ಮುಡಿಪು : ನೃತ್ಯಲಹರಿ ನಾಟ್ಯಾಲಯ ಉಳ್ಳಾಲ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ‘ದಶಾವರಣ -2023’ ಕಾರ್ಯಕ್ರಮವು ದಿನಾಂಕ 24-09-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡುತ್ತಾ “ಸನಾತನ ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಸಮರ್ಥ ಕಲಾಕಾರರ ಅಗತ್ಯವೂ ಇದೆ. ಶಾಸ್ತ್ರೀಯ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿ, ಮುಂದುವರಿಸುವಲ್ಲಿ ರೇಷ್ಮಾ ನಿರ್ಮಲ್ ಭಟ್ ಅವರು ನೃತ್ಯಲಹರಿ ನಾಟ್ಯಾಲಯದ ಮೂಲಕ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ” ಎಂದು ಹೇಳಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ.ಸುವರ್ಣ ಮಾತನಾಡಿದರು. ಶಾರದಾ ಗಣಪತಿ ವಿದ್ಯಾಲಯದ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಪ್ರೊ.ಬಿ.ಕೆ. ಸರೋಜಿನಿ, ಪ್ರಾಧ್ಯಾಪಕ ಧನಂಜಯ ಕುಂಬ್ಳೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಬೋಳಿಯಾರ್, ವಿದ್ಯಾರತ್ನ ವಿದ್ಯಾ ಸಂಸ್ಥೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ವಿಜಯಲಕ್ಷ್ಮೀ ಪ್ರಸಾದ್ ರೈ, ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿ ಚಂದ್ರಹಾಸ್ ಶೆಟ್ಟಿ, ಸಪ್ತಸ್ವರ ಕಲಾತಂಡದ ಅಧ್ಯಕ್ಷರಾದ ರಾಮಚಂದ್ರ ಎಂ., ಯು.ಕೆ.ಪ್ರವೀಣ್, ನೃತ್ಯ ಲಹರಿ ನಾಟ್ಯಾಲಯದ ನಿರ್ದೇಶಕ ನಿರ್ಮಲ್ ಭಟ್, ನೃತ್ಯ ಗುರು ವಿದುಷಿ ರೇಷ್ಮಾ ನಿರ್ಮಲ್ ಭಟ್, ದಶಮ ಸಂಭ್ರಮಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಎ., ಕೋಶಾಧಿಕಾರಿ ಗಿರೀಶ್ ಕೈರಂಗಳ ಉಪಸ್ಥಿತರಿದ್ದರು.
“ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು” ಎಂಬ ಮಾತಿನಂತೆ ತನ್ನ ಜೀವನಕ್ಕೆ ದಾರಿ ದೀಪವಾದ ಮೊದಲ ಗುರು ತನ್ನ ತಾಯಿ ಶ್ರೀಮತಿ ಸರೋಜಾಕ್ಷಿ ಭಟ್ ಇವರಿಗೆ ಕಾರ್ಯಕ್ರಮದ ಪ್ರಾರಂಭದಲ್ಲಿ ರೇಶ್ಮಾನಿರ್ಮಲ್ ಭಟ್ ಮಾತೃವಂದನೆ ಸಲ್ಲಿಸಿದರು. ನಾಟ್ಯಾಚಾರ್ಯ ಉಳ್ಳಾಲ ಶ್ರೀ ಮೋಹನ್ ಕುಮಾರ್, ವಿದುಷಿ ರಾಜಶ್ರೀ ಉಳ್ಳಾಲ, ವಿದ್ವಾನ್ ಶ್ರೀ ಪ್ರಮೋದ್ ಕುಮಾರ್ ಉಳ್ಳಾಲ, ಶಿಕ್ಷಣ ಪ್ರೇಮಿ ಶ್ರೀ ಟಿ.ಜಿ.ರಾಜಾರಾಮ ಭಟ್, ವಿದ್ವಾಂಸ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಕೇರಳದ ನಾದಂ ಸಂಸ್ಥೆಯ ಸಂಸ್ಥಾಪಕ ಡಾ.ಜೋಯ್ ಕೃಷ್ಣ, ಇವರಿಗೆ ಗೌರವಾದರಗಳಿಂದ ಗೌರವಾಭಿನಂದನೆ ಮಾಡಿ ರೇಶ್ಮಾ ನಿರ್ಮಲ್ ಭಟ್ ಕೃತಾರ್ಥರಾದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಅವರ ಹೆತ್ತವರೂ ಸೇರಿ ಗುರು ರೇಶ್ಮಾನಿರ್ಮಲ್ ಇವರಿಗೆ ಗೌರವಾರ್ಪಣೆಯ ಮೂಲಕ ಗುರುವಂದನೆ ಸಲ್ಲಿಸಿದರು.
ವಿದುಷಿ ರಾಜಶ್ರೀ ಉಳ್ಳಾಲ ಇವರಿಂದ ‘ಹೆಣ್ಣು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪ್ರದರ್ಶನ ಕಲೆಗಳ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು. ದಶಮ ಸಂಭ್ರಮಾಚರಣೆ ಸಮಿತಿ ಅಧ್ಯಕ್ಷ ರವೀಂದ್ರ ರೈ ಹರೇಕಳ ಸ್ವಾಗತಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ವಂದಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ‘ನೂರು ಗೆಜ್ಜೆ ದಶ ಹೆಜ್ಜೆ’ ಭರತನಾಟ್ಯ ಮತ್ತು ‘ಗಂಗಾವತರಣ’ ನೃತ್ಯ ರೂಪಕ ನಡೆಯಿತು.