ಅರಸೀಕೆರೆ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅರಸೀಕೆರೆ ತಾಲೂಕು ಘಟಕದ ವತಿಯಿಂದ ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಹಮ್ಮಿಕೊಂಡಿದ್ದ ದಸರಾ ಉತ್ಸವ ಕಾರ್ಯಕ್ರಮವು ದಿನಾಂಕ 22 ಸೆಪ್ಟೆಂಬರ್ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ “ಇಡೀ ಜಗತ್ತು ಧರ್ಮಾಧತೆಯ ತೊಳಲಾಟದಲ್ಲಿ ಮನುಷ್ಯ ಪ್ರೀತಿಯನ್ನು ಮರೆತು ಧ್ವೇಷಾಸೂಯೆಯ ದಳ್ಳುರಿಯಲ್ಲಿ ಬೇಯುತ್ತಿದೆ. ವರ್ತಮಾನದ ಜಗತ್ತಿಗೆ ಬಸವಣ್ಣ ಹಾಗೂ ಕುವೆಂಪುರವರ ವಿಶ್ವಮಾನವ ತತ್ವ ಸಾರುವಂತಹ ಸಾಮರಸ್ಯದ ಸಾಹಿತ್ಯ ಅಗತ್ಯವಿದೆ. ಸಾಹಿತ್ಯ ಸಾಮಾಜಿಕ ತಲ್ಲಣಗಳಿಗೆ ಧ್ವನಿಯಾಗಬೇಕು. ಪ್ರತಿ ಬರಹಗಾರನೂ ನಮ್ಮ ಸಾಹಿತ್ಯ ಪರಂಪರೆಯನ್ನು ಅರಿಯಬೇಕು. ನಾವು ಸೃಜಿಸುವ ಸಾಹಿತ್ಯ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಮೌಲ್ಯಗಳನ್ನು ಕಟ್ಟಿಕೊಡಬೇಕು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟಿರುವುದೇ ಎಲೆಮರೆ ಕಾಯಿಯಂತಹ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಹಾಗೂ ಯುವ ಜನತೆಯಲ್ಲಿ ನಾಡು-ನುಡಿ ಸಾಧಕರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಎಂಟು ವರ್ಷಗಳ ಹಿಂದೆ ಹಾಸನದಲ್ಲಿ ಪ್ರಾರಂಭವಾದ ವೇದಿಕೆ ಇಂದು ಇಡೀ ಕರ್ನಾಟಕವಲ್ಲದೆ ಮಹಾರಾಷ್ಟ್ರ, ಆಂದ್ರಪ್ರದೇಶ, ಕೇರಳ, ಗೋವಾ ಸೇರಿದಂತೆ ದುಬೈ, ಅಮೇರಿಕಾಗಳಲ್ಲೂ ನಮ್ಮ ವೇದಿಕೆ ಕಾರ್ಯೋನ್ಮುಖವಾಗಿದೆ. ಅರಸೀಕೆರೆಯಲ್ಲಿ ಮೊದಲಿನಿಂದಲೂ ನಮ್ಮ ವೇದಿಕೆ ಬಹಳ ಮೌಲ್ಯಯುತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಅರಸೀಕೆರೆ ಹಲವು ವೈವಿದ್ಯಮಯ ಪ್ರತಿಭೆಗಳನ್ನು ಹುಟ್ಟುಹಾಕಿದಂತಹ ನೆಲೆವೀಡು. ಈ ಮಣ್ಣು ತನ್ನದೇ ಆದ ಭವ್ಯ ಪರಂಪರೆಯನ್ನು ಹೊಂದಿದೆ. ಕ್ರಿಯಾಶೀಲ ತಾಲೂಕು ಅಧ್ಯಕ್ಷರಾದ ಕೆ.ಎಸ್. ಮಂಜುನಾಥ್ ಪಂಡಿತ್ ಅವರ ಸೃಜನಶೀಲ ಸಂಘಟನಾತ್ಮಕತೆಯಲ್ಲಿ ಹಲವು ಹೊಸ ಮುಖಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ತಾಲೂಕು ಅಧ್ಯಕ್ಷರಾದ ಕೆ.ಎಸ್. ಮಂಜುನಾಥ್ ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ ಎನ್ನುವ ಅನಕೃರವರ ನುಡಿಯಂತೆ ಕನ್ನಡಾಭಿಮಾನದ ಉನ್ನತೀಕರಿಸುವ ಹಿನ್ನೆಲೆಯಲ್ಲಿ ನಾಡು ನನಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ನಾಡು-ನುಡಿಗಾಗಿ ನಾನೇನು ಕೊಟ್ಟಿದ್ದೇನೆ ಎನ್ನುವುದು ಬಹಳ ಮುಖ್ಯ. ನೆಲ, ಜಲಕ್ಕಾಗಿ ಕೈಲಾದಮಟ್ಟಿಗೆ ಸೇವೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಮಗೆ ಸುವರ್ಣಾವಕಾಶವನ್ನು ನೀಡಿದೆ. ನಮ್ಮ ತಾಲೂಕು ಸಮಿತಿಯ ಪ್ರತಿ ಪದಾಧಿಕಾರಿಗಳು ನಿಸ್ವಾರ್ಥಭಾವದಿಂದ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಘಟಿಸಲು ಸಹಕಾರಿಯಾಗಿದೆ” ಎಂದರು.
ವೇದಿಕೆಯಲ್ಲಿ ರಾಜ್ಯ ಕೋಶಾಧ್ಯಕ್ಷರಾದ ಎಚ್.ಎಸ್. ಬಸವರಾಜ್ ಮುಖ್ಯ ಅತಿಥಿಯಾಗಿ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪ್ರೀತಿಯ ಬಾಂಧವ್ಯ ತುಂಬಿದ ಮನೆ. ನಾವೆಲ್ಲಾ ಒಂದೇ ಕುಟುಂಬ ಸದಸ್ಯರು. ನಾವೆಲ್ಲಾ ಕನ್ನಡ ಸೇವಕರು. ವೇದಿಕೆ ಈಗಾಗಲೇ ಸಕಲೇಶಪುರದಲ್ಲಿ ಹಾಡ್ಲಹಳ್ಳಿ ನಾಗರಾಜ್ ಹಾಗೂ ಬಾನು ಮುಸ್ತಾಕ್ ಇವರ ಸಾರಥ್ಯದಲ್ಲಿ ಅಖಿಲ ಕರ್ನಾಟಕ ಪ್ರಥಮ ಸಮ್ಮೇಳನ, ಬೀದರಲ್ಲಿ ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ, ಕೆ. ನೀಲಾ, ವಸಂತ ಕುಷ್ಟಗಿ ಸಾರಥ್ಯದಲ್ಲಿ ದ್ವಿತೀಯ ಸಮ್ಮೇಳನ, ವಿಜಯಪುರದ ಬಸವನ ಬಾಗೇವಾಡಿಯಲ್ಲಿ ಡಾ. ವಸುಂಧರ ಭೂಪತಿ, ಬಿ.ಟಿ. ಲಲಿತ ನಾಯಕ್ ಸಾರಥ್ಯದಲ್ಲಿ ತೃತೀಯ ಸಮ್ಮೇಳನ, ಗಂಗಾವತಿಯಲ್ಲಿ ಡಾ. ಜಾಜಿ ದೇವೇಂದ್ರಪ್ಪ, ಡಾ. ರಂಜಾನ್ ದರ್ಗಾ, ಗಂಗಾವತಿ ಪ್ರಾಣೇಶ್ ಸಾರಥ್ಯದಲ್ಲಿ ನಾಲ್ಕನೇ ಸಮ್ಮೇಳನ, ತುಮಕೂರು ಯಡಿಯೂರಿನಲ್ಲಿ ಡಾ. ರಂಜಾನ್ ದರ್ಗಾ, ಎಲ್.ಎನ್. ಮುಕುಂದರಾಜ್ ಸಾರಥ್ಯದಲ್ಲಿ ಅಖಿಲ ಕರ್ನಾಟಕ ಪ್ರಥನ ಶರಣ ಸಾಹಿತ್ಯ ಸಮ್ಮೇಳನ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಖ್ಯಾತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ, ರಂಜಾನ್ ದರ್ಗಾ ಸಾರಥ್ಯದಲ್ಲಿ ಅಖಿಲ ಕರ್ನಾಟಕ ಪ್ರಥನ ಶಿಶು ಸಾಹಿತ್ಯ ಸಮ್ಮೇಳನ, ಮುಂಬಯಿಯಲ್ಲಿ ಡಾ. ಎಚ್.ಎಚ್. ಅನುಪಮ, ಡಾ. ಜಿ.ಎನ್. ಉಪಾದ್ಯರವರ ಸಾರಥ್ಯದಲ್ಲಿ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹತ್ತು ಹಲವು ತಾಲೂಕು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ನೂರಾರು ಅಂತರ್ಜಾಲ ಆಧಾರಿತ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಕನ್ನಡ ಕೈಂಕರ್ಯ ಮಾಡುತ್ತಿದೆ” ಎಂದರು.
ವೇದಿಕೆಯಲ್ಲಿ ಅಧ್ಯಕ್ಷರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದಮೂರ್ತಿ, ಸಮಾಜ ಸೇವಕ ಪೃಥ್ವಿನಾಯಕ್ ಪತ್ರಕರ್ತ ಮೋಹನ್ ಕುಮಾರ್, ಕನ್ನಡ ಶಿಕ್ಷಕಿ ಅರ್ಚನಾ, ಮೋತಿಲಾಲ್ ನಾಯ್ಕ್ ಮುಖ್ಯ ಶಿಕ್ಷಕರು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರುಣ್ ಕುಮಾರ್ ಆಡಳಿತಾಧಿಕಾರಿಗಳು, ಪ್ರಸನ್ನಕುಮರ್ ಸುರೆ ಶಿಕ್ಷಕರು, ರಮ್ಯ ಮೇಡಂರವರಿಗೆ ಘಟಕದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅರ್ಚನಾ, ಮೋಹನ್, ಎ.ಎಚ್. ಬೋರೇಗೌಡ, ರಾಮಕೃಷ್ಣ, ಅಮೃತ್, ದರ್ಶನ್, ಯೋಗೀಶ್ ದಿಬ್ಬೂರು, ವೇದಿಕೆಯ ಪದಾಧಿಕಾರಿಗಳಾದ ಸೈಪುಲ್ಲಾ ಡಿ.ಎಂ., ಎಸ್. ಮಂಜುಳಾ ಕಾರ್ಯದರ್ಶಿಗಳು, ಗಂಗಾಧರ್ ತೇವರಿಮಠ್, ಕೆ.ಸಿ. ನಟರಾಜ್, ವಾಣಿಉಮೇಶ್, ಹರೀಶ್ ಕುಮಾರ್, ಅಮೃತ್, ವಿಷ್ಣುವರ್ಧನ್, ಶಾಂತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.