ಧಾರವಾಡ : ಧಾರವಾಡ ತಾಲೂಕು ಬ್ರಾಹ್ಮಣ ಸಭೆಯ ಸಹಭಾಗಿತ್ವದಲ್ಲಿ ಆಯೋಜಿಸಿದ ದಿ. ಬಿ. ಟಿ. ಕುಲಕರ್ಣಿ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 20-06-2024ರ ಗುರುವಾರದಂದು ಧಾರವಾಡದ ಮಾಳಮಡ್ಡಿಯ ಗಾಯತ್ರಿ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ‘ಸೃಜನಶೀಲ ಕಲೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದ ಸಾಹಿತಿ ಮತ್ತು ಚಿಂತಕರಾದ ಡಾ. ಕೃಷ್ಣ ಕಟ್ಟಿ “ನಮ್ಮ ಸಂಪ್ರದಾಯದಲ್ಲಿ 64 ಕಲೆಗಳಾದರೆ, ಜೈನ ಸಂಪ್ರದಾಯದಲ್ಲಿ 72 ಕಲೆಗಳು. ಅದರಲ್ಲಿಯೂ 7 ಕಲೆಗಳು, ಸಂಗೀತ, ನಾಟಕ, ನೃತ್ಯ, ಸಾಹಿತ್ಯ, ಕಾವ್ಯ, ಹೀಗೆ ಅತೀ ಮುಖ್ಯವಾದ ಕಲೆಗಳು. ನಮ್ಮ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸೃಜನಶೀಲ ಕಲೆ (ಕ್ರಾಫ್ಟ್ )ಕಾಣೆಯಾಗುತ್ತಿದೆ. ಸೃಜನ ಶೀಲ ಕಲೆಗಳು ಕೇವಲ ಮನೋರಂಜನೆ ವಸ್ತುಗಳಾಗಾದೆ, ಶಿಕ್ಷಣ, ಪ್ರತಿಭೆ, ಪರಿಶ್ರಮ, ಭಕ್ತಿ, ಸಂಸ್ಕಾರ ಹಾಗೂ ಸಂಸ್ಕೃತಿ ಎಲ್ಲವೂ ಒಂದೇ ದಾರದಲ್ಲಿ ಪೊಣಿಸಿದ ಮಣಿಗಳಂತಾದಾಗ ಮಾತ್ರ ಪರಿಶುದ್ಧ ಜ್ಞಾನ ಪ್ರಾಪ್ತವಾಗುತ್ತದೆ. ತಿಳಿನೀರಿನ ಸರೋವರದಂತೆ ಮನಕುಲಕ್ಕೆ ಹಿತವಾಗುವ ಸೃಜನಾತ್ಮಕ ಕಲೆಗಳು ದಾರಿದೀಪವಾಗಿ ಸೀಮಿತತ್ವವನ್ನು ದಾಟಿ ಹೊಸದನ್ನೇನಾದರೂ ಕೊಡಲು ಸಾಧ್ಯ. ಸಂಸ್ಕೃತಿ ಜೊತೆಯಲ್ಲಿ ಶಿಕ್ಷಣ ಮತ್ತು ಕೌಶಲ್ಯ ಬೆರೆತಾಗ ಮಾತ್ರ ಜ್ಞಾನ ಸಿದ್ಧಿಯಾಗಿ, ಭೋಗ ತನ್ನಿಂದಾತಾನೆ ಬೆನ್ನಟ್ಟಿಕೊಂಡು ಬರುವುದು”. ಎಂಬುದಾಗಿ ಅಭಿಪ್ರಾಯಪಟ್ಟರು.
ಉಪಾಧ್ಯಕ್ಷರಾದ ರಮೇಶ ಪರ್ವತೀಕರ ಪ್ರಾಸ್ತವಿಕವಾಗಿ ಮಾತನಾಡುತ್ತಾ, ತಮ್ಮ ತಂದೆಯ ಪ್ರಾಮಾಣಿಕ, ನೇರ ಹಾಗೂ ನಿಷ್ಠುರ ಆದರ್ಶವನ್ನು ನೆನಪಿಸಿಕೊಂಡರು. ಅಧ್ಯಕ್ಷರಾದ ಆರ್. ಡಿ. ಕುಲಕರ್ಣಿ ಮಾತನಾಡಿ “ಸೃಜನ ಶೀಲ ಕಲೆಗಳು ನಮ್ಮೆಲ್ಲರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ಉಳಿಸಿ ಬೆಳಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕು.” ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಶ್ರೀಮತಿ ಅನಿತಾ ಭಟ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಮಾಧವಿ ಗುಡಿ ಅತಿಥಿಗಳನ್ನು ಸ್ವಾಗತಿಸಿದರು. ಸುನೀತಾ ಹೆಗಡೆ ಮುಖ್ಯ ಅಥಿತಿಗಳನ್ನು ಪರಿಚಿಯಸಿ, ವಿದ್ಯಾ ಕದರಮಂಡಲಗಿ ನಿರೂಪಿಸಿ, ರಾಜುಪಾಟೀಲ್ ಕುಲಕರ್ಣಿ ಧನ್ಯವಾದ ಸಮರ್ಪಿಸಿದರು.