ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಪ್ರತಿಷ್ಟಿತ ದತ್ತಿ ಪ್ರಶಸ್ತಿಗಳಾದ ಡಾ. ರಾಜಕುಮಾರ್ ಸಂಸ್ಕೃತಿ ದತ್ತಿ ಮತ್ತು ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-04-2024ರ ಶನಿವಾರ ಸಂಜೆ ಗಂಟೆ 5-00ಕ್ಕೆ ನಡೆಯಲಿದೆ. ಖ್ಯಾತ ನಿರ್ಮಾಪಕರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆದ ಶ್ರೀ ಎಸ್.ಎ. ಚಿನ್ನೇಗೌಡ ಅವರು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಹಿರಿಯ ಕಲಾವಿದರೂ, ನಿರ್ಮಾಪಕರೂ ಆದ ಶ್ರೀ ರಮೇಶ್ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು ದತ್ತಿ ದಾನಿಗಳ ಪರವಾಗಿ ಎಸ್. ರಾಜಶೇಖರ್ ಅವರು ಉಪಸ್ಥಿತರಿರುತ್ತಾರೆ.
ಕನ್ನಡಿಗರ ಅಭಿಮಾನ ದೇವತೆ ಡಾ. ರಾಜ್ ಕುಮಾರ್ ಸರಳತೆ ಮತ್ತು ವಿನಯತೆಯ ಪ್ರತಿರೂಪದಂತಿದ್ದವರು. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಕೂಡ ಅಪಾರ ಕಾಳಜಿಯನ್ನು ಹೊಂದಿದವರು ತಮಗೆ ಭಾರತೀಯ ಚಿತ್ರರಂಗದ ಮೇರು ಪುರಸ್ಕಾರ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ದೊರಕಿದಾಗ ಅದರ ಇಡುಗಂಟನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯಾಗಿ ಸ್ಥಾಪಿಸಿದ್ದರು. ಪಾರ್ವತಮ್ಮ ರಾಜಕುಮಾರ್ ಅವರು ಇನ್ನೂ ನಾಲ್ಕು ಲಕ್ಷ ರೂಪಾಯಿಗಳನ್ನು ಸೇರಿಸಿ ದತ್ತಿಯ ಮಹತ್ವ ಹೆಚ್ಚಿಸಿದರು. 2023ನೆಯ ಸಾಲಿನ ‘ಡಾ. ರಾಜಕುಮಾರ್ ಸಂಸ್ಕೃತಿ ಪ್ರಶಸ್ತಿ’ಯನ್ನು ಖ್ಯಾತ ಹಾಸ್ಯಕಲಾವಿದ ಶ್ರೀ ಎಂ.ಎಸ್. ಉಮೇಶ್ ಅವರಿಗೆ ನೀಡಲಾಗುತ್ತಿದೆ. ರಾಜ್ ಕುಮಾರ್ ಅವರ ನಿಕಟ ಒಡನಾಡಿಯೂ ಆಗಿದ್ದ ಉಮೇಶ್ ರಂಗಭೂಮಿಯಿಂದ ಬಂದ ಪ್ರತಿಭೆ ಆರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ನೀಡಿದ ಮಹತ್ವದ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ಹಿರಿಯ ಲೇಖಕರೂ ಆದ ಪ್ರೊ. ಸಿ.ಹೆಚ್. ಮರಿದೇವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಪ್ರೊ. ಸಿ.ಹೆಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದಾರೆ. 2023ನೆಯ ಸಾಲಿನಲ್ಲಿ ಈ ಪ್ರಶಸ್ತಿಗಳನ್ನು ಕನ್ನಡ ಪರ ಹೋರಾಟಗಾರರು, ಬರಹಗಾರರು ಆಯುರ್ವೇದ ವೈದ್ಯರೂ ಆದ ಡಾ. ಬಿ. ನಂಜಂಡಸ್ವಾಮಿ, ‘ಮುದ್ದುರಾಮ’ನ ಖ್ಯಾತಿಯ ಬರಹಗಾರ, ದಕ್ಷ ಆಡಳಿತಗಾರ, ಪತ್ರಿಕೊದ್ಯಮಿ ಶ್ರೀ ಕೆ.ಸಿ. ಶಿವಪ್ಪ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಕೃಷಿಯ ಕಡೆಗೆ ಬಂದ ಪ್ರಗತಿಪರ ಕೃಷಿ ಮಹಿಳೆ ಡಾ. ಕವಿತಾ ಮಿಶ್ರ, ಸುಗಮ ಸಂಗೀತ ಗಾಯಕ ಸಂಘಟಕ ಶ್ರೀ ಮಲ್ಲಿಕಾರ್ಜನ ಕೆಂಕೆರೆ ಮತ್ತು ಖ್ಯಾತ ನಾಟಕಕಾರರಾದ ಪಿ.ಬಿ. ಧುತ್ತರಗಿ ಮತ್ತು ಸರೋಜಮ್ಮ ಧುತ್ತರಗಿ ಅವರಿಂದ ಸ್ಥಾಪಿತವಾದ ನಿಸರ್ಗ ಸಂಗೀತ ವಿದ್ಯಾಲಯಗಳಿಗೆ ನೀಡಲಾಗುತ್ತಿದೆ.