿವಿಧ ಮಜಲುಗಳನ್ನು ಶಿಲ್ಪಿ ತನ್ನ ಸುಂದರ ಕಲಾಕೃತಿಯಲ್ಲಿ ಕೆತ್ತಿದಂತೆ, ಸುಂದರ ನೃತ್ಯ ಕಲಾಕೃತಿಗಳನ್ನು ತನ್ನ ಮಾರ್ಗ ಬಂಧಗಳ ಮುಖೇನ ಪರಿಚಯಿಸಿ, ಅನೇಕರನ್ನು ನೃತ್ಯದತ್ತ ಆಕರ್ಷಿಸಿತು ಮತ್ತು ಕಲಾ ರಸಿಕರ ಕಂಗಳಿಗೆ ದೈವಿಕ ಆನಂದವನ್ನು ನೀಡಿತು.
– ವಿದ್ವಾನ್ ಮಂಜುನಾಥ ಎನ್. ಪುತ್ತೂರು.